ಕುಮಟಾ: ಒಂದು ಕಾಲದಲ್ಲಿ ಪಟ್ಟಣದ ಕೆಲವರ ಪಾಲಿಗೆ ಕಸದ ತೊಟ್ಟಿಯಾಗಿ ಬಳಕೆಯಾಗುತ್ತಿದ್ದ ಸಮೀಪದ ಮೂರೂರು ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ನೂರಾರು ಹೆಕ್ಟೇರ್ ಜಾಗಕ್ಕೆ ಈಗ ಇಲಾಖೆ ನಿಧಾನವಾಗಿ ಬೇಲಿ ಅಳವಡಿಸಿ ರಕ್ಷಿಸುವ ಕ್ರಮ ಕೈಕೊಳ್ಳಲಾರಂಭಿಸಿದೆ.
ಪಟ್ಟಣದಲ್ಲಿ ಹಿಂದೆ ಪುರಸಭೆ ಮನೆ ಮನೆಯಿಂದ ಕಸ ಸಂಗ್ರಹಿಸುವುದನ್ನು ಆರಂಭಿಸುವ ಮೊದಲು ಜನರು ಸಂಜೆ ಅಥವಾ ಬೆಳಗಿನ ಹೊತ್ತು ಮೂರೂರು ರಸ್ತೆಯಲ್ಲಿರುವ ಕಾಡಿನಲ್ಲಿ ಕಸ ಎಸೆಯುತ್ತಿದ್ದರು. ಪುರಸಭೆಯಿಂದ ಕಸ ಸಂಗ್ರಹ ಆರಂಭಗೊಂಡ ನಂತರ ಇಲ್ಲಿ ಕಸ ಹಾಕುವುದು ಕೊಂಚ ಕಡಿಮೆಯಾದರೂ ಇನ್ನೂ ಪೂರ್ತಿಯಾಗಿ ನಿಂತಿರಲಿಲ್ಲ.
‘ಪಟ್ಟಣದಿಂದ ಒಂದೇ ಕಿಲೊ ಮೀಟರ್ ದೂರವಿರುವುದರಿಂದ ಕೆಲವರು ನಿತ್ಯ ಇಲ್ಲಿ ಬಂದು ಮದ್ಯಪಾನ ಮಾಡುತ್ತಿದ್ದಾರೆ. ಇಲ್ಲಿ ಕಸ ತಂದು ಹಾಕುವುದು ಮುಂದುವರಿದಿದೆ. ತಾಲ್ಲೂಕಿನ ಮೂರೂರು ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಯಡೆ ಕಾರ್ಯಕ್ರಮದಲ್ಲಿ ಈ ಜಾಗ ರಕ್ಷಿಸುವ ಬಗ್ಗೆ ನಿರ್ಣಯ ಕೈಕೊಳ್ಳಲಾಗಿತ್ತು. ಹಂತ ಹಂತವಾಗಿ ಜಾಗಕ್ಕೆ ಬೇಲಿ ಹಾಕಿ ರಕ್ಷಿಸುವ ಕಾರ್ಯ ಮುಂದುವರಿಸಲಾಗಿದೆ’ ಎಂದು ಕುಮಟಾ ಆರ್.ಎಫ್.ಒ ಎಸ್.ಟಿ.ಪಟಗಾರ ಹೇಳಿದರು.
‘ಪಟ್ಟಣದ ಸಿದ್ದನಬಾವಿಯಿಂದ ಮೂರೂರು ರಸ್ತೆಯಲ್ಲಿರುವ ಹೆಗಡೆ ಕ್ರಾಸ್ ವರೆಗಿನ ಸರ್ವೆ ನಂಬರ್ 108ರಲ್ಲಿ ಇಲಾಖೆಯ 350 ಹೆಕ್ಟೇರ್ ಅರಣ್ಯ ಪ್ರದೇಶ ಇದೆ. ಹಿಂದೆ ಈ ಜಾಗದ ಕೆಲ ಪ್ರದೇಶದಲ್ಲಿ ಇಲಾಖೆಯ ಕಾಂಪಾ ಯೋಜನೆಯಡಿ ಆವರಣ ನಿರ್ಮಿಸಿ ಗಿಡಗಳನ್ನು ಬೆಳೆಸಿದ್ದೇವೆ. ಅವುಗಳನ್ನು ಉಳಿಸಿಕೊಳ್ಳುವ ಜತೆಗೆ ಪ್ರದೇಶ ಅತಿಕ್ರಮಣವಾಗುವುದನ್ನೂ ತಡೆಯಲು ಬೇಲಿ ಹಾಕಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.