ADVERTISEMENT

ಗೋವಾ ಪ್ರವೇಶಕ್ಕೆ ಪರಿಷ್ಕೃತ ಸುತ್ತೋಲೆ

ಕೋವಿಡ್ ಪರೀಕ್ಷೆಗೆ ದುಬಾರಿ ಶುಲ್ಕವೂ ಸೇರಿದಂತೆ ಮೂರು ಷರತ್ತು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 20:00 IST
Last Updated 25 ಆಗಸ್ಟ್ 2020, 20:00 IST
ಕಾರವಾರ ತಾಲ್ಲೂಕಿನ ಮಾಜಾಳಿ ಸಮೀಪದ ಗೋವಾ ಚೆಕ್‌ಪೋಸ್ಟ್‌ನಲ್ಲಿ ಪ್ರಯಾಣಿಕರನ್ನು ತಪಾಸಣೆ ಮಾಡುತ್ತಿರುವುದು
ಕಾರವಾರ ತಾಲ್ಲೂಕಿನ ಮಾಜಾಳಿ ಸಮೀಪದ ಗೋವಾ ಚೆಕ್‌ಪೋಸ್ಟ್‌ನಲ್ಲಿ ಪ್ರಯಾಣಿಕರನ್ನು ತಪಾಸಣೆ ಮಾಡುತ್ತಿರುವುದು   

ಕಾರವಾರ: ಅಂತರರಾಜ್ಯ ಸಂಚಾರಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವು ಮಾಡಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಹೊರಡಿಸಿದ್ದರೂ ಗೋವಾ ಮಾತ್ರ ಅದನ್ನು ಮುಕ್ತವಾಗಿ ಪಾಲಿಸುತ್ತಿಲ್ಲ. ರಾಜ್ಯಕ್ಕೆ ಬರುವ ಹೊರರಾಜ್ಯದವರಿಗೆ ಷರತ್ತುಗಳನ್ನು ವಿಧಿಸಿದ್ದು, ಮಂಗಳವಾರ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ.

ಷರತ್ತುಗಳು:ಹೊರರಾಜ್ಯಗಳಿಂದ ಬರುವವರು ಕೋವಿಡ್ 19 ನೆಗೆಟಿವ್ ವರದಿಯನ್ನು ಹೊಂದಿದ್ದರೆ, ಅವರು ಕೋವಿಡ್ ಪರೀಕ್ಷೆ ಮಾಡಿಸಿದ ದಿನಾಂಕದಿಂದ 48 ಗಂಟೆಗಳ ವಾಸ್ತವ್ಯಕ್ಕೆ ಅನುಮತಿ ನೀಡಲಾಗುತ್ತದೆ. ಎರಡನೇ ಆಯ್ಕೆಯಾಗಿ, ಪ‍್ರಯಾಣಿಕರು 14 ದಿನ ಹೋಂ ಕ್ವಾರಂಟೈನ್ ಇರಬಹುದು. ಈ ಎರಡೂ ಆಯ್ಕೆಗಳು ಬೇಡದಿದ್ದರೆ, ಕೋವಿಡ್ 19 ಪರೀಕ್ಷೆಗೆ ₹ 2 ಸಾವಿರ ಪಾವತಿಸಬೇಕು ಎಂದು ಸೂಚಿಸಲಾಗಿದೆ.

ಗೋವಾದಲ್ಲಿ ಉದ್ಯೋಗದಲ್ಲಿರುವ ನೂರಾರು ಮಂದಿ ಕನ್ನಡಿಗರು ಗಣೇಶ ಚತುರ್ಥಿ ಸಂದರ್ಭದಲ್ಲಿ ತಮ್ಮ ಊರಿಗೆ ಬಂದಿದ್ದರು. ಶುಲ್ಕ ವಿಧಿಸುವ ಬಗ್ಗೆ ಮೊದಲು ಸೂಚನೆ ನೀಡದ ಅಲ್ಲಿನ ಸರ್ಕಾರ, ಉದ್ಯೋಗಿಗಳು ವಾಪಸ್ ಹೋಗುವ ಸಂದರ್ಭದಲ್ಲಿ ನಿಯಮ ಜಾರಿ ಮಾಡಿದೆ. ಇದರಿಂದ ಬಡ ನೌಕರರಿಗೆ ಸಮಸ್ಯೆಯಾಗಿದೆ. ಒಂದುವೇಳೆ ಹೋಂ ಕ್ವಾರಂಟೈನ್‌ಗೆ ಒಳಗಾದರೆ ತಾವು ಕೆಲಸ ಮಾಡುವ ಸಂಸ್ಥೆಗಳು ಗೈರು ಹಾಜರಿ ನೆಪದಲ್ಲಿ ವೇತನ ಕಡಿತ ಮಾಡಬಹುದು ಅಥವಾ ನೌಕರಿಯಿಂದಲೇ ತೆಗೆದುಬಿಡಬಹುದು ಎಂದು ಉದ್ಯೋಗಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಜಿಲ್ಲೆಯ ಜನಪ್ರತಿನಿಧಿಗಳು ಗೋವಾ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.