ADVERTISEMENT

ಕಲಾವಿದರಿಗೆ ಮಾರಿಗುಡಿಯಲ್ಲಿ ಉಚಿತ ಊಟ

ಆಡಳಿತ ಮಂಡಳಿ ನಿರ್ಧಾರಕ್ಕೆ ಸಾರ್ವಜನಿಕರಿಂದ ಪ್ರಶಂಸೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 13:30 IST
Last Updated 16 ಮಾರ್ಚ್ 2020, 13:30 IST
ಬೀದಿಬದಿ ವ್ಯಾಪಾರಿಗಳು ಮಾರಿಕಾಂಬಾ ದೇವಾಲಯದ ಆಡಳಿತ ಮಂಡಳಿ ಸದಸ್ಯರ ಜೊತೆ ಚರ್ಚಿಸಿದರು
ಬೀದಿಬದಿ ವ್ಯಾಪಾರಿಗಳು ಮಾರಿಕಾಂಬಾ ದೇವಾಲಯದ ಆಡಳಿತ ಮಂಡಳಿ ಸದಸ್ಯರ ಜೊತೆ ಚರ್ಚಿಸಿದರು   

ಶಿರಸಿ: ಪ್ರದರ್ಶನ ಸ್ಥಗಿತಗೊಳಿಸಿ ಸಂಕಷ್ಟದಲ್ಲಿರುವ ನಾಟಕ ಕಂಪನಿ, ಸರ್ಕಸ್ ಕಂಪನಿ, ವಿವಿಧ ಮನರಂಜನಾ ವಿಭಾಗದ ಕಲಾವಿದರು, ಕಾರ್ಮಿಕರಿಗೆ ನಿತ್ಯ ಎರಡು ಹೊತ್ತು ಊಟ ನೀಡಲು, ಇಲ್ಲಿನ ಮಾರಿಕಾಂಬಾ ದೇವಾಲಯದ ಆಡಳಿತ ಮಂಡಳಿ ಮುಂದಾಗಿದೆ. ಸೋಮವಾರ ಹಲವಾರು ಜನರು ಮಧ್ಯಾಹ್ನ ಊಟ ಮಾಡಿದರು.

ಕೊರೊನಾ ವೈರಸ್‌ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜನದಟ್ಟಣಿಯಾಗುವುದನ್ನು ತಪ್ಪಿಸಲು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಮಾರಿಕಾಂಬಾ ಜಾತ್ರೆಗೆ ಬಂದಿದ್ದ ಐದು ನಾಟಕ ಕಂಪನಿಗಳು, ಸರ್ಕಸ್ ಕಂಪನಿಗಳು ಗಳಿಕೆಯಿಲ್ಲದೇ, ನಿತ್ಯದ ಊಟಕ್ಕೂ ಪರಿತಪಿಸುತ್ತಿದ್ದವು.

ಭಾನುವಾರ ಸಂಜೆ ದೇವಾಲಯದಲ್ಲಿ ಸಭೆ ಸೇರಿದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಮನೋಹರ ಮಲ್ಮನೆ, ಸದಸ್ಯರಾದ ಶಾಂತಾರಾಮ ಹೆಗಡೆ, ಲಕ್ಷ್ಮಣ ಕಾನಡೆ, ಶಶಿಕಲಾ ಚಂದ್ರಾಪಟ್ಟಣ, ಬಾಬುದಾರ ಜಗದೀಶ ಗೌಡ ಹಾಗೂ ಪ್ರಮುಖರು, ಈ ವಿಷಯವನ್ನು ಚರ್ಚಿಸಿ, ಪ್ರತಿದಿನ ಎರಡು ಹೊತ್ತು ಉಚಿತವಾಗಿ ಊಟ ನೀಡಲು ಮುಂದಾಗಿದ್ದಾರೆ.

ADVERTISEMENT

ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ, ರಾತ್ರಿ 7ರಿಂದ 9ರವರೆಗೆ ದೇವಾಲಯದಲ್ಲಿ ಊಟ ನೀಡಲಾಗುತ್ತದೆ. ಕಂಪನಿಯ ಮಾಲೀಕರು ದೇವಸ್ಥಾನ ನೀಡುವ ಟೋಕನ್ ಅನ್ನು ಕಲಾವಿದರು, ಕಾರ್ಮಿಕರಿಗೆ ನೀಡಿ, ಊಟ ಪಡೆಯಬಹುದು ಎಂದು ಆಡಳಿತ ಮಂಡಳಿ ತಿಳಿಸಿದೆ.

ಈಗಾಗಲೇ ಟೆಂಡರ್ ಮೂಲಕ ಹಂಗಾಮಿ ಅಂಗಡಿಗಳನ್ನು ಪಡೆದ ಬೀದಿಬದಿ ವ್ಯಾಪಾರಿಗಳು ಹಣ ಮರಳಿಸುವಂತೆ ವಿನಂತಿಸಿದ್ದಾರೆ. ಇದನ್ನು ಪರಿಗಣಿಸಿ, ಟೆಂಡರ್ ಮೂಲಕ ಅಂಗಡಿ ಪಡೆದಿದ್ದವರಿಗೆ ಶೇ 10ರಷ್ಟು ಹಣ ವಾಪಸ್ ನೀಡಲು ಮಂಡಳಿ ತೀರ್ಮಾನಿಸಿದೆ. ಅಂಗಡಿ ಪಡೆದ ವ್ಯಕ್ತಿಗಳು ಅಧಿಕೃತ ದಾಖಲೆ ಹಾಗೂ ದೇವಾಲಯಕ್ಕೆ ಹಣ ಭರಣ ಮಾಡಿದ ದಾಖಲೆ ನೀಡಿ ಈ ಸಂಬಂಧ ಅರ್ಜಿ ಸಲ್ಲಿಸಬೇಕು.

ಜಿಲ್ಲಾ ನ್ಯಾಯಾಧೀಶರ ಸುಪರ್ದಿಗೊಳಪಟ್ಟಿರುವ ದೇವಾಲಯವು ಧಾರ್ಮಿಕ ಚಟುವಟಿಕೆಗಳ ಕೇಂದ್ರ ಮಾತ್ರವಲ್ಲ, ಸಮಾಜಮುಖಿ, ಪ್ರಗತಿಪತ ಚಟುವಟಿಕೆಗಳಿಗೂ ಕೈಜೋಡಿಸುತ್ತದೆ. ಸಮಸ್ಯೆಗೆ ಒಳಗಾದ ವ್ಯಕ್ತಿಗಳಿಗೆ ಪುನರ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ದೇವಾಲಯ ಈ ಕ್ರಮ ಕೈಗೊಂಡಿದೆ ಎಂದು ವೆಂಕಟೇಶ ನಾಯ್ಕ ಹೇಳಿದ್ದಾರೆ. ದೇವಾಲಯದ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಅಕ್ಕಿ, ದಿನಸಿ ವಿತರಣೆ:ತೀವ್ರ ತೊಂದರೆಯಲ್ಲಿದ್ದ ನಾಟಕ, ಸರ್ಕಸ್ ಕಂಪನಿಯವರಿಗೆ ನಗರದ ಕೆಲವು ಉತ್ಸಾಹಿಗಳು ಸೋಮವಾರ ಸಂಜೆ ಅಕ್ಕಿ, ಬೇಳೆ, ತರಕಾರಿ ವಿತರಿಸಿದರು. ಪ್ರಸನ್ನ ಶೆಟ್ಟಿ ಮತ್ತು ಗೆಳೆಯರು, ಪ್ರದೀಪ ಶೆಟ್ಟಿ, ರಾಜು ಕಾನಸೂರು, ಪೊಲೀಸರು ಸೇರಿ, ದಾನಿಗಳಿಂದ ಸಂಗ್ರಹಿಸಿದ ಮೂರು ಕ್ವಿಂಟಲ್‌ನಷ್ಟು ಅಕ್ಕಿ, ತರಕಾರಿ, ತೊಗರಿಬೇಳೆ, ಎಣ್ಣೆ, ದಿನಸಿ ಸಾಮಗ್ರಿಗಳನ್ನು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.