ಗೋಕರ್ಣ: ಇಲ್ಲಿಯ ಕೋಟಿತೀರ್ಥದಲ್ಲಿ ಕ್ರೋಧಿ ಸಂವತ್ಸರದ ಕಾರ್ತೀಕ ಕೃಷ್ಣ ತ್ರಯೋದಶಿಯ ದಿನವಾದ ಗುರುವಾರ ರಾತ್ರಿ ದೀಪೋತ್ಸವ ನಡೆಸಲಾಯಿತು.
ಕೋಟಿತೀರ್ಥದ ಸುತ್ತಲೂ ಮಣ್ಣಿನ ಹಣತೆಯಿಂದ ದೀಪ ಹಚ್ಚಲಾಗಿತ್ತು. ಕೋಟಿತೀರ್ಥದಲ್ಲಿರುವ ಕೋಟೇಶ್ವರನಿಗೆ ಸಾಮಾಜಿಕ ಕಲ್ಯಾಣಕ್ಕೋಸ್ಕರ ಪಂಚಾಮೃತ, ನವಧಾನ್ಯ ರುದ್ರ, ನಮಕ, ಚಮಕಗಳಿಂದ ಪೂಜೆ ನೆರವೇರಿಸಲಾಯಿತು.
ಈ ವರ್ಷ ದಶಮಾನೋತ್ಸವದ ಸಂಭ್ರಮದ ಅಂಗವಾಗಿ ಎರಡು ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೊದಲನೇ ದಿನ ಅಂದರೆ ಬುಧವಾರ ಎಷ್ಟೋ ದಶಮಾನಗಳ ನಂತರ ಕೋಟಿತೀರ್ಥದಲ್ಲಿರುವ ಕೋಟೇಶ್ವರನಿಗೆ ಕಲಾವೃದ್ಧಿ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಗುರುವಾರ ರುದ್ರಾಭಿಷೇಕ, ಷೋಡಶೋಪಚಾರ ಪೂಜೆಯ ಜೊತೆಗೆ ರಜತ ಮುಖ ಕವಚ ಹಾಗೂ ರಜತಮಯ ರುದ್ರಾಕ್ಷಿ ಸಮರ್ಪಣೆ ಮಾಡಲಾಯಿತು.
ಆಕರ್ಷಕ ಸಿಡಿಮದ್ದಿನ ಪ್ರದರ್ಶನ ಎಲ್ಲರ ಮನಸೂರೆಗೊಂಡಿತು. ಕೋಟಿತೀರ್ಥದ ರಸ್ತೆಯಿಂದ ಹಿಡಿದು ಇಡೀ ಕೋಟಿತೀರ್ಥದ ಸುತ್ತಲೂ ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ಗುರುವಾರ ಕೋಟಿತೀರ್ಥದ ಮಧ್ಯದಲ್ಲಿರುವ ಕೋಟೇಶ್ವರ ಲಿಂಗದ ನಾಲ್ಕು ಮೂಲೆಗಳಿಂದಲೂ ಗಂಗಾ ಆರತಿ ನೆರವೇರಿಸಲಾಯಿತು. ಇದು ದೀಪೋತ್ಸವಕ್ಕೆ ಮತ್ತಷ್ಟು ಮೆರಗು ನೀಡಿತು. ಸುಮಾರು 15 ನಿಮಿಷಕ್ಕಿಂತಲೂ ಹೆಚ್ಚು ಹೊತ್ತು ನಡೆದ ಈ ಆರತಿ, ಕಾಶಿಯ ಗಂಗಾ ಆರತಿಯನ್ನು ನೆನಪಿಸುವಂತೆ ಭಾಸವಾಗಿತ್ತು. ಪಂಡಿತರ ವೇದ ಪಠಣ ಸುಶ್ರಾವ್ಯವಾಗಿ ಕೇಳಿ ಬಂದಿತು. ಸಾವಿರಾರು ಜನ ಈ ಸುಂದರ ದೃಶ್ಯವನ್ನು ನೋಡಿ ಆನಂದಿಸಿದರು.
ಬುಧವಾರ ರಾತ್ರಿ ನಡೆದ ಬಡಗು ತಿಟ್ಟಿನ ಪ್ರಸಿದ್ದ ಮೇಳವಾದ ಶ್ರೀಮೆಕ್ಕೆಕಟ್ಟು ಮೇಳದವರಿಂದ ಕೃಷ್ಣ ಜನ್ಮ - ಕೃಷ್ಣ ಲೀಲೆ ಹಾಗೂ ಐರಾವತ ಎಂಬ ಪೌರಾಣಿಕ ಯಕ್ಷಗಾನ ಎಲ್ಲರ ಮನ ತಣಿಸಿತು. ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು ಅವರ ಇಂಪಾದ ಭಾಗವತಿಗೆ ಎಲ್ಲರನ್ನೂ ರಂಜಿಸಿತು.
ಸುಬ್ರಹ್ಮಣ್ಯ ಹೆಗಡೆ ಮೂರೂರು ಮತ್ತು ಸೀತಾರಾಮ ಭಂಡಾರಿ ಮೃದಂಗದಲ್ಲೂ, ಪ್ರಜ್ವಲ್ ಮುಂಡಾಡಿ ಮತ್ತು ಗುರುದತ್ತ ಪಡಿಯಾರ ಚೆಂಡೆಯಲ್ಲಿ ಸಾಥ್ ನೀಡಿದರು. ಹಾಸ್ಯದಲ್ಲಿ ರಮೇಶ ಭಂಡಾರಿ ಜನರು ಹುಚ್ಚೆದ್ದು ಕುಣಿಯುವಂತೆ ಅಭಿನಯಿಸಿದರು.
ಮುಮ್ಮೇಳದಲ್ಲಿ ನಿಲ್ಕೋಡ ಶಂಕರ ಹೆಗಡೆ, ವಿದ್ಯಾಧರ ಜಲವಳ್ಳಿ, ನಾಗರಾಜ ಭಂಡಾರಿ ಗುಣವಂತೆ, ಸನ್ಮಯ ಭಟ್ ಮಳವಳ್ಳಿ ಮುಂತಾದವರು ತಮ್ಮ ಅಭಿನಯದಿಂದ ಯಕ್ಷಪ್ರಿಯರ ಮನ ತಣಿಸಿದರು.
ಗುರುವಾರ ರಾತ್ರಿ ಉಡುಪಿಯ ಜ್ಞಾನಾ ಐತಾಳ ನೇತೃತ್ವದ ಹೆಜ್ಜೆನಾದ ತಂಡದವರಿಂದ ಸೆಮಿಕ್ಲಾಸಿಕಲ್ ನೃತ್ಯ ಕಾರ್ಯಕ್ರಮ ಎಲ್ಲರನ್ನೂ ರಂಜಿಸಿತು. ಕೋಟಿತೀರ್ಥದ ಪಟ್ಟವಿನಾಯಕ ಗೆಳೆಯರ ಬಳಗ ಈ ಎಲ್ಲ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.