ADVERTISEMENT

ಅಧಿವೇಶನದಲ್ಲಿ ಚರ್ಚೆ: ಅರಣ್ಯ ಪದವಿ ವಿದ್ಯಾರ್ಥಿಗಳಿಗೆ ಭೀಮಣ್ಣ ಭರವಸೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 5:37 IST
Last Updated 15 ಅಕ್ಟೋಬರ್ 2025, 5:37 IST
ವಿವಿಧ ಬೇಡಿಕೆ ಈಡೇರಿಕೆಗಾಗಿ ತರಗತಿ ಬಹಿಷ್ಕರಿಸಿ ಧರಣಿ ನಡೆಸುತ್ತಿರುವ ಶಿರಸಿಯ ಅರಣ್ಯ ಕಾಲೇಜ್ ವಿದ್ಯಾರ್ಥಿಗಳ ಜತೆ ಭೀಮಣ್ಣ ನಾಯ್ಕ ಚರ್ಚಿಸಿದರು
ವಿವಿಧ ಬೇಡಿಕೆ ಈಡೇರಿಕೆಗಾಗಿ ತರಗತಿ ಬಹಿಷ್ಕರಿಸಿ ಧರಣಿ ನಡೆಸುತ್ತಿರುವ ಶಿರಸಿಯ ಅರಣ್ಯ ಕಾಲೇಜ್ ವಿದ್ಯಾರ್ಥಿಗಳ ಜತೆ ಭೀಮಣ್ಣ ನಾಯ್ಕ ಚರ್ಚಿಸಿದರು   

ಶಿರಸಿ: ಅರಣ್ಯ ಇಲಾಖೆಯ ಡಿ.ಆರ್.ಎಫ್.ಒ, ಆರ್.ಎಫ್.ಒ. ಹಾಗೂ ಎ.ಸಿ.ಎಫ್. ಹುದ್ದೆಯ ನೇರ ನೇಮಕಾತಿಯಲ್ಲಿ ಬಿ.ಎಸ್ಸಿ ಅರಣ್ಯಶಾಸ್ತ್ರ ಪದವಿಯನ್ನು ಕನಿಷ್ಠ ವಿದ್ಯಾರ್ಹತೆ ಮಾಡುವಂತೆ ಒತ್ತಾಯಿಸಿ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಐದು ದಿನಗಳಿಂದ ತರಗತಿ ಬಹಿಷ್ಕರಿಸಿ ಧರಣಿ ನಡೆಸುತ್ತಿದ್ದು, ಶಾಸಕ ಭೀಮಣ್ಣ ನಾಯ್ಕ ಮಂಗಳವಾರ ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳ ಅಹವಾಲು ಕೇಳಿದರು. 

ವಿದ್ಯಾರ್ಥಿ ಪ್ರಮುಖ ಅಕ್ಷಯಕುಮಾರ, ‘ಅರಣ್ಯ ವಿಜ್ಞಾನ ಪದವೀಧರರ ಸಾಮರ್ಥ್ಯ ಮತ್ತು ಅಗತ್ಯ ಅರಿತ ಕರ್ನಾಟಕ ಸರ್ಕಾರ 2003ರಲ್ಲಿ ಎಸಿಎಫ್ ಮತ್ತು ಆರ್‌ಎಫ್‌ಒ ಹುದ್ದೆಗೆ ಶೇಕಡ 50ರಷ್ಟು ಮೀಸಲಾತಿ ಒದಗಿಸಿತ್ತು. ಪ್ರತಿಭಟನೆ ನಂತರ 2012ರಲ್ಲಿ ಆರ್‌ಎಫ್‌ಒ ಹುದ್ದೆಗೆ ಶೇಕಡ 75ಕ್ಕೆ ಹೆಚ್ಚಿಸಿತ್ತು. 2018ರಲ್ಲಿ ಮತ್ತೆ ನೇರ ನೇಮಕಾತಿಗೆ ಮೊದಲಿದ್ದ ಶೇ 50ಕ್ಕೆ ಕಡಿಮೆಗೊಳಿಸಿತ್ತು. ಬೇಡಿಕೆ ಪರಿಶೀಲಿಸಲು ವಿಶೇಷ ಸಮಿತಿ ರಚಿಸುವ ಆಶ್ವಾಸನೆಯೂ ಈವರೆಗೆ ಈಡೇರಿಲ್ಲ’ ಎಂದರು.  

‘ಕೇರಳ, ಒಡಿಶಾ, ಜಾರ್ಖಂಡ್‍ನಲ್ಲಿ ಮೀಸಲಾತಿ ಒದಗಿಸಿವೆ. ರಾಜ್ಯದಲ್ಲೂ ಬಿ.ಎಸ್ಸಿ ಪದವಿಯನ್ನು (ಅರಣ್ಯ ಶಾಸ್ತ್ರ) ಕನಿಷ್ಠ ವಿದ್ಯಾರ್ಹತೆಯಾಗಿಸಿ ಅಧಿಸೂಚನೆ ಹೊರಡಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಅರಣ್ಯ ಮಹಾವಿದ್ಯಾಲಯದ ಡೀನ್ ಆರ್.ವಾಸುದೇವ ಮಾತನಾಡಿ, ‘ಅರಣ್ಯ ಪದವೀಧರರಿಗೆ ಅರಣ್ಯ ಇಲಾಖೆ ಪ್ರವೇಶಿಸಲು ಡಿಆರ್‌ಎಫ್ಒ ಹುದ್ದೆ ಪ್ರಮುಖ ಮಾರ್ಗವಾಗಿದೆ. ಆದರೆ ಪ್ರಸ್ತುತ ಇರುವ ಗಾರ್ಡ್ ಗಳಿಗೆ ಬಡ್ತಿ ನೀಡಿ ಈ ಹುದ್ದೆ ನೀಡಲು ಚಿಂತನೆ ನಡೆದ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಇದೇ ರೀತಿಯಾದರೆ ಅರಣ್ಯ ಕಾಲೇಜ್ ಬಂದ್ ಮಾಡುವುದು ಉತ್ತಮ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ‘ಅರಣ್ಯ ವಿದ್ಯಾರ್ಥಿಗಳ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಗಮನಕ್ಕೆ ತರುತ್ತೇನೆ. ಅರಣ್ಯ ರಕ್ಷಣೆಗೆ ಅರಣ್ಯದ ಸಸ್ಯ ಮತ್ತು ವನ್ಯ ಜೀವಿಗಳ ಬಗ್ಗೆ ಜ್ಞಾನ ಅತ್ಯವಶ್ಯ. ಹೀಗಾಗಿ ವಿದ್ಯಾರ್ಥಿಗಳ ಈ ಬೇಡಿಕೆಯನ್ನು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಪ್ರಸ್ತಾಪಿಸಿಸುವೆ’ ಎಂದು ಭರವಸೆ ನಿಡಿದರು.

‘ವಿದ್ಯಾರ್ಥಿಗಳು ತರಗತಿಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಬಾರದು. ಇದರಿಂದಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ವಿದ್ಯಾರ್ಥಿ ಜೀವನದ ಅಮೂಲ್ಯ ಕ್ಷಣಗಳು ಪ್ರತಿಭಟನೆಯಿಂದಾಗಿ ಹಾಳಾಗಬಾರದು. ಹೀಗಾಗಿ, ತರಗತಿಯಲ್ಲಿ ಪಾಲ್ಗೊಳ್ಳಿ’ ಎಂದು ಅವರು ವಿನಂತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.