ADVERTISEMENT

ಕಾರವಾರ: ಕಡಲ ಮಕ್ಕಳಿಗೆ ವರವಾಗುವುದೇ ಬಜೆಟ್?

ಬಗೆಹರಿಯದ ಸಮಸ್ಯೆಗಳ ನಡುವೆ ಮೀನುಗಾರಿಕೆ: ಹಲವು ಸೌಕರ್ಯಗಳಿಗೆ ಬೇಡಿಕೆ

ಗಣಪತಿ ಹೆಗಡೆ
Published 25 ಜನವರಿ 2026, 3:16 IST
Last Updated 25 ಜನವರಿ 2026, 3:16 IST
ಕಾರವಾರ ತಾಲ್ಲೂಕಿನ ಮುದಗಾ ಬಂದರಿನಲ್ಲಿ ಪರ್ಸಿನ್ ಬೋಟ್ ಹೂಳಿನಲ್ಲಿ ಸಿಲುಕಿಕೊಂಡಿತ್ತು.
(ಸಂಗ್ರಹ ಚಿತ್ರ)
ಕಾರವಾರ ತಾಲ್ಲೂಕಿನ ಮುದಗಾ ಬಂದರಿನಲ್ಲಿ ಪರ್ಸಿನ್ ಬೋಟ್ ಹೂಳಿನಲ್ಲಿ ಸಿಲುಕಿಕೊಂಡಿತ್ತು. (ಸಂಗ್ರಹ ಚಿತ್ರ)   

ಕಾರವಾರ: ರಾಜ್ಯದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಿರುವಲ್ಲಿ ಜಿಲ್ಲೆಯ ಮೀನುಗಾರಿಕೆ ಕ್ಷೇತ್ರವೂ ಮಹತ್ವದ ಪಾತ್ರ ವಹಿಸಿದೆ. ಹೂಳಿನ ಸಮಸ್ಯೆ, ದುಬಾರಿ ಸೀಮೆಎಣ್ಣೆ ದರ, ಸೇರಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಮೀನುಗಾರರು ರಾಜ್ಯ ಬಜೆಟ್‌ನಲ್ಲಿ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

160 ಕಿ.ಮೀ ಉದ್ದದ ಕಡಲತೀರ ಹೊಂದಿರುವ ಇಲ್ಲಿ 8 ಮೀನುಗಾರಿಕೆ ಬಂದರುಗಳಿವೆ. ಅವುಗಳ ಪೈಕಿ ಬೈತಕೋಲ, ಭಟ್ಕಳ ಹೊರತುಪಡಿಸಿದರೆ ಉಳಿದ ಬಂದರುಗಳಲ್ಲಿ ಹೂಳಿನ ಸಮಸ್ಯೆ ಇದೆ. ಪರ್ಸಿನ್, ಟ್ರಾಲರ್ ದೋಣಿಗಳು ಹೂಳಿನಲ್ಲಿ ಸಿಲುಕುತ್ತಿರುವ ಘಟನೆ ಹೆಚ್ಚುತ್ತಿದೆ. ದೋಣಿ ಮೇಲಕ್ಕೆತ್ತಲು ಲಕ್ಷಾಂತರ ವ್ಯಯಿಸಬೇಕಾಗುತ್ತಿದೆ. ದೋಣಿ ದುರಸ್ತಿಗೂ ಹೆಚ್ಚು ಖರ್ಚು ಬರುತ್ತಿದೆ ಎಂಬುದು ಮೀನುಗಾರರ ದೂರು.

‘ಮೀನುಗಾರಿಕೆ ಬಂದರುಗಳ ಅಭಿವೃದ್ಧಿ ಬಗ್ಗೆ ಈ ಹಿಂದಿನ ಹಲವು ಬಜೆಟ್‌ಗಳಲ್ಲಿ ಯೋಜನೆಗಳನ್ನು ಘೋಷಿಸಲಾಗಿದೆ. ಅವುಗಳಲ್ಲಿ ಕಾರ್ಯರೂಪಕ್ಕೆ ಬಂದವು ವಿರಳ. ಸಮಸ್ಯೆಗಳು ಜ್ವಲಂತವಾಗಿವೆ. ವರ್ಷದಿಂದ ವರ್ಷಕ್ಕೆ ದೋಣಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ಪೂರಕವಾಗಿ ಬಂದರುಗಳಲ್ಲಿ ಸೌಕರ್ಯ ವೃದ್ಧಿಸಿಲ್ಲ. ಹಲವು ಬಂದರುಗಳಲ್ಲಿ ಸೌಕರ್ಯವೇ ಇಲ್ಲ’ ಎನ್ನುತ್ತಾರೆ ಪರ್ಸಿನ್ ಬೋಟ್ ಮಾಲೀಕ ಸುಭಾಷ ದುರ್ಗೇಕರ.

ADVERTISEMENT

‘ಶರಾವತಿ ಅಳಿವೆ ಸಮೀಪದಲ್ಲಿರುವ ಹೊನ್ನಾವರ ಮೀನುಗಾರಿಕೆ ಬಂದರು ಹೂಳಿನ ಸಮಸ್ಯೆಯಿಂದ ನಲುಗಿದೆ. ಪ್ರತಿ ವರ್ಷ ಇಲ್ಲಿ ದೋಣಿ ಮುಳುಗುವ ಅವಘಡ ಘಟಿಸುತ್ತಿದೆ. ತದಡಿಯಲ್ಲೂ ಇಂತದ್ದೇ ಸಮಸ್ಯೆ ಇದೆ. ಬಂದರುಗಳ ಹೂಳೆತ್ತಲು ದೊಡ್ಡ ಮೊತ್ತದ ಅಗತ್ಯವಿರುವ ಕಾರಣದಿಂದ ಬಜೆಟ್‌ನಲ್ಲಿ ಅನುದಾನ ಘೋಷಿಸಬೇಕು’ ಎಂಬುದು ಮೀನುಗಾರರ ಒತ್ತಾಯ.

‘ಮತ್ಸ್ಯಾಶ್ರಯ ಯೋಜನೆಯಡಿ ಮೀನುಗಾರರಿಗೆ ಮನೆ ನಿರ್ಮಾಣಕ್ಕೆ ನೀಡುತ್ತಿರುವ ಅನುದಾನ ಹೆಚ್ಚಿಸಬೇಕು. ಬಂದರುಗಳಲ್ಲಿ ದೋಣಿ ದುರಸ್ತಿ ಶೆಡ್ ನಿರ್ಮಿಸಿಕೊಡುವ ಜೊತೆಗೆ, ಕಡಲತೀರಗಳಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ದೋಣಿಗಳು, ಸಲಕರಣೆಗಳನ್ನು ಇರಿಸಲು ವ್ಯವಸ್ಥಿತ ಶೆಡ್ ನಿರ್ಮಿಸಬೇಕು. ಬಂದರುಗಳಿಗೆ ಸಂಪರ್ಕ ರಸ್ತೆಗಳನ್ನು ನಿರ್ಮಿಸಲು ಹೆಚ್ಚಿನ ಅನುದಾನ ಮೀಸಲಿರಿಸಬೇಕು’ ಎಂದು ಮೀನುಗಾರ ಮುಖಂಡ ವಿನಾಯಕ ಹರಿಕಂತ್ರ ಹೇಳಿದರು.

‘ಬಜೆಟ್ ತಯಾರಿಕೆಗೆ ಮುನ್ನ ಮೀನುಗಾರಿಕೆ ಇಲಾಖೆ ಮೀನುಗಾರರ ಅಭಿಪ್ರಾಯ ಆಲಿಸಿ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕಿತ್ತು. ಜಿಲ್ಲೆಯವರೇ ಆಗಿರುವ ಮಂಕಾಳ ವೈದ್ಯ ಮೀನುಗಾರಿಕೆ ಸಚಿವರಿದ್ದಾರೆ. ಅವರು ಇನ್ನೂ ಬೈತಕೋಲ ಸೇರಿದಂತೆ ಪ್ರಮುಖ ಮೀನುಗಾರಿಕೆ ಬಂದರುಗಳಿಗೆ ಸಚಿವರಾದ ಬಳಿಕ ಭೇಟಿ ನೀಡಿಲ್ಲ. ಸಮಸ್ಯೆ, ಸೌಕರ್ಯಗಳ ಮಾಹಿತಿ ಪಡೆದಿಲ್ಲ’ ಎಂದೂ ದೂರಿದರು.

ನಾಡದೋಣಿ ಮೀನುಗಾರರಿಗೆ ನೀಡುವ ಸೀಮೆಎಣ್ಣೆ ದರ ₹35ರಿಂದ ₹62ಕ್ಕೆ ಏಕಾಏಕಿ ಏರಿಕೆಯಾಗಿದೆ. ರಾಜ್ಯ ಸರ್ಕಾರ ಸೀಮೆಎಣ್ಣೆ ದರ ಇಳಿಸುವ ಜೊತೆಗೆ ಸಹಾಯಧನದಲ್ಲಿ ತನ್ನ ಪಾಲನ್ನು ಹೆಚ್ಚಿಸಲಿ
ಸೋಮನಾಥ ಮೊಗೇರ ಸಾಂಪ್ರದಾಯಿಕ ಮೀನುಗಾರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ

ಶೈತ್ಯಾಗಾರ ಸ್ಥಾಪಿಸಲಿ

‘ವಾರ್ಷಿಕವಾಗಿ ಲಕ್ಷಾಂತರ ಟನ್ ಮೀನಿನ ಇಳುವರಿ ಸಿಗುವ ಉತ್ತರ ಕನ್ನಡದಲ್ಲಿ ಮೀನುಗಳು ಕೆಡದಂತೆ ಸಂರಕ್ಷಿಸಿಡಲು ಶೈತ್ಯಾಗಾರ (ಕೋಲ್ಡ್ ಸ್ಟೋರೇಜ್) ಇಲ್ಲ. ಸರ್ಕಾರ ತದಡಿ ಬಂದರಿನಲ್ಲಿ ಈ ಹಿಂದೆ ಶೈತ್ಯಾಗಾರ ಸ್ಥಾಪಿಸುವ ಯೋಜನೆ ಘೋಷಿಸಿತ್ತು. ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇಲ್ಲಿನ ಮೀನುಗಳನ್ನು ಕೇರಳ ಸೇರಿದಂತೆ ದೇಶದ ನಾನಾಭಾಗಕ್ಕೆ ರಫ್ತು ಮಾಡಲಾಗುತ್ತದೆ. ಕೆಡದಂತೆ ಹೆಚ್ಚು ಕಾಲ ಅವುಗಳನ್ನು ಸಂಗ್ರಹಿಸಿಡಲು ಅವಕಾಶವಾದರೆ ಮೀನುಗಾರರಿಗೆ ಅನುಕೂಲವಾಗಲಿದೆ’ ಎಂದು ಮೀನುಗಾರ ಪ್ರಮುಖರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.