
ಹೊನ್ನಾವರ: ತಾಲ್ಲೂಕಿನ ಕಲಾವಿದ ಜಿ.ಡಿ.ಭಟ್ಟ ಕೆಕ್ಕಾರ ಅವರು ಗಣೇಶ ಚತುರ್ಥಿಗೆಂದು ಪ್ರತಿ ವರ್ಷ ತಯಾರಿಸುವ ಗಣಪತಿ ಮೂರ್ತಿಯಲ್ಲಿ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ. ಅವರು ತಯಾರಿಸಿದ ವಿಗ್ರಹಗಳನ್ನು ನೋಡಲು ಕಲಾಪ್ರೇಮಿಗಳು ತುದಿಗಾಲಲ್ಲಿ ನಿಂತಿರುತ್ತಾರೆ.
ಈ ಮೂರ್ತಿಗಳ ಫೋಟೊ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲೂ ತಾ ಮುಂದು ನಾ ಮುಂದು ಎಂದು ಪೈಪೋಟಿಯೂ ಆಗುತ್ತದೆ.
ಈ ವರ್ಷವೂ ಅವರು ತಯಾರಿಸಿರುವ, ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಗಣಪನ ವಿಗ್ರಹದ ಕುರಿತು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಗಣಪತಿಯ ದೋತಿ ಮತ್ತು ಶಲ್ಯವು ಅತ್ಯಂತ ಸಹಜವಾಗಿ ಆಕರ್ಷಕವಾಗಿ ಕಾಣುತ್ತಿದೆ. ಅವುಗಳನ್ನು ಮಣ್ಣಿನಿಂದಲೇ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ವತಃ ಜಿ.ಡಿ.ಭಟ್ಟ ಅವರೇ ಸ್ವಲ್ಪ ಸ್ಪಷ್ಟನೆ ನೀಡಿದ್ದಾರೆ.
‘ಈ ವರ್ಷ ವಿವಿಧ ಗಾತ್ರಗಳ 120 ಗಣಪತಿ ವಿಗ್ರಹಗಳನ್ನು ತಯಾರಿಸಿದ್ದೇವೆ. ಚೌತಿಯ ಸಂದರ್ಭದಲ್ಲಿ ಸಹಜವಾಗಿಯೇ ಧಾವಂತವಿರುತ್ತದೆ. ನನ್ನ ಮನೆಯಲ್ಲಿ ಪ್ರತಿಷ್ಠಾಪಿಸುವ ವಿಗ್ರಹ ಪೂರ್ತಿಗೊಳ್ಳಲು ಕೆಲವೊಂದು ಕೆಲಸಗಳು ಬಾಕಿ ಇದ್ದವು. ಈ ನಡುವೆ ಸ್ವಲ್ಪ ಅನಾರೋಗ್ಯ ಕೂಡ ಕಾಡಿತು. ಹಾಗಾಗಿ ಸಮಯದ ಅಭಾವದಿಂದ ಶಲ್ಯ ಮತ್ತು ದೋತಿಯನ್ನು ಮಣ್ಣಿನಿಂದ ಮಾಡುವ ಬದಲು, ಅಂಥ ಬಟ್ಟೆಯನ್ನೇ ತಂದು ಜೋಡಿಸಲಾಯಿತು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಕಳೆದ ವರ್ಷ ಅವರು ಯಕ್ಷಗಾನ ವೇಷಧಾರಿಯಂತಿರುವ ಗಣಪತಿ ವಿಗ್ರಹ ತಯಾರಿಸಿದ್ದರು. ವಿಗ್ರಹದ ಮೇಲಿನ ವೇಷ– ಭೂಷಣಗಳನ್ನೂ ಮಣ್ಣಿನಲ್ಲೇ ಅತ್ಯಂತ ಸಹಜವಾಗಿ ರೂಪಿಸಿದ್ದರು. ಇದು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು.
ಅವರು ಈ ಬಾರಿಯೂ ತಯಾರಿಸಿರುವ ಗಣಪತಿ ವಿಗ್ರಹಗಳು ಅತ್ಯಂತ ಆಕರ್ಷಕವಾಗಿವೆ. ವಿವಿಧ ಕಡೆಗಳಲ್ಲಿ ಪ್ರತಿಷ್ಠಾಪಿಸಲು ನೀಡಿರುವ ಮೂರ್ತಿಗಳಲ್ಲೂ ದೋತಿಯನ್ನು ನೈಜ ಎಂಬಂತೆ ಮಣ್ಣಿನಲ್ಲೇ ಮೂಡಿಸಿದ್ದಾರೆ. ಅವು ಆರಾಧಕರನ್ನು ಆಕರ್ಷಿಸುತ್ತಿದ್ದು, ಜಿ.ಡಿ.ಭಟ್ಟರ ಕಲಾ ನೈಪುಣ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಬಹುಮುಖ ಪ್ರತಿಭೆ:ಜಿ.ಡಿ.ಭಟ್ಟ ಕೆಕ್ಕಾರ ಅವರು ಬಹುಮುಖ ಪ್ರತಿಭೆಯ ಕಲಾವಿದರು. ನಾಟಕ ಕಲಾವಿದರಾಗಿ, ನಿರ್ದೇಶಕರಾಗಿಯೂ ಪ್ರಸಿದ್ಧರಾಗಿದ್ದಾರೆ. ಅವರು ಮಣ್ಣಿನಿಂದ ತಯಾರಿಸುವ ವಿವಿಧ ಕಲಾಕೃತಿಗಳಿಗೆ ಬಲು ಬೇಡಿಕೆ ಇದೆ. ರೈತರ ಬೆಳೆಗೆ ಕಾಟ ಕೊಡುವ ಕೋತಿಯನ್ನೂ ಅವರು ಚಾಣಾಕ್ಷತನದಿಂದ ಪಂಜರದಲ್ಲಿ ಹಿಡಿದಿಡಬಲ್ಲರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.