ADVERTISEMENT

ಮೊದಲೊಂದಿಪೆ ನಿನಗೆ ಗಣಪ....

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 9:48 IST
Last Updated 3 ಸೆಪ್ಟೆಂಬರ್ 2019, 9:48 IST
ಶಿರಸಿ ಡ್ರೈವರ್ ಕಟ್ಟೆಯಲ್ಲಿ ಪ್ರತಿಷ್ಠಾಪಿಸಿರುವ ಗಣೇಶ
ಶಿರಸಿ ಡ್ರೈವರ್ ಕಟ್ಟೆಯಲ್ಲಿ ಪ್ರತಿಷ್ಠಾಪಿಸಿರುವ ಗಣೇಶ   

ಶಿರಸಿ: ಸಮುದಾಯಗಳನ್ನು ಒಗ್ಗೂಡಿಸುವ, ದ್ವೇಷವನ್ನು ತೊಡೆದು ಪ್ರೀತಿಯನ್ನು ಪಸರಿಸುವ ಗಣೇಶ ಎಲ್ಲೆಲ್ಲೂ ಕಂಗೊಳಿಸುತ್ತಿದ್ದಾನೆ. ಮನೆ–ಮನಗಳಲ್ಲಿ, ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಈ ಗಣೇಶ ಆಸೀನನಾಗಿದ್ದಾನೆ.

ಎಡೆಬಿಡದೇ ಸುರಿಯುವ ಮಳೆಯ ನಡುವೆಯೂ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮೂರು ದಿನಗಳ ಸಾಂಪ್ರದಾಯಿಕ ಆಚರಣೆಗೆ ಮಂಗಳವಾರ ತೆರೆಬಿದ್ದಿತು.

ತದಿಗೆಯಂದು ಗೌರಿಯನ್ನು ಮನೆಗೆ ತರುವ ಮೂಲಕ ಆರಂಭವಾಗುವ ಹಬ್ಬದ ಆಚರಣೆ, ಮರುದಿನ ಗೌರಿಸುತನ ಪೂಜೆ, ಕೊನೆಯ ದಿನ ಋಷಿ ಪಂಚಮಿಯಂದು ಗೌರಿಯನ್ನು ಕಳುಹಿಸಿ, ಗಂಗೆಯನ್ನು ತರುವುದರೊಂದಿಗೆ ಹಬ್ಬ ಮುಕ್ತಾಯವಾಯಿತು. ಮೊದಲೊಂದಿಪನಿಗೆ ಪ್ರಿಯವಾದ ಪಂಚಕಜ್ಜಾಯ, ಮೋದಕ, ಚಕ್ಕುಲಿಯ ನೈವೇದ್ಯ ಮಾಡಿ, ಚೌತಿ ಹಬ್ಬವನ್ನು ಹಿಂದೂಗಳು ಭಕ್ತಿ–ಭಾವದಿಂದ ಆಚರಿಸಿದರು. ಯುವಕ ಮಂಡಳಗಳು ಸಾರ್ವಜನಿಕ ಸ್ಥಳಗಳಲ್ಲಿ ಆಕರ್ಷಕ ಮಂಟಪಗಳನ್ನು ಕಟ್ಟಿ, ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿವೆ. ಇದೇ ಮೊದಲ ಬಾರಿಗೆ ಶಿರಸಿಯಲ್ಲಿರುವ ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯಾಲಯದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ತಾಲ್ಲೂಕಿನಲ್ಲಿ ಸುಮಾರು 194 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ADVERTISEMENT

ನಗರದ ದೇವಿಕೆರೆ, ಬಸ್‌ ನಿಲ್ದಾಣ, ಆಟೊರಿಕ್ಷಾ ನಿಲ್ದಾಣ, ಡ್ರೈವರ್‌ಕಟ್ಟೆ, ಕೆಇಬಿ, ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗ, ಝೂವೃತ್ತ, ಉಣ್ಣೇಮಠಗಲ್ಲಿ, ಸಿಂಪಿಗಲ್ಲಿ, ಮಾರಿಗುಡಿ, ಬಾಪೂಜಿನಗರ, ರಾಯರಪೇಟೆ, ಕೋಟೆಕೆರೆ ವೃತ್ತ, ಟಿಎಸ್‌ಎಸ್ ರಸ್ತೆ, ಹನುಮಗಿರಿ, ಶಿವಾಜಿಚೌಕ ಮೊದಲಾದ ಕಡೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶಮೂರ್ತಿ ನೋಡಲು ಹಳ್ಳಿಗಳಿಂದ ಜನರು ಬರುತ್ತಿದ್ದಾರೆ. ಗಣಪತಿ ಮೂರ್ತಿ ಜೊತೆಗೆ ಇರುವ ಪೌರಾಣಿಕ ದೃಶ್ಯಾವಳಿಗಳು ಜನರನ್ನು ಸೆಳೆಯುತ್ತಿವೆ. ಝೂ ವೃತ್ತದ ಸಾರ್ವಜನಿಕ ಗಣಪತಿ ಈ ವರ್ಷ ಕೂಡ ಭಕ್ತರನ್ನು ತನ್ನೆಡೆಗೆ ಸೆಳೆಯುತ್ತಿದ್ದಾನೆ. ದೇವಾಲಯದ ಆಕರ್ಷಕ ಮಾದರಿ ನಿರ್ಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.