ಗೋಕರ್ಣ: ಗೋಕರ್ಣದ ಪ್ರತಿ ಮನೆಮನೆಯಲ್ಲಿ ಸ್ಥಾಪಿಸಿದ ಗಣೇಶನನ್ನು ಶನಿವಾರ ಮುಖ್ಯ ಸಮುದ್ರದಲ್ಲಿ ವಿಸರ್ಜಿಸಲಾಯಿತು.
ಸಾವಿರಕ್ಕೂ ಹೆಚ್ಚು ಗಣಪತಿಯನ್ನು ನಿರ್ದಿಷ್ಟ ಅವಧಿಯಲ್ಲಿ ಸಮುದ್ರದಲ್ಲಿ ವಿಸರ್ಜನೆ ಮಾಡಿದ್ದು ಆಕರ್ಷಕವಾಗಿತ್ತು. ನೂರಾರು ಗಣಪತಿಗಳು ಒಂದೇ ಸಾಲಿನಲ್ಲಿ ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ಸ್ಥಾಪಿಸುವ ಗಣೇಶನೊಂದಿಗೆ ಮೆರವಣಿಗೆಯಲ್ಲಿ ಸಾಗಿ ವಿಸರ್ಜನೆಗೊಂಡಿದ್ದು ಅತ್ಯಂತ ಮನಮೋಹಕವಾಗಿ ನೋಡುಗರ ಮನ ಸೆಳೆಯಿತು. ಗಣಪತಿ ಮೆರವಣಿಗೆ ವೇಳೆ ವಿಧ ವಿಧದ ವಾದ್ಯಗಳು ಹಾಗೂ ಛದ್ಮವೇಷಗಳು ಮೆರವಣಿಗೆಗೆ ಕಳೆ ತಂದು ಕೊಟ್ಟಿತು.
ಸಾರ್ವಜನಿಕವಾಗಿ ಸ್ಥಾಪಿಸಲ್ಪಟ್ಟ ರಥಬೀದಿಯ ಯಂಗ್ ಸ್ಟಾರ್ ಕ್ಲಬ್ ಮತ್ತು ಬಿಜ್ಜೂರಿನ ಯುವಕ ಸಂಘದ ಗಣಪತಿಯನ್ನು ಭಾನುವಾರ ವಿಸರ್ಜನೆ ಮಾಡಲಿದ್ದಾರೆ. ಮೇಲಿನಕೇರಿಯ ವಿಜಯ ವಿನಾಯಕ ಯುವಕ ಸಂಘದ ಗಣೇಶನನ್ನು ಸೋಮವಾರ ಮತ್ತು ಆಟೋ ರಿಕ್ಷಾ ಚಾಲಕ ಮತ್ತು ಮಾಲೀಕರ ಸಂಘದ ಗಣೇಶನನ್ನು ಮಂಗಳವಾರ ವಿಸರ್ಜಿಸಲಿದ್ದಾರೆ.
ಸಹಕರಿಸಿದ ಮಳೆರಾಯ: ಕಳೆಡೆರಡು ದಿವಸದಿಂದ ಎಡಬಿಡದೇ ಸುರಿಯುತ್ತಿದ್ದ ಮಳೆರಾಯ ಗಣಪತಿ ವಿಸರ್ಜನೆಯ ವೇಳೆ ಬಿಡುವು ನೀಡಿ ಸಹಕರಿಸಿತು. ಭಕ್ತರ ಮುಖದಲ್ಲಿ ಮಂದಹಾಸ ಮೂಡಿಸಿತ್ತು . ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್. ನೇತೃತ್ವದಲ್ಲಿ ಗೋಕರ್ಣದ ಪೊಲೀಸರು ಹಾಗೂ ಕರಾವಳಿ ಕಾವಲು ಪಡೆಯ ಪೊಲೀಸರು ಸಮುದ್ರ ತೀರದಲ್ಲಿ ಯಾವುದೇ ಅವಘಡವಾಗದಂತೆ ಸೂಕ್ತ ಎಚ್ಚರಿಕೆ ವಹಿಸಿದ್ದರು.
ಗೋಕರ್ಣದ ಮುಖ್ಯ ರಸ್ತೆಯಲ್ಲಿ ಗಣಪತಿ ಮೂರ್ತಿಯನ್ನು ಮೆರವಣಿಗೆಯಲ್ಲಿ ವಿಸರ್ಜನೆಗೆ ತೆಗೆದುಕೊಂಡು ಹೋಗುತ್ತಿರುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.