ADVERTISEMENT

ಕುಮಟಾ | ಇಲ್ಲದ ಶಿಥಲೀಕರಣ ಘಟಕ: ಮೀನು ಸಂಗ್ರಹಣೆಗೆ ಸಂಕಟ

ಅಗ್ಗದ ಬೆಲೆಗೆ ತಾಜಾ ಮೀನುಗಳನ್ನು ಮಾರುವ ಅನಿವಾರ್ಯತೆಯಲ್ಲಿ ಮೀನುಗಾರರು

ಎಂ.ಜಿ.ನಾಯ್ಕ
Published 14 ಸೆಪ್ಟೆಂಬರ್ 2025, 4:35 IST
Last Updated 14 ಸೆಪ್ಟೆಂಬರ್ 2025, 4:35 IST
<div class="paragraphs"><p>ಕುಮಟಾ ಪಟ್ಟಣದ ವನ್ನಳ್ಳಿ ಸಮುದ್ರ ತೀರದಲ್ಲಿ ರಾತ್ರಿ ಹಿಡಿದ ತಾಜಾ ಬಂಗಡೆ ಮೀನು.</p></div>

ಕುಮಟಾ ಪಟ್ಟಣದ ವನ್ನಳ್ಳಿ ಸಮುದ್ರ ತೀರದಲ್ಲಿ ರಾತ್ರಿ ಹಿಡಿದ ತಾಜಾ ಬಂಗಡೆ ಮೀನು.

   

ಕುಮಟಾ: ತಾಲ್ಲೂಕಿನ ಮೀನುಗಳು ಕೆಡದಂತೆ ದಾಸ್ತಾನಿಡುವ ಶೀತಲೀಕರಣ ಘಟಕ (ಕೋಲ್ಡ್ ಸ್ಟೊರೇಜ್) ವ್ಯವಸ್ಥೇ ಇಲ್ಲದ ಪರಿಣಾಮ ಮೀನುಗಾರರು ತೊಂದರೆಗೆ ಸಿಲುಕಿದ್ದಾರೆ.

‘ಸಂಜೆಯ ಬಳಿಕ ಹಿಡಿದು ತಂದ ಮೀನು ಮಾರಾಟ ಮಾಡಲು ಮರುದಿನದವರೆಗೆ ಕಾಯಬೇಕಾಗುತ್ತದೆ. ತಾಜಾತನ ಉಳಿಸಿಕೊಳ್ಳಲು ಮೀನುಗಳನ್ನು ಸುರಕ್ಷಿತವಾಗಿ ಇಡಲು ಶಿಥಲೀಕರಣ ಘಟಕ ಇಲ್ಲದೆ, ರಾತ್ರಿಯೇ ಸಿಕ್ಕಷ್ಟು ದರಕ್ಕೆ ಮೀನು ಮಾರಾಟ ಮಾಡುವ ಅನಿವಾರ್ಯತೆ ಇದೆ’ ಎಂಬುದಾಗಿ ಮೀನುಗಾರರು ಅಳಲು ತೋಡಿಕೊಳ್ಳುತ್ತಾರೆ.

ವನ್ನಳ್ಳಿ, ಅಳ್ವೆದಂಡೆ, ಧಾರೇಶ್ವರ, ಹೊಲನಗದ್ದೆ, ಕಾಗಾಲಗಳಲ್ಲಿ 25 ಅಶ್ವ ಸಾಮರ್ಥ್ಯದ ಎಂಜಿನ್ ದೋಣಿಗಳಲ್ಲಿ ಸಂಜೆ ಹೊತ್ತು ತಾಜಾ ಮೀನು ಹಿಡಿದು ತರುವ ಮೀನುಗಾರರು ಕಷ್ಟಪಟ್ಟು ದುಡಿದರೂ ಲಾಭ ಗಳಿಸಲು ಸಾಧ್ಯವಾಗುತ್ತಿಲ್ಲ. ಎಷ್ಟೋ ಸಲ ಕುಮಟಾ ಮೀನು ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಹೆಚ್ಚು ಮೀನು ಬಂದಾಗ ಮೀನು ಮಾರಾಟ ಮಾಡುವವರು ಮೀನು ಕೊಂಡುಕೊಳ್ಳಿ ಎಂದು ಗ್ರಾಹಕರ ಬಳಿ ಬೇಡಿಕೊಳ್ಳುವಂಥ ಸ್ಥಿತಿ ನಿರ್ಮಾಣವಾಗುತ್ತದೆ ಎನ್ನುತ್ತಾರೆ ಮೀನುಗಾರರು.

‘ಒಂದೆರಡು ದಿನದ ಹಿಂದೆ ಕುಮಟಾ ಮಾರುಕಟ್ಟೆಯಲ್ಲಿ ಮೀನುಗಾರರು ₹100ಕ್ಕೆ 40 ತಾಜಾ ಬಂಗಡೆ ಮೀನು ಮಾರಾಟ ಮಾಡಿದ್ದಾರೆ. ಮನೆಗಳಲ್ಲಿ ರೆಫ್ರಜಿರೇಟರ್ ಇರುವ ಹಾಗೆ ಕುಮಟಾ ಮೀನು ಮಾರುಕಟ್ಟೆ ಆವರಣದಲ್ಲಿ ಒಂದು ಪುಟ್ಟ ಕೋಲ್ಡ್ ಸ್ಟೋರೇಜ್ ಇದ್ದರೂ ಮಾರಾಟವಾಗದೆ ಇರುವ ಮೀನುಗಳನ್ನು ಸಂರಕ್ಷಿಸಿಡಬಹುದು. ಆದರೆ, ಮಾರಾಟವಾಗದೆ ಉಳಿಯುವ ಮೀನುಗಳನ್ನು ವ್ಯವಸ್ಥೆ ಸರಿಯಿಲ್ಲದ ಮಂಜುಗಡ್ಡೆ ಪೆಟ್ಟಿಗೆಗಳಲ್ಲಿ ಮೀನುಗಾರರೇ ಇಟ್ಟುಕೊಂಡು ಮರುದಿನ ಮಾರಾಟ ಮಾಡಬೇಕಾಗಿದೆ’ ಎಂದು ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಜೈವಿಠ್ಠಲ ಕುಬಲ ಸಮಸ್ಯೆ ವಿವರಿಸಿದರು.

‘ಮೀನುಗಾರ ಉತ್ಪಾದಕ ಕಂಪನಿಗಳು (ಎಫ್.ಪಿ.ಒ) ಲೀಸ್ ಪಡೆದ ಜಾಗದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಿಸಲು ಮುಂದೆ ಬಂದರೆ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಆರ್ಥಿಕ ನೆರವು ನೀಡುತ್ತದೆ’ ಎಂದು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಕಾರ್ಯಕ್ರಮ ಅಧಿಕಾರಿ ನಾಗರಾಜ ಕಲ್ಮನೆ ಮಾಹಿತಿ ನೀಡಿದರು.

ಪಿಎಂ ಮತ್ಸ್ಯ ಸಂಪದ ಯೋಜನೆಯಡಿ 50 ರಿಂದ 10 ಟನ್ ಸಾಮರ್ಥ್ಯದ ವರೆಗಿನ ಕೋಲ್ಡ್ ಸ್ಟೊರೇಜ್ ನಿರ್ಮಾಣಕ್ಕೆ ಪುರುಷರಿಗೆ ಶೇ 40 ಹಾಗೂ ಮಹಿಳೆಯರಿಗೆ ಶೇ 60 ರಷ್ಟು ಸರ್ಕಾರದ ಸಹಾಯಧನ ಲಭ್ಯವಿದೆ. ಮೀನುಗಾರರು ಈ ಸೌಲಭ್ಯ ಪಡೆಯಲು ಅವಕಾಶವಿದೆ
ಪ್ರತೀಕ್ ಶೆಟ್ಟಿ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ

ದರ ಇಳಿಸುವ ಮಧ್ಯವರ್ತಿಗಳು

‘ರಾತ್ರಿ ಹೊತ್ತಲ್ಲಿ ಹಿಡಿಯುವ ಮೀನು ಮಾರುಕಟ್ಟೆಗೆ ಒಯ್ದು ಮಾರಾಟವಾಗದಿದ್ದರೆ ಅಗ್ಗದ ದರಕ್ಕೆ ಮಧ್ಯವರ್ತಿಗಳು ಕೇಳುವ ಬೆಲೆಗೆ ಮಾರಾಟ ಮಾಡಿ ಮೀನುಗಾರರು ಕೈತೊಳೆದುಕೊಳ್ಳಬೇಕಾದ ಸ್ಥಿತಿ ಉಂಟಾಗಿದೆ. ಶಿಥಲೀಕರಣ ಘಟಕ ಇಲ್ಲದಿರುವುದನ್ನು ಅನುಕೂಲವಾಗಿಸಿಕೊಂಡ ಕೆಲ ಮಧ್ಯವರ್ತಿಗಳು ಕುಮಟಾದಲ್ಲಿ ಕಡಿಮೆ ದರಕ್ಕೆ ಮೀನು ಖರೀದಿಸಿ ಘಟ್ಟದ ಮೇಲಿನ ತಾಲ್ಲೂಕುಗಳಾದ ಹಳಿಯಾಳ ದಾಂಡೇಲಿ ಶಿರಸಿ ಯಲ್ಲಾಪುರ ಸಿದ್ದಾಪುರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಮಾರಾಟ ಮಾಡಿ ಲಾಭ ಗಳಿಸುತ್ತಾರೆ’ ಎಂಬುದು ಹಲವು ಮೀನುಗಾರರ ದೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.