ADVERTISEMENT

ಜೊಯಿಡಾ | ಅರಣ್ಯ ಹಕ್ಕಿಗಾಗಿ ಕಾರವಾರ ಚಲೋ ಡಿ.6ಕ್ಕೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 5:00 IST
Last Updated 27 ನವೆಂಬರ್ 2025, 5:00 IST
ಜೊಯಿಡಾದಲ್ಲಿ ನಡೆದ ಅರಣ್ಯ ಅತಿಕ್ರಮಣದಾರರ ಸಭೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿದರು 
ಜೊಯಿಡಾದಲ್ಲಿ ನಡೆದ ಅರಣ್ಯ ಅತಿಕ್ರಮಣದಾರರ ಸಭೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿದರು    

ಜೊಯಿಡಾ: ‘ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿದ ಪರಿಹಾರಕ್ಕೆ ಆಗ್ರಹಿಸಿ ಡಿ.6 ರಂದು `ಜಿಲ್ಲಾಮಟ್ಟದ ಬೃಹತ್ ಕಾರವಾರ ಚಲೋ’ ಸಂಘಟಿಸಿದ್ದು, ಅರಣ್ಯವಾಸಿಗಳು ಮನೆಗೊಬ್ಬರಂತೆ ಭಾಗವಹಿಸಿ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

 ಜೊಯಿಡಾ ಕುಣಬಿ ಭವನದಲ್ಲಿ ಬುಧವಾರ ನಡೆದ ಅರಣ್ಯವಾಸಿಗಳ ಬೃಹತ್ ಸಭೆಯಲ್ಲಿ ಮಾತನಾಡಿದರು.

ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದ ಗಮನ ಸೆಳೆಯುವುದು ಪ್ರತಿಯೊಬ್ಬ ಅರಣ್ಯವಾಸಿಯ ಕರ್ತವ್ಯ. ಈ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಸಮಾವೇಶದಲ್ಲಿ ಸಕ್ರಿಯವಾಗಿ ಪ್ರತಿಯೊಬ್ಬ ಅರಣ್ಯವಾಸಿಗೂ ಮಾಹಿತಿ ನೀಡುವುದು. ಗ್ರೀನ್ ಕಾರ್ಡ್‌ ಪ್ರಮುಖರ ಜವಬ್ದಾರಿ’ ಎಂದರು.

ADVERTISEMENT

ಅರಣ್ಯವಾಸಿಗಳ ಸಾಗುವಳಿ ಹಕ್ಕಿಗೆ ಸಾಂಘಿಕ ಹೋರಾಟದೊಂದಿಗೆ ಕಾನೂನಾತ್ಮಕ ಹೋರಾಟಕ್ಕೂ ಹೋರಾಟಗಾರರ ವೇದಿಕೆ ಸನ್ನದ್ಧವಾಗಿದೆ. ಕಾನೂನಿನ ಕೊರತೆಯಿಂದ ಮತ್ತು ಕಾನೂನು ಜ್ಞಾನ ಇಲ್ಲದಿರುವುದರಿಂದ ಅರಣ್ಯವಾಸಿಗಳಿಗೆ ಸಮಸ್ಯೆಯಾಗುತ್ತಿದೆ. ಅರಣ್ಯವಾಸಿಗಳಿಗೆ ಕಾನೂನು ತಿಳಿವಳಿಕೆ, ಜ್ಞಾನದ ಜೊತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅರಣ್ಯವಾಸಿಗಳಿಗೆ ಕಾನೂನು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು  ತಿಳಿಸಿದರು.

ಜಿಲ್ಲೆಯಾದ್ಯಂತ ಅರಣ್ಯವಾಸಿಗಳ ಕಾನೂನು ಜಾಗೃತ ಜಾಥಾ ಸಂಘಟಿಸಲಾಗುವುದು ಎಂದರು.

ಸಂಚಾಲಕ ಸುಭಾಷ್ ಗೌಡ ಮಾತನಾಡಿ, ‘ಭೂ ರಹಿತರಾದ ಅರಣ್ಯವಾಸಿಗಳು ಭೂಮಿ ಹಕ್ಕಿನಿಂದ ವಂಚಿತರಾದರೆ ನಿರಾಶ್ರಿತರಾಗುತ್ತಾರೆ. ಭೂಮಿ ಹಕ್ಕು ಕೊಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಯಪ್ರವೃತ್ತರಾಗಬೇಕು ಹಾಗೂ ಸರ್ಕಾರವು ಅರಣ್ಯವಾಸಿಗಳ ಪರವಾಗಿ ಕಾರ್ಯ ನಿರ್ವಹಸಬೇಕು ಎಂದು ತಿಳಿಸಿದರು. 

ಎಂ.ರಫೀಕ್ ಖಾನ್, ದೀಲಿಪ್ ಮಿರಾಶಿ, ಬಬಲಿ ಗಾಂವಕರ್, ರತ್ನಾಕರ್ ನಾಯ್ಕ, ಛಾಯಾ ಉಳವಿ, ಕೇಶವ ವರಕಟಕರ್, ರಮೇಶ್ ಜಿ. ಗಾವಂಟಕರ್, ರಾಮದಾಸ್ ವೇಳಿಪ್, ಅಂತೋನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.