
ಗೋಕರ್ಣ: ಮಹಾಶಿವರಾತ್ರಿಯ ಅಂಗವಾಗಿ ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರನ ಬ್ರಹ್ಮರಥೋತ್ಸವ ಬುಧವಾರ ಹರಹರ ಮಹಾದೇವ ಘೋಷಣೆಯೊಂದಿಗೆ ರಥಬೀದಿಯಲ್ಲಿ ವೈಭವದಿಂದ ನಡೆಯಿತು.
ರಥಬೀದಿಯಲ್ಲಿ ನಡೆದ ಈ ಆಕರ್ಷಕ ರಥೋತ್ಸವ ಮುಖ್ಯದೇವರಾದ ಮಹಾಬಲೇಶ್ವರನ ಮೂರ್ತಿಯನ್ನು ಹೊತ್ತು ವೆಂಕಟ್ರಮಣ ದೇವಸ್ಥಾನದವರೆಗೆ ಸಾಗಿ ತಿರುಗಿ ಮೂಲಸ್ಥಾನಕ್ಕೆ ಬಂದು ನಿಂತಿತು. ಅತಿ ಎತ್ತರದ ರಥ ಎಂದೇ ಪ್ರಸಿದ್ಧಿ ಪಡೆದ, ಅತಿ ಪುರಾತನವಾದ ಈ ರಥವನ್ನು ಬಣ್ಣ-ಬಣ್ಣದ ಬಾವುಟಗಳಿಂದ, ತಳಿರು-ತೋರಣಗಳಿಂದ ಶೃಂಗರಿಸಲಾಗಿತ್ತು.
ರಥವನ್ನು ಆಕರ್ಷಕವಾಗಿ ಹೂವಿನಿಂದ ಅಲಂಕರಿಸಲಾಗಿತ್ತು. ಸ್ಥಳೀಯರ ಸಂಗಡ ಅನೇಕ ವಿದೇಶಿಯರೂ ಸೇರಿದಂತೆ ಸುಮಾರು 15 ಸಾವಿರದಷ್ಟ್ಟು ಜನ ರಥೋತ್ಸವದಲ್ಲಿ ಪಾಲ್ಗೊಂಡು ಸಂತೋಷಪಟ್ಟರು. ಸಹಸ್ರಾರು ಜನ ಸುತ್ತಮುತ್ತ ನಿಂತು ರಥೋತ್ಸವವನ್ನು ನೋಡಿ ಆನಂದಿಸಿದರು.
ರಥೋತ್ಸವದ ಉದ್ದಕ್ಕೂ ಹರಹರ ಮಹಾದೇವ, ಜಯ ಜಯ ಶಂಕರ, ಹರ ಹರ ಶಂಕರ ಎಂಬ ಶಿವ ಸ್ತುತಿಗಳು ಭಕ್ತರ ಬಾಯಲ್ಲಿ ಕೇಳಿ ಬಂದಿತು. ರಸ್ತೆಯ ಎರಡು ಪಕ್ಕದಲ್ಲಿಯ ಮನೆಯ ಮಹಡಿಗಳ ಮೇಲೆ ವಿದೇಶಿಯರೂ ಸೇರಿದಂತೆ ಭಕ್ತರು ನಿಂತು ಪೋಟೊ ತೆಗೆಯುವುದು ರೋಚಕವಾಗಿ ಕಂಡು ಬಂದಿತು.
ಗೋಕರ್ಣದ ರಥಬೀದಿ ಜನರಿಂದ ತುಂಬಿ ತುಳಕಿದ್ದು ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ಈ ರಥೋತ್ಸವಕ್ಕೆ ಸಾಕ್ಷಿಯಾದರು. ಭಟ್ಕಳ ಡಿ.ಎಸ್.ಪಿ ಗಿರೀಶ ಇವರ ಮಾರ್ಗದರ್ಶನದಲ್ಲಿ ಗೋಕರ್ಣ ಠಾಣಾ ನಿರೀಕ್ಷಕ ಶ್ರೀಧರ ಎಸ್.ಆರ್. ನೇತೃತ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಸೂಕ್ತ ಬಂದೋಬಸ್ತ್ ಏರ್ಪಡಿಸಿ ಯಾವುದೇ ಅವಘಡ ಆಗದಂತೆ ನೋಡಿಕೊಂಡರು.
ಮೇಲುಸ್ತುವಾರಿ ಸಮಿತಿಯ ಸದಸ್ಯರು, ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು. ಕವಳೆ ಮಠದ ಕೈವಲ್ಯ ಮಠಾಧೀಶರಾದ ಶಿವಾನಂದ ಸರಸ್ವತಿ ಸ್ವಾಮೀಜಿ ರಥಕಾಣಿಕೆ ನೆರವೇರಿಸಿದರು. ಆನುವಂಶೀಯ ಉಪಾಧಿವಂತ ಮಂಡಳ ಮತ್ತು ಪರಿವರ್ತನಾ ಗೋಕರ್ಣ ಇದರ ಸದಸ್ಯರು ಮಜ್ಜಿಗೆ, ತಂಪು ಪಾನೀಯ ವಿತರಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.