ADVERTISEMENT

ಅಟ್ಟದಲ್ಲಿ ಮೈದಳೆಯುತ್ತಿರುವ ಪುಟ್ಟ ಗಣಪ

ಸಣ್ಣ ವಿಗ್ರಹಗಳಿಗೆ ಹೆಚ್ಚಿದ ಬೇಡಿಕೆ; ಸಾರ್ವಜನಿಕ ಗಣೇಶೋತ್ಸವ ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 12:37 IST
Last Updated 2 ಆಗಸ್ಟ್ 2020, 12:37 IST
ಶಿರಸಿಯ ಮೋಹನ ಗುಡಿಗಾರರ ಕುಟುಂಬದವರು ಮನೆಯ ಅಟ್ಟದ ಮೇಲೆ ಗಣಪತಿ ಮೂರ್ತಿ ತಯಾರಿಸಿಟ್ಟಿರುವುದು
ಶಿರಸಿಯ ಮೋಹನ ಗುಡಿಗಾರರ ಕುಟುಂಬದವರು ಮನೆಯ ಅಟ್ಟದ ಮೇಲೆ ಗಣಪತಿ ಮೂರ್ತಿ ತಯಾರಿಸಿಟ್ಟಿರುವುದು   

ಶಿರಸಿ: ತಾಲ್ಲೂಕಿನೆಲ್ಲೆಡೆ ಗುಡಿಗಾರರ ಮನೆಗಳಲ್ಲಿ ಈಗ ಬಿಡುವಿಲ್ಲದ ಕೆಲಸ. ನಸುಕು ಹರಿಯುವ ಹೊತ್ತಿನಿಂದ ಕತ್ತಲು ಮುಸುಕುವ ತನಕವೂ ಮಣ್ಣಿನ ಸಾಂಗತ್ಯದಲ್ಲೇ ಸಮಯ ಕಳೆಯುವ ಗುಡಿಗಾರರು ಸುಂದರವಾದ ಗಣಪತಿ ಮೂರ್ತಿಯನ್ನು ಸಿದ್ಧಪಡಿಸುತ್ತಿದ್ದಾರೆ.

ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನೂ 20 ದಿನಗಳು ಬಾಕಿ ಇವೆ. ಆದರೆ, ಗುಡಿಗಾರರ ಮನೆಗಳಲ್ಲಿ ಈಗಲೇ ಸಂಭ್ರಮದ ಅಲೆ ಹರಡಿದೆ. ಆರೆಂಟು ಜನರು ಸುತ್ತುವರಿದು ಕುಳಿತು, ಲೋಕಾಭಿರಾಮವಾಗಿ ಮಾತನಾಡುತ್ತ, ಮಣ್ಣಿನಲ್ಲಿ ಗಣೇಶನ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ.

ನಗರದಲ್ಲಿ 15ಕ್ಕೂ ಹೆಚ್ಚು ಕಡೆಗಳಲ್ಲಿ ಗಣಪತಿ ವಿಗ್ರಹಗಳು ತಯಾರಾಗುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಗುಡಿಗಾರರ ಜೊತೆಗೆ ಹವ್ಯಾಸಿ ಕಲಾವಿದರು ಮಣ್ಣಿನಲ್ಲಿ ಗಣೇಶನನ್ನು ಅರಳಿಸುತ್ತಾರೆ. ಈ ಬಾರಿ ಕೋವಿಡ್ 19 ಸಾಂಕ್ರಾಮಿಕ ಕಾಯಿಲೆ ಇರುವುದರಿಂದ ಸಾರ್ವಜನಿಕ ಗಣೇಶೋತ್ಸವಗಳು ಸರಳವಾಗಿ ನಡೆಯುತ್ತವೆ. ಆದರೆ, ಮನೆಗಳಲ್ಲಿ ಹಬ್ಬದ ಆಚರಣೆಗೆ ಇದು ಅಡ್ಡಿಯಾಗಲಾರದು.

ADVERTISEMENT

‘ಒಂದೂವರೆ ತಿಂಗಳುಗಳಿಂದ ಮೂರ್ತಿ ತಯಾರಿಕೆ ಕಾರ್ಯ ನಿರಂತರವಾಗಿ ಸಾಗಿದೆ. 250ಕ್ಕೂ ಹೆಚ್ಚು ಮೂರ್ತಿಗಳನ್ನು ತಯಾರಿಸಿದ್ದೇವೆ. ಈಗ ಮೂರ್ತಿಗೆ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆ. ಕೆಲಸಗಾರರು, ಮನೆಯ ಸದಸ್ಯರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. ಮನೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸುವ ಎಲ್ಲ ಗ್ರಾಹಕರು, ಪ್ರತಿವರ್ಷದಂತೆ ಈ ವರ್ಷವೂ ಮೂರ್ತಿಗೆ ಬೇಡಿಕೆ ಸಲ್ಲಿಸಿದ್ದಾರೆ’ ಎನ್ನುತ್ತಾರೆ ಚನ್ನಪಟ್ಟಣ ಬಜಾರದಲ್ಲಿರುವ ಮೋಹನ ಗುಡಿಗಾರ ಕುಟುಂಬದವರು.

‘ಕೋವಿಡ್ 19 ಕಾರಣಕ್ಕೆ ಮೂರ್ತಿಗಳ ಬೇಡಿಕೆಯಲ್ಲಿ ವ್ಯತ್ಯಾಸವಾಗಿಲ್ಲ. ಚೌತಿ ಹಬ್ಬದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸುವ ಕ್ರಮ ಅನೇಕ ಕುಟುಂಬಗಳಲ್ಲಿ ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ. ಕಳೆದ 70–80 ವರ್ಷಗಳಿಂದ ತಪ್ಪದೇ ಗಣೇಶ ವಿಗ್ರಹ ಕೊಂಡೊಯ್ಯುವ ಗ್ರಾಹಕರಿದ್ದಾರೆ. ಅವರು ಈ ವರ್ಷ ಕೂಡ ಈಗಾಗಲೇ ಆರ್ಡರ್ ಕೊಟ್ಟಿದ್ದಾರೆ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

‘ಸಾರ್ವಜನಿಕ ವಿಗ್ರಹಗಳನ್ನು ಹೆಚ್ಚು ತಯಾರಿಸುತ್ತಿದ್ದ ಗುಡಿಗಾರರಿಗೆ ಈ ಬಾರಿ ನಷ್ಟವಾಗಿದೆ. ತಾಲ್ಲೂಕಿನಲ್ಲಿ 190ಕ್ಕೂ ಹೆಚ್ಚು ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸುತ್ತಿದ್ದರು. ಈ ಬಾರಿ ಸರಳ ಆಚರಣೆ ಇರುವುದಕ್ಕೆ ಮನೆಯಲ್ಲಿ ಸ್ಥಾಪಿಸುವ ವಿಗ್ರಹಗಳನ್ನೇ ಸಾರ್ವಜನಿಕ ಸ್ಥಳದಲ್ಲಿಯೂ ಇಟ್ಟು, ಅದೇ ದಿನ ವಿಸರ್ಜನೆ ಮಾಡುವ ಯೋಜನೆ ಬಹುತೇಕ ಗಣೇಶೋತ್ಸವ ಮಂಡಳಿಗಳದ್ದಾಗಿದೆ. ಹೀಗಾಗಿ, ಎಲ್ಲ ಗುಡಿಗಾರರ ಮನೆಗಳಲ್ಲಿ ಈ ಬಾರಿ ಸಣ್ಣ ವಿಗ್ರಹಗಳು ಮಾತ್ರ ಕಾಣಸಿಗುತ್ತವೆ’ ಎಂದು ಗುಡಿಗಾರರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.