ADVERTISEMENT

ದ್ವಿಪಥ ರೈಲು ಮಾರ್ಗ: 2,278 ಮರಗಳ ಹನನಕ್ಕೆ ಅನುಮತಿ

ಅರಣ್ಯ ಇಲಾಖೆಯಿಂದ ಒಪ್ಪಿಗೆ: ಪರಿಸರ ಪ್ರಿಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 16:29 IST
Last Updated 4 ಜುಲೈ 2021, 16:29 IST
ಜೊಯಿಡಾ ತಾಲ್ಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಸ್ತುತ ಇರುವ ರೈಲು ಮಾರ್ಗ
ಜೊಯಿಡಾ ತಾಲ್ಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಸ್ತುತ ಇರುವ ರೈಲು ಮಾರ್ಗ   

ಜೊಯಿಡಾ (ಉತ್ತರ ಕನ್ನಡ): ಹೊಸಪೇಟೆ– ವಾಸ್ಕೋ ರೈಲು ಮಾರ್ಗವನ್ನು ದ್ವಿಪಥಗೊಳಿಸಲು ಕಾಳಿ ಹುಲಿ ಸಂರಕ್ಷಿತ (ಕೆ.ಟಿ.ಆರ್) ಪ್ರದೇಶದಲ್ಲಿ ಸಾವಿರಾರು ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಇದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ತಾಲ್ಲೂಕಿನ ಕ್ಯಾಸಲ್‌ರಾಕ್ ವನ್ಯಜೀವಿ ವಲಯದ 9.57 ಹೆಕ್ಟೇರ್ ಪ್ರದೇಶದಲ್ಲಿ 2,097 ಮರಗಳು ಹಾಗೂ ಹಳಿಯಾಳ ವಿಭಾಗದ 0.88 ಹೆಕ್ಟೇರ್ ಪ್ರದೇಶದಲ್ಲಿ 181 ಮರಗಳನ್ನು ಕಡಿಯಲುಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಯೋಜನೆ ಕೈಬಿಡುವಂತೆ ಕೇಂದ್ರ ಪರಿಸರ ಮಂಡಳಿ (ಸಿ.ಇ.ಸಿ) ಸುಪ್ರೀಂಕೋರ್ಟ್‌ಗೆ ವರದಿ ನೀಡಿದೆ. ಅದರ ಬಳಿಕವೂ ಅಧಿಕಾರಿಗಳು ಸುಮಾರು 2,278 ಮರಗಳನ್ನು ಕಡಿಯಲು ಅನುಮತಿ ನೀಡಿದ್ದಾರೆ.

ರೈಲು ಮಾರ್ಗದ ಅಭಿವೃದ್ಧಿಗಾಗಿ ಮರಗಳನ್ನು ಕಡಿಯಲು ನೈರುತ್ಯ ರೈಲ್ವೆ ಅಧಿಕಾರಿಗಳು ಅರಣ್ಯ ಇಲಾಖೆಯನ್ನು ಕೇಳಿಕೊಂಡಿದ್ದರು. ಇಷ್ಟೊಂದು ಪ್ರಮಾಣದಲ್ಲಿ ಅರಣ್ಯ ನಾಶ ಮಾಡಿದರೆ ಇಲ್ಲಿನ ಸಸ್ಯಸಂಕುಲ, ವನ್ಯಜೀವಿಗಳ ವಾಸ ಸ್ಥಾನಕ್ಕೆ ಹಾಗೂ ಜೀವ ವೈವಿಧ್ಯಕ್ಕೆ ಧಕ್ಕೆ ಬರಲಿದೆ. ಆದ್ದರಿಂದ ಈ ಯೋಜನೆ ರದ್ದು ಪಡಿಸುವಂತೆ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಯಲ್ಲಪ್ಪ ರೆಡ್ಡಿ, ಗೋವಾ ಫೌಂಡೇಷನ್, ಕೆಲವು ಸಂಸ್ಥೆಗಳು ಗೋವಾ ಹಾಗೂ ಕರ್ನಾಟಕದ ಹೈಕೋರ್ಟ್‌, ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

ADVERTISEMENT

ಈ ಕುರಿತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆದು, ಸಿ.ಇ.ಸಿ.ಗೆ ವರದಿ ನೀಡುವಂತೆ ಸೂಚಿಸಲಾಗಿತ್ತು. ಕಳೆದ ಏಪ್ರಿಲ್ ತಿಂಗಳಲ್ಲಿ ಸಿ.ಇ.ಸಿ ತನ್ನ ವರದಿ ಸಲ್ಲಿಸಿ, ಈ ಯೋಜನೆ ರದ್ದು ಪಡಿಸುವಂತೆ ಕೋರಿದೆ. ಜೊತೆಗೆ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರಾಧಿಕಾರ (ಎನ್.ಟಿ.ಸಿ.ಎ) ಹಾಗೂ ರಾಷ್ಟ್ರೀಯ ವನ್ಯಜೀವಿ ಮಂಡಳಿ (ಎನ್.ಡಬ್ಲು.ಸಿ) ಸಹ ಯೋಜನೆಗೆ ಅನುಮತಿ ನೀಡಿಲ್ಲ.

ಈ ಬಗ್ಗೆ ಮಾತನಾಡಿದ ಕಾಳಿ ಬ್ರಿಗೇಡ್ ಸಂಚಾಲಕ ರವಿ ರೇಡ್ಕರ್, ‘ಮರಗಳನ್ನು ಕಡಿಯಲು ಅನುಮತಿ ನೀಡಿದ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರನ್ನು ಹಾಗೂ ಹಳಿಯಾಳ ವಿಭಾಗದ ಉಪ ಸಂರಕ್ಷಣಾಧಿಕಾರಿ ಅವರನ್ನು ತಕ್ಷಣದಿಂದಲೇ ವಜಾಗೊಳಿಸಬೇಕು. ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಮರಗಳನ್ನು ಕಡಿಯುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

‘ಅನುಮತಿ ರದ್ದು ಮಾಡಲಾಗಿದೆ’:

‘ರೈಲ್ವೆ ಅಧಿಕಾರಿಗಳು ಈ ಯೋಜನೆಗೆ ಸಂಬಂಧಿಸಿದಂತೆ ಎಲ್ಲ ಅನುಮತಿಗಳನ್ನು ಪಡೆದಿದ್ದರು. ಆದ್ದರಿಂದ ಅರಣ್ಯ ಇಲಾಖೆ ಮರಗಳನ್ನು ಕಡಿಯಲು ಏಪ್ರಿಲ್ ತಿಂಗಳ ಕೊನೆಯಲ್ಲಿ ಅನುಮತಿ ನೀಡಿತ್ತು. ಇದಕ್ಕೆ ಸಿ.ಇ.ಸಿ ಆಕ್ಷೇಪಣೆ ಸಲ್ಲಿಸಿರುವ ಕಾರಣ, ಮರಗಳನ್ನು ಕಡಿಯಲು ನೀಡಿದ ಅನುಮತಿಯನ್ನು ರದ್ದು ಮಾಡಲಾಗಿದೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸದ್ಯ ಮರ ಕಡಿಯಲು ಅವಕಾಶ ನೀಡುವುದಿಲ್ಲ’ ಎಂದು ಕಾಳಿ ಹುಲಿ ಸಂರಕ್ಷಿತ (ಕೆ.ಟಿ.ಆರ್) ಪ್ರದೇಶದ ನಿರ್ದೇಶಕ ಮಾರಿಯಾ ಡಿ.ಕ್ರಿಸ್ತರಾಜು ಸ್ಪಷ್ಟಪಡಿಸಿದರು.

‘ಕಾಮಗಾರಿ ಪ್ರಾರಂಭವಾಗಿಲ್ಲ’:

ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಪ್ರತಿಕ್ರಿಯಿಸಿ, ‘ರಾಷ್ಟ್ರೀಯ ಯೋಜನೆ ಆಗಿರುವ ಕಾರಣ, ಕಡಿಮೆ ಪ್ರಮಾಣದಲ್ಲಿ ಮರಗಳನ್ನು ಕಡಿಯಲು ಮೊದಲ ಹಂತದಲ್ಲಿ ಅನುಮತಿ ನೀಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶನದಂತೆ, ಅರಣ್ಯ ಇಲಾಖೆಯ ಎಲ್ಲ ವಿಧಾನಗಳನ್ನು ಪಾಲನೆ ಮಾಡಲಾಗಿದೆ. ಇನ್ನೂ ಕಾಮಗಾರಿ ಪ್ರಾರಂಭವಾಗಿಲ್ಲ. ಸುಪ್ರೀಂಕೋರ್ಟ್ ಯೋಜನೆಯನ್ನು ತಡೆಹಿಡಿದರೆ, ಅನುಮತಿಯನ್ನು ಹಿಂಪಡೆಯಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.