ADVERTISEMENT

ಶಿರಸಿ | ಶಿಥಿಲಾವಸ್ಥೆಯಲ್ಲಿ ನೂರಾರು ವಸತಿ ಗೃಹಗಳು: ಮರೀಚಿಕೆಯಾದ ಸುರಕ್ಷಿತ ಸೂರು

ರಾಜೇಂದ್ರ ಹೆಗಡೆ
Published 3 ಆಗಸ್ಟ್ 2025, 5:02 IST
Last Updated 3 ಆಗಸ್ಟ್ 2025, 5:02 IST
ಶಿರಸಿ ತಾಲ್ಲೂಕಿನ ಎಕ್ಕಂಬಿ ಚೆಕ್‍ಪೋಸ್ಟ್ ಬಳಿ ನಿರ್ವಹಣೆಯಿಲ್ಲದೇ ಶಿಥಿಲಾವಸ್ಥೆ ತಲುಪಿರುವ ಅರಣ್ಯ ಸಿಬ್ಬಂದಿ ವಸತಿ ಗೃಹ  
ಶಿರಸಿ ತಾಲ್ಲೂಕಿನ ಎಕ್ಕಂಬಿ ಚೆಕ್‍ಪೋಸ್ಟ್ ಬಳಿ ನಿರ್ವಹಣೆಯಿಲ್ಲದೇ ಶಿಥಿಲಾವಸ್ಥೆ ತಲುಪಿರುವ ಅರಣ್ಯ ಸಿಬ್ಬಂದಿ ವಸತಿ ಗೃಹ     

ಶಿರಸಿ: ಅರಣ್ಯ ರಕ್ಷಣೆಯಲ್ಲಿ ತೊಡಗಿಕೊಂಡಿರುವ ಸಿಬ್ಬಂದಿಗೆ ಸುರಕ್ಷಿತ ಸೂರು ಮರೀಚಿಕೆಯಾಗಿದೆ. ದಶಕಗಳಿಂದ ನಿರ್ವಹಣೆಯಿಲ್ಲದೇ ಶಿಥಿಲಾವಸ್ಥೆ ತಲುಪಿರುವ ವಸತಿ ಗೃಹದಲ್ಲಿ ಆತಂಕದಲ್ಲಿ ಕಳೆಯಬೇಕಾಗುತ್ತಿದೆ ಎಂಬ ಅಳಲು ಜಿಲ್ಲೆಯ ಅರಣ್ಯ ಇಲಾಖೆ ಸಿಬ್ಬಂದಿಯದ್ದು.

ಸಿಬ್ಬಂದಿಗೆ ವಾಸಿಸಲು ನೀಡಿರುವ ಅರಣ್ಯ ಇಲಾಖೆಯ ವಸತಿ ಗೃಹಗಳು ಸಾಕಷ್ಟು ಹಳತಾಗಿದ್ದು, ಶಿಥಿಲವಾಗಿವೆ. ಕೆಲವೆಡೆ ವಾಸಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲೂ ಇವೆ. ಕೆಲವೆಡೆ ಸಿಬ್ಬಂದಿಯೇ ತಾತ್ಕಾಲಿಕ ದುರಸ್ತಿ ಮಾಡಿಕೊಂಡಿದ್ದಾರೆ. 

‘ಜಿಲ್ಲೆಯಲ್ಲಿ ಬೆರಳೆಣಿಕೆ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣ ಕಾರ್ಯ ನಡೆದಿದೆ. ಉಳಿದೆಡೆ ಹಳೆಯ ವಸತಿ ಕಟ್ಟಡಗಳು, ಚೆಕ್‍ಪೋಸ್ಟ್ ಸಮೀಪದ ವಸತಿ ಕಟ್ಟಡಗಳ ಸಂಖ್ಯೆಯೇ ಹೆಚ್ಚಿದೆ. 40–50 ವರ್ಷ ಹಳತಾಗಿರುವ ಕಟ್ಟಡಗಳಲ್ಲಿ ಮಳೆಗಾಲ ಬಂತೆಂದರೆ ಕುಟುಂಬಗಳ ಸಹಿತ ಉಳಿಯಲು ಭಯವಾಗುವ ಸ್ಥಿತಿ ಇದೆ’ ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿ ಒಬ್ಬರು ಅಳಲು ತೋಡಿಕೊಂಡರು. 

ADVERTISEMENT

‘ಶಿರಸಿ, ಸಿದ್ದಾಪುರ, ಯಲ್ಲಾಪುರ, ದಾಂಡೇಲಿ, ಜೊಯಿಡಾ, ಕುಮಟಾ, ಅಂಕೋಲಾ, ಹೊನ್ನಾವರ ತಾಲ್ಲೂಕುಗಳಲ್ಲಿ ಹೆಚ್ಚಾಗಿ ಹಳೆದಾದ, ಗೆದ್ದಲು ತಿಂದಿರುವ ರೀಪು, ಶಿಥಿಲಗೊಂಡಿರುವ ಚಾವಣಿ, ಬಿರುಕು ಬಿಟ್ಟ ಗೋಡೆಗಳನ್ನು ಹೊಂದಿರುವ ಕಟ್ಟಡಗಳು 500ಕ್ಕೂ ಹೆಚ್ಚಿವೆ. ಉಳಿದ ತಾಲ್ಲೂಕುಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಅನಿವಾರ್ಯವಾಗಿ ಇದೇ ಕಟ್ಟಡಗಳಲ್ಲಿ ಸಿಬ್ಬಂದಿ ವಾಸ ಮಾಡಬೇಕು’ ಎಂದು ಅರಣ್ಯ ಅಧಿಕಾರಿಯೊಬ್ಬರು ಸಮಸ್ಯೆ ವಿವರಿಸಿದರು.

‘ಅರಣ್ಯ ರಕ್ಷಣೆ ಕೆಲಸಕ್ಕೆ ನೇಮಿಸಿದ ಅರಣ್ಯ ರಕ್ಷಕರು, ಉಪ ವಲಯ ಅರಣ್ಯಾಧಿಕಾರಿಗಳು ಸಮಯದ ಮಿತಿ ಇಲ್ಲದೆ ಕೆಲಸ ಮಾಡಬೇಕಾಗುತ್ತದೆ. ಕಾಡಿನಲ್ಲೇ ಹೆಚ್ಚಿನ ಸಮಯ ಕಳೆಯುವುದು ಅನಿವಾರ್ಯ. ಆದರೆ, ಮುರಿದ ಸ್ಥಿತಿಯಲ್ಲಿರುವ ಚಾವಣಿ, ಬಿರುಕು ಬಿಟ್ಟ ಗೋಡೆಗಳ ವಸತಿಗೃಹಗಳಲ್ಲಿನ ಕುಟುಂಬಸ್ಥರ ಸುರಕ್ಷತೆಯ ಬಗ್ಗೆ ಆತಂಕದಲ್ಲೇ ಕೆಲಸ ಮಾಡುವ ಅನಿವಾರ್ಯತೆಯಿಂದ ಒತ್ತಡವೂ ಹೆಚ್ಚುತ್ತಿದೆ’ ಎಂದು ಅರಣ್ಯ ರಕ್ಷಕರೊಬ್ಬರು ಹೇಳಿದರು. 

ಕೆಲವೆಡೆ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ. ಹಳೆಯ ಕಟ್ಟಡಗಳ ದುರಸ್ತಿ ಸಂಬಂಧ ₹5 ಕೋಟಿ ಪ್ರಸ್ತಾವ ಕಳುಹಿಸಲಾಗಿದ್ದು ಅನುದಾನ ಮಂಜೂರಾದ ನಂತರ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು
ಕೆ.ವಿ.ವಸಂತ ರೆಡ್ಡಿ ಕೆನರಾ ಅರಣ್ಯ ವೃತ್ತದ ಸಿಎಫ್

‘ನಿರ್ವಹಣೆ ವೆಚ್ಚವನ್ನೂ ನೀಡುತ್ತಿಲ್ಲ’:

‘ಅರಣ್ಯ ಸಿಬ್ಬಂದಿಗೆ ಹೊಸ ವಸತಿ ಗೃಹಗಳನ್ನು ಮಂಜೂರು ಮಾಡದೆ ಹಲವು ವರ್ಷ ಕಳೆದಿದೆ. ಕಳೆದ ಮೂರು ವರ್ಷಗಳಿಂದ ನಿರ್ವಹಣೆಯ ವೆಚ್ಚವನ್ನೂ ನೀಡುತ್ತಿಲ್ಲ. ವರ್ಷಕ್ಕೆ ನೂರಾರು ಕೋಟಿ ರೂಪಾಯಿ ಆದಾಯ ಕೊಡುವ ಜಿಲ್ಲೆಯ ಅರಣ್ಯ ಇಲಾಖೆ ಸಿಬ್ಬಂದಿಗೆ ಹೊಸ ವಸತಿಗೃಹ ಕೊಡಲು ವಿಳಂಬ ಮಾಡಲಾಗುತ್ತಿದೆ’ ಎಂದು ಅರಣ್ಯ ಸಿಬ್ಬಂದಿಯೊಬ್ಬರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.