ADVERTISEMENT

ಕಾರವಾರದಲ್ಲಿ ‘ಬಿ.ಎಚ್’ ಸರಣಿಯಲ್ಲಿ ಮೊದಲ ವಾಹನ ನೋಂದಣಿ

ದೇಶದಾದ್ಯಂತ ಒಂದೇ ಸರಣಿಯ ನೋಂದಣಿ ಸಂಖ್ಯೆಯಲ್ಲಿ ಸಂಚಾರಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 19:30 IST
Last Updated 5 ಜನವರಿ 2022, 19:30 IST

ಕಾರವಾರ: ಕೇಂದ್ರ ಭೂ ಸಾರಿಗೆ ಸಚಿವಾಲಯವು ಜಾರಿಗೆ ತಂದಿರುವ ‘ಬಿ.ಎಚ್’ (ಭಾರತ್) ಸರಣಿಯಲ್ಲಿ ವಾಹನಗಳ ನೋಂದಣಿಯು ಜಿಲ್ಲೆಯಲ್ಲೂ ಆರಂಭವಾಗಿದೆ. ಕಾರವಾರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್.ಟಿ.ಒ) ಬುಧವಾರ ಈ ಸರಣಿಯಲ್ಲಿ ಮೊದಲ ಕಾರು ನೋಂದಣಿಯಾಯಿತು.

ಕೈಗಾದ ಅಣು ವಿದ್ಯುತ್ ಸ್ಥಾವರದ ಉದ್ಯೋಗಿ ಕಿಶೋರ್ ಕಾಂಬ್ಳೆ ಎಂಬುವವರು, ಈ ಸರಣಿಯಲ್ಲಿ ವಾಹನ ನೋಂದಣಿ ಮಾಡಿಸಿಕೊಂಡ ಜಿಲ್ಲೆಯ ಮೊದಲಿಗರಾದರು.

ಏನಿದು ಬಿ.ಎಚ್ ಸರಣಿ?:

ADVERTISEMENT

ಪದೇ ಪದೇ ಹಲವು ರಾಜ್ಯಗಳಿಗೆ ವರ್ಗಾವಣೆಯಾಗುವ ಕೇಂದ್ರ ಸರ್ಕಾರಿ ನೌಕರರು ಹಾಗೂ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಇದರಿಂದ ಪ್ರಯೋಜನವಾಗಲಿದೆ. ಈಗಿನ ಸಾರಿಗೆ ನಿಯಮದಂತೆ ಒಂದು ರಾಜ್ಯದಲ್ಲಿ ನೋಂದಣಿಯಾದ ವಾಹನವು ಮತ್ತೊಂದು ರಾಜ್ಯದಲ್ಲಿ ಹಳೆಯ ನೋಂದಣಿ ಸಂಖ್ಯೆಯಲ್ಲಿ ಗರಿಷ್ಠ ಒಂದು ವರ್ಷ ಸಂಚರಿಸಲು ಅವಕಾಶವಿದೆ. ಬಳಿಕ, ಆ ರಾಜ್ಯದ ನಿಯಮಕ್ಕೆ ಅನುಗುಣವಾಗಿ ತೆರಿಗೆ ಪಾವತಿಸಿ ವಾಹನವನ್ನು ಪುನಃ ನೋಂದಣಿ ಮಾಡಿಸಬೇಕು.

ಉದಾಹರಣೆಗೆ, ಕರ್ನಾಟಕದಲ್ಲಿ ಕಾರು ಖರೀದಿಸಿದ್ದ ಬ್ಯಾಂಕ್ ಉದ್ಯೋಗಿಯೊಬ್ಬರು ಗುಜರಾತ್‌ಗೆ ವರ್ಗಾವಣೆಯಾಗುತ್ತಾರೆ. ಅವರ ಕಾರು ‘ಕೆ.ಎ’ ಸರಣಿಯಲ್ಲಿ ನೋಂದಣಿಯಾಗಿರುತ್ತದೆ. ಒಂದು ವರ್ಷದ ಬಳಿಕ ಅವರು ಗುಜರಾತ್‌ನಲ್ಲಿ ‘ಜಿ.ಜೆ’ ಸರಣಿಯಲ್ಲಿ ಮರು ನೋಂದಣಿ ಮಾಡಿಸಬೇಕು. ಕರ್ನಾಟಕದಲ್ಲಿ ರಸ್ತೆ ತೆರಿಗೆ ಪಾವತಿಸಿದ್ದರೂ ಅವರು ವರ್ಗಾವಣೆಯಾದ ರಾಜ್ಯದಲ್ಲಿ ಪುನಃ ತೆರಿಗೆ ನೀಡಬೇಕಾಗುತ್ತದೆ. ಇದರಿಂದ ವಾಹನಗಳ ಮಾಲೀಕರಿಗೆ ಆರ್ಥಿಕವಾಗಿ ಹೊರೆಯಾಗುತ್ತದೆ.

ಇದನ್ನು ತಪ್ಪಿಸಲು ಕೇಂದ್ರ ಸರ್ಕಾರವು ಮೂರು ತಿಂಗಳ ಹಿಂದೆ ಒಂದೇ ತೆರಿಗೆ ಪದ್ಧತಿಯಲ್ಲಿ ‘ಬಿ.ಎಚ್’ ಸರಣಿಯನ್ನು ಪರಿಚಯಿಸಿತ್ತು. ಇದರ ಪ್ರಕಾರ ಬಿಳಿಯ ಫಲಕದಲ್ಲಿ, ಕಪ್ಪು ಅಕ್ಷರಗಳಲ್ಲಿ ನೋಂದಣಿಯ ವರ್ಷ ಮೊದಲಿಗೆ ಇರಲಿದೆ. ನಂತರ ‘ಬಿ.ಎಚ್’, ಅದರ ಸಮೀಪದಲ್ಲಿ ನೋಂದಣಿ ಸಂಖ್ಯೆ ಹಾಗೂ ಸರಣಿ ಅಕ್ಷರ ಇರಲಿದೆ. (ಉದಾ: 22 BH 1234 A).

* ‘ಬಿ.ಎಚ್’‍ ಸರಣಿಯಲ್ಲಿ, ಕಾರವಾರ ಆರ್.ಟಿ.ಒ ಕಚೇರಿಯಲ್ಲಿ ಬುಧವಾರ ಕಾರೊಂದು ನೋಂದಣಿಯಾಗಿದೆ. ಇದು ಉತ್ತರ ಕನ್ನಡದಲ್ಲಿ ಮೊದಲ ನೋಂದಣಿಯಾಗಿದೆ.

– ರಾಮಕೃಷ್ಣ ರೈ, ಕಾರವಾರ ಆರ್.ಟಿ.ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.