ADVERTISEMENT

ಮೇ 13ಕ್ಕೆ ಗಡಿನಾಡ ಕನ್ನಡ ಉತ್ಸವ: ಸಿ.ಎಸ್.ಷಡಕ್ಷರಿ

ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಕ್ಷರಿ

​ಪ್ರಜಾವಾಣಿ ವಾರ್ತೆ
Published 6 ಮೇ 2022, 15:12 IST
Last Updated 6 ಮೇ 2022, 15:12 IST
ಸಿ.ಎಸ್.ಷಡಕ್ಷರಿ
ಸಿ.ಎಸ್.ಷಡಕ್ಷರಿ   

ಕಾರವಾರ: ಕನ್ನಡ ನಾಡು, ನುಡಿಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೇ 13 ರಂದು ನಗರದಲ್ಲಿ ಗಡಿನಾಡ ಕನ್ನಡ ಉತ್ಸವ ಆಯೋಜಿಸಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ನೌಕರರ ಸಂಘ ಕೇವಲ ಬೇಡಿಕೆಗಳಿಗಾಗಿ ಹೋರಾಟ ಮಾಡಲು ಸೀಮಿತವಾಗಿಲ್ಲ. ಸಮಾಜಮುಖಿ ಕಾರ್ಯಗಳಲ್ಲೂ ಸಕ್ರೀಯವಾಗಿ ತೊಡಗಿಸಿಕೊಂಡಿದೆ’ ಎಂದರು.

‘ಗಡಿನಾಡ ಉತ್ಸವದ ವೇಳೆ ಸರ್ಕಾರಿ ನೌಕರರ ಸಂಘ ಒಂದು ಸರ್ಕಾರಿ ಶಾಲೆಯನ್ನು ದತ್ತು ಪಡೆಯಲಿದೆ. ಉತ್ತಮ ಸರ್ಕಾರಿ ನೌಕರರಿಗೆ ಸರ್ವೋತ್ತಮ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗುತ್ತಿದೆ’ ಎಂದರು.

ADVERTISEMENT

‘ಅಂದು ಬೆಳಗ್ಗೆ 7 ಗಂಟೆಗೆ ಕಾರವಾರ ಬೈಸಿಕಲ್ ಕ್ಲಬ್ ಮತ್ತು ಇತರ ಸಂಸ್ಥೆಗಳ ಸಹಯೋಗದಲ್ಲಿ ಗೋವಾ ಗಡಿಯ ಮಾಜಾಳಿ ಚೆಕ್ ಪೋಸ್ಟನಿಂದ ಸೈಕಲ್ ಜಾಥಾ, 10.30 ರಿಂದ ಜಿಲ್ಲಾ ರಂಗಮಂದಿರದಲ್ಲಿ ಕನ್ನಡ ಭಾಷಾ ಸ್ಪರ್ಧೆಗಳು, 11 ಗಂಟೆಗೆ ಗಡಿಭಾಗದ ಆಯ್ದ ಕವಿಗಳಿಂದ ಕವಿಗೋಷ್ಠಿ, 12.30ಕ್ಕೆ ಕನ್ನಡೇತರರಿಗಾಗಿ ಭಾಷಣ ಸ್ಪರ್ಧೆ, 1.30ಕ್ಕೆ ಕನ್ನಡಿಗರಿಗಾಗಿ ಭಾಷಣ ಸ್ಪರ್ಧೆ, ನಂತರ ಜಿಲ್ಲಾ ಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆಗಳು ನಡೆಯಲಿವೆ’ ಎಂದರು.

‘4 ಗಂಟೆಗೆ ಕನ್ನಡ ಜಯೋತ್ಸವ ಸಾಂಸ್ಕೃತಿಕ ಜಾಥಾ ನಡೆಯಲಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ಆಟೋಗಳಿಗೆ ಅಳವಡಿಸಲಾಗುವುದು. ಸಂಜೆ 5.30 ರಿಂದ ಮಯೂರವರ್ಮ ವೇದಿಕೆಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಅವರನ್ನು ಸನ್ಮಾನಿಸಲಾಗುವುದು. ರಾತ್ರಿ ಕನ್ನಡ ಸಂಗೀತೋತ್ಸವ ಜರುಗಲಿದ್ದು, ಗಾಯಕ ರಾಜೇಶ ಕೃಷ್ಣನ್ ಆಗಮಿಸಲಿದ್ದಾರೆ’ ಎಂದು ವಿವರಿಸಿದರು.

ನೌಕರರ ಸಂಘದ ಸುರೇಶ ಶೆಟ್ಟಿ, ರಮೇಶ ನಾಯ್ಕ, ಸದಾನಂದ ನಾಯ್ಕ, ಮೋಹನ ನಾಯ್ಕ, ಆರ್.ಡಿ.ನಾಯ್ಕ, ಪ್ರಕಾಶ ಹೆಗಡೆ, ಪ್ರಕಾಶ ಶಿರಾಲಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರಾಮಾ ನಾಯ್ಕ, ಕಾರವಾರ ಸೈಕಲ್ ಕ್ಲಬ್‌ನ ಸುರೇಶ ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.