
ಶಿರಸಿ: ‘ರಾಜ್ಯ ಅರಣ್ಯ ಭೂಮಿ ಹಕ್ಕು ಉಸ್ತುವಾರಿ ಸಮಿತಿಯು ನೀಡಿದ ನಿರ್ದೇಶನಕ್ಕೂ, ಪ್ರಸ್ತುತ ಜಿಲ್ಲೆಯಲ್ಲಿ ನಡೆಯುತ್ತಿರುವ ಮಹಜರು ಪ್ರಕ್ರಿಯೆಗೂ ಯಾವುದೇ ಸಂಬಂಧವಿಲ್ಲ. ಮಹಜರು ಮಾಡಲು ಹೇಳಿದ್ದು ಒಂದಕ್ಕಾದರೆ, ಜಿಲ್ಲಾಡಳಿತ ಮಾಡುತ್ತಿರುವುದು ಇನ್ನೊಂದಕ್ಕೆ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ಹೋರಾಟಗಾರರ ಕಾರ್ಯಾಲಯದಲ್ಲಿ ಗುರುವಾರ ರಾಜ್ಯ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ನಡವಳಿಕೆಗಳನ್ನು ಪ್ರದರ್ಶಿಸಿ ಅವರು ಮಾತನಾಡಿದರು.
‘ದಾಖಲೆಗಳ ಕೊರತೆಯಿಂದ ತಿರಸ್ಕೃತಗೊಂಡ ಅರ್ಜಿಗಳ ಮರುಪರಿಶೀಲನೆಗಾಗಿ ಸಾಗುವಳಿ ದೃಢೀಕರಣ ಮಾಡಲು ಉನ್ನತ ಮಟ್ಟದ ಸಮಿತಿಯಿಂದ ಮಹಜರು ನಡೆಸಿ, ಆ ವರದಿಯನ್ನೇ ಅಧಿಕೃತ ದಾಖಲೆಯಾಗಿ ಪರಿಗಣಿಸುವಂತೆ ಜ.3ರಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು. ಆದರೆ, ಈ ನಿರ್ದೇಶನದ ಮೂಲ ಆಶಯವಾದ ಸಾಗುವಳಿ ಕುರುಹು ಮತ್ತು ಸಾಂದರ್ಭಿಕ ದಾಖಲೆಗಳನ್ನು ಪರಿಗಣಿಸದೆ, ಕೇವಲ ಅರ್ಜಿದಾರನ ಅರ್ಜಿಯನ್ನಷ್ಟೇ ಪರಿಶೀಲಿಸುತ್ತಿರುವುದು ಖೇದಕರ’ ಎಂದು ಹೇಳಿದರು.
‘ಪ್ರಸ್ತುತ ನಡೆಯುತ್ತಿರುವ ಪ್ರಕ್ರಿಯೆಯು ಕಾನೂನು ಬಾಹಿರವಾಗಿದ್ದು, ಸಾಗುವಳಿ ಮಹಜರು ವರದಿಗೆ ಆದ್ಯತೆ ನೀಡದೆ ಅರ್ಜಿದಾರನ ಹಿಡುವಳಿ ಮತ್ತು ಆರ್ಥಿಕ ಉತ್ಪನ್ನದಂತಹ ಷರತ್ತುಬದ್ಧ ಮಾಹಿತಿಗಳ ಸಂಗ್ರಹಕ್ಕೆ ಸೀಮಿತವಾಗಿದೆ’ ಎಂದು ದೂರಿರುವ ಅವರು, ‘ಜಿಲ್ಲೆಯಲ್ಲಿ ನಡೆಯುತ್ತಿರುವ ಮಹಜರು ಸಂದರ್ಭದಲ್ಲಿ ಸ್ಥಳೀಯ ಮುಖಂಡರ ಹಾಜರಾತಿಗೆ ಅವಕಾಶ ನೀಡುತ್ತಿಲ್ಲ. ಅರಣ್ಯವಾಸಿಗಳಿಗೆ ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡದೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಮಹಜರಿನಲ್ಲಿ ಸಾಗುವಳಿ ಮತ್ತು ವಾಸ್ತವ್ಯಕ್ಕೆ ಸಂಬಂಧಿಸಿದ ಸಾಂದರ್ಭಿಕ ದಾಖಲೆಗಳನ್ನು ಉಲ್ಲೇಖಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ, ಒಂದೇ ಕುಟುಂಬದ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಪರಿಗಣಿಸದಿರುವುದು ಕಾನೂನಿಗೆ ವ್ಯತಿರಿಕ್ತವಾದ ನೀತಿಯಾಗಿದೆ’ ಎಂದು ರವೀಂದ್ರ ನಾಯ್ಕ ಪ್ರಸ್ತಾಪಿಸಿದರು.
ಕಾನೂನು ಸಲಹೆಗಾರ ಉದಯ ನಾಯ್ಕ ಮತ್ತು ಮಂಜುನಾಥ ತಿಮ್ಮ ನಾಯ್ಕ ಬಿದ್ರಳ್ಳಿ ಇದ್ದರು.
ರಾಜ್ಯ ಉಸ್ತುವಾರಿ ಸಮಿತಿಯ ನಿರ್ದೇಶನಕ್ಕೆ ವ್ಯತಿರಿಕ್ತವಾಗಿ ನಡೆಯುತ್ತಿರುವ ಈ ಮಹಜರು ಪ್ರಕ್ರಿಯೆಯ ಕುರಿತು ಶೀಘ್ರದಲ್ಲೇ ಸಂಬಂಧಪಟ್ಟ ಪ್ರಾಧಿಕಾರದ ಗಮನಕ್ಕೆ ತರಲಾಗುವುದು.ರವೀಂದ್ರ ನಾಯ್ಕ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.