ADVERTISEMENT

ಬ್ಯಾಂಕ್‌ನಲ್ಲಿ ₹1.50 ಕೋಟಿ ಅವ್ಯಹಾರ ಆರೋಪ: ಅಧಿಕಾರಿ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2022, 12:27 IST
Last Updated 23 ಏಪ್ರಿಲ್ 2022, 12:27 IST
ಭಟ್ಕಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಝಾರ್ ಶಾಖೆ
ಭಟ್ಕಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಝಾರ್ ಶಾಖೆ   

ಭಟ್ಕಳ: ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಝಾರ್ ಶಾಖೆಯಲ್ಲಿ ಅಂದಾಜು ₹ 1.50 ಕೋಟಿ ಅವ್ಯವಹಾರ ನಡೆದಿರುವ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.

ಈ ಹಿಂದೆ ಶಾಖಾ ವ್ಯವಸ್ಥಾಪಕರಾಗಿದ್ದ ಮಂಗಳೂರಿನ ಕಾವೂರು ಬೊಳ್ಪುಗಡ್ಡೆ ನಿವಾಸಿ ಅನುಪ್ ದಿನಕರ ಪೈ ವಿರುದ್ಧ ಆರೋಪ ಕೇಳಿಬಂದಿದೆ. ಪ್ರಕರಣ ಬಯಲಾಗುತ್ತಿದ್ದಂತೆ ಅವರು ನಾಪತ್ತೆಯಾಗಿದ್ದಾರೆ.

2019ರ ಫೆ.11ರಿಂದ 2022ರ ಏಪ್ರಿಲ್ ಅವಧಿಯಲ್ಲಿ, ಬ್ಯಾಂಕಿನ ಗ್ರಾಹಕರೊಂದಿಗೆ ಒಳಸಂಚು ಮಾಡಿಕೊಂಡು ಬ್ಯಾಂಕಿನ ‘ಸಿಸ್ಟಮ್ ಸಸ್ಪೆನ್ಸ್’ ಖಾತೆಗೆ ₹ 1.50 ಕೋಟಿ ಖರ್ಚು ತೋರಿಸಿದ್ದಾರೆ. ಆ ಹಣವನ್ನು ಬ್ಯಾಂಕಿನ ಗ್ರಾಹಕರ ಖಾತೆಗೆ ಜಮೆ ಮಾಡಿ ದುರುಪಯೋಗ ಪಡಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅವರ ವಿರುದ್ಧ ಪ್ರಸ್ತುತ ಬಝಾರ್ ಶಾಖೆಯ ವ್ಯವಸ್ಥಾಪಕ ರಾಘವೇಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ADVERTISEMENT

‘ಬ್ಯಾಂಕ್ ಶಾಖೆಯಲ್ಲಿ ಅವ್ಯವಹಾರ ನಡೆದಿರುವುದು ಮೇಲಧಿಕಾರಿಗಳ ತಪಾಸಣೆಯಿಂದ ಗೊತ್ತಾಗಿದೆ. ಇದರಲ್ಲಿ ಗ್ರಾಹಕರಿಗೆ ಯಾವುದೇ ಮೋಸವಾಗಿಲ್ಲ. ಬ್ಯಾಂಕಿನ ಹಣವನ್ನು ದುರುಪಯೋಗ ಮಾಡಲಾಗಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ’ ಎಂದು ರಾಘವೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ ಮುಖ್ಯ ಅಂಚೆ ಕಚೇರಿಯ ಪಕ್ಕದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ಶಾಖೆಯಲ್ಲಿ ಅವ್ಯವಹಾರವಾಗಿತ್ತು. ₹ 50 ಲಕ್ಷ ಅಕ್ರಮಕ್ಕೆ ಸಂಬಂಧಿಸಿ ತನಿಖೆ ನಡೆಸಿದ್ದ ಬ್ಯಾಂಕ್ ಅಧಿಕಾರಿಗಳು, ನಗದು ವಿಭಾಗದ ವ್ಯವಸ್ಥಾಪಕರನ್ನು ಸೇವೆಯಿಂದ ವಜಾಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.