
ಗೋಕರ್ಣ: ಬೀಚ್ ಪ್ರವಾಸೋದ್ಯಮದಲ್ಲಿ ಹೆಸರು ಪಡೆದ ಗೋಕರ್ಣ, ಯುವ ಜನಾಂಗದವರ ಹೆಚ್ವಿನ ಆಕರ್ಷಣೆಗೆ ಒಳಗಾಗುತ್ತಿದೆ. ಅದಕ್ಕೆಲ್ಲಾ ಗೋಕರ್ಣದಲ್ಲಿ ಮಾದಕದ್ರವ್ಯ ಲಭ್ಯತೆ ಇದೆ ಎಂಬ ಕಾರಣ ಕೇಳಿ ಬರುತ್ತಿದೆ. ಮಾದಕದ್ರವ್ಯ ವ್ಯಸನದಿಂದ ಯುವಜನಾಂಗ ಅವನತಿಯತ್ತ ಸಾಗುತ್ತಿದ್ದಾರೆ ಎಂಬ ಆತಂಕ ವ್ಯಕ್ತವಾಗುತ್ತಿದೆ. ಇದರಿಂದ ಡ್ರಗ್ಸ್ ಮುಕ್ತ ಗೋಕರ್ಣ ನಿರ್ಮಾಣಕ್ಕೆ ನಾವೆಲ್ಲ ಶ್ರಮಿಸೋಣ ಎಂದು ಕುಮಟಾ ತಾಲ್ಲೂಕಾ ವೈದ್ಯಾಧಿಕಾರಿ ಆಜ್ಞಾ ನಾಯಕ ಕರೆ ನೀಡಿದರು..
ಅವರು ಶುಕ್ರವಾರ ಗೋಕರ್ಣದಲ್ಲಿ ಪೊಲೀಸರು ಆಯೋಜಿಸಿದ್ದ ಮಾದಕದ್ರವ್ಯಗಳ ಮುಕ್ತ ಸಮಾಜಕ್ಕಾಗಿ ಆಪ್ತ ಸಮಾಲೋಚನಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಾದಕ ದ್ರವ್ಯವು ಮನುಷ್ಯನ ಮೆದುಳಿಗೆ ನೇರ ಪರಿಣಾಮ ಬೀರುತ್ತದೆ. ಮನುಷ್ಯನನ್ನು ನಿಷ್ಕ್ರಿಯಗೊಳಿಸುತ್ತದೆ. ಕ್ರಮೇಣ ಮನುಷ್ಯನ ಕಾರ್ಯಕ್ಷಮತೆ ಕಡಿಮೆಯಾಗುತ್ತಾ ಬರುತ್ತದೆ. ಯೋಚನಾಶಕ್ತಿಯನ್ನೂ ಕಳೆದುಕೊಂಡು, ನಿರುಪಯುಕ್ತ ಮನುಷ್ಯನಾಗಿ ಪರಿವರ್ತನೆಯಾಗುತ್ತಾನೆ. ಅದಕ್ಕಾಗಿ ಮಾದಕ ವ್ಯಸನಿಗಳಾಗಬಾರದು ಎಂದು ಹೇಳಿದರು
ಇದಕ್ಕೂ ಮೊದಲು ಗೋಕರ್ಣ ಠಾಣೆಯ ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್. ಮಾತನಾಡಿ, ಮಾದಕವ್ಯಸನಿಗಳನ್ನು ಚಟದಿಂದ ಬಿಡಿಸಿ, ಮುಖ್ಯವಾಹಿನಿಗೆ ತರುವುದೇ ಈ ಶಿಬಿರದ ಉದ್ದೇಶ. ಇದಕ್ಕೆ ಸನ್ಮಿತ್ರ ಕಾರ್ಯಾಗಾರ ಎಂಬ ಹೆಸರಿಡಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮನಾ ಗೌಡ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತೊರ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ ಕವರಿ, ಜಿಲ್ಲಾ ಸರಾಯಿ ಮಾರಾಟಗಾರರ ಸಂಘದ ಅದ್ಯಕ್ಷ ನಾಗರಾಜ ಹಿತ್ತಲಮಕ್ಕಿ, ಭದ್ರಕಾಳಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಸಿ.ನಾಯಕ ಮಾತನಾಡಿದರು. ವೇದಿಕೆಯ ಮೇಲೆ ಭದ್ರಕಾಳಿ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಸಿ.ಜೆ.ನಾಯಕ ದೊರೆ. ಬಿ.ಜೆ.ಪಿ ಪ್ರಮುಖ ಕುಮಾರ ಮಾರ್ಕಾಂಡೆ, ರೆಸಾರ್ಟ್ ಮಾಲೀಕರ ಯೂನಿಯನ್ ಅಧ್ಯಕ್ಷ ನಿತ್ಯನಂದ ಶೆಟ್ಟಿ ಇದ್ದರು.
ಪಿ.ಎಸ್.ಐ ಖಾದರ ಭಾಷಾ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ಮೊತ್ತೊಬ್ಬ ಪಿ.ಎಸ್.ಐ ಶಶಿಧರ ಎಚ್. ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.