
ಪ್ರಜಾವಾಣಿ ವಾರ್ತೆ
ಕಾರವಾರ: ಎರಡು ದಿನಗಳಲ್ಲಿ ಗೋವಾದ ಗಡಿಭಾಗಕ್ಕೆ ಹೊಂದಿಕೊಂಡ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದ ಅಬಕಾರಿ ಅಧಿಕಾರಿಗಳ ತಂಡವು ಅಕ್ರಮವಾಗಿ ಸಾಗಿಸುತ್ತಿದ್ದ ₹13.76 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದೆ.
‘ತಾಲ್ಲೂಕಿನ ಮಾಜಾಳಿಯ ಗಾಂವಗೇರಿ ಕ್ರಾಸ್ ಬಳಿ ಬುಧವಾರ ನಸುಕಿನ ಜಾವ ಕಾರ್ಯಾಚರಣೆ ನಡೆಸಿದ ವೇಳೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಗೋವಾ ಮದ್ಯದ ದಾಸ್ತಾನು ಪತ್ತೆ ಹಚ್ಚಲಾಯಿತು. ಕಾರಿನ ಸಹಿತ ₹6.14 ಲಕ್ಷ ಮೌಲ್ಯದ 133.56 ಲೀ. ಗೋವಾ ಮದ್ಯ ವಶಕ್ಕೆ ಪಡೆಯಲಾಯಿತು’ ಎಂದು ಅಬಕಾರಿ ಡಿಎಸ್‌ಪಿ ರಮೇಶ ಭಜಂತ್ರಿ ತಿಳಿಸಿದ್ದಾರೆ.
‘ಗೋವಾ ರಾಜ್ಯದ ಗಡಿಗೆ ಸಮೀಪದಲ್ಲಿರುವ ಮುಡಗೇರಿ ಡ್ಯಾಂ ಪ್ರದೇಶದಲ್ಲಿ ಪರಿಶೀಲನೆ ಕೈಗೊಂಡ ವೇಳೆ ಅರಣ್ಯ ಮಾರ್ಗದಲ್ಲಿ ಸ್ಕೂಟರ್ ಬಳಸಿ ಸಾಗಿಸುತ್ತಿದ್ದ ಗೋವಾ ಮದ್ಯ ದಾಸ್ತಾನನ್ನು ಗುರುವಾರ ವಶಕ್ಕೆ ಪಡೆಯಲಾಗಿದೆ. ₹3.62ಲಕ್ಷ ಮೌಲ್ಯದ 30.4 ಲೀ ಗೋವಾ ಪೆನ್ನಿ, 284 ಲೀ. ಮದ್ಯ, 60.50 ಲೀ. ಬಿಯರ್‌ನ್ನು ವಶಕ್ಕೆ ಪಡೆಯುವ ಜೊತೆಗೆ ಅಂದಾಜು ₹4ಲಕ್ಷ ಮೌಲ್ಯದ 5 ಸ್ಕೂಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ವಿವರಿಸಿದ್ದಾರೆ.
ಎರಡೂ ಪ್ರಕರಣಗಳಲ್ಲಿಯೂ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.