ADVERTISEMENT

ಶಿವರಾತ್ರಿ ಆಚರಣೆಗೆ ಗೋಕರ್ಣ ಸಜ್ಜು: ಸ್ಥಳೀಯ ಆಡಳಿತ ನಿಷ್ಕ್ರೀಯ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 2:57 IST
Last Updated 15 ಫೆಬ್ರುವರಿ 2026, 2:57 IST
ದೇವಸ್ಥಾನದ ಶಿವಪದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಕಂದಾಯ ಅಧಿಕಾರಿ ತಮ್ಮಣ್ಣ ಗಾಣಿಗೇರ್, ಮೇಲುಸ್ತುವಾರಿ ಸಮಿತಿಯ ಸದಸ್ಯರಾದ ಪರಮೆಶ್ವರ ಪ್ರಸಾದ ರಮಣಿ, ಮಹೇಶ ಹಿರೇಗಂಗೆ, ಭಟ್ಕಳ ವಿಭಾಗದ ನೂತನ ಡಿ.ಎಸ್.ಪಿ ಗಿರೀಶ್ ಮತ್ತು ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್ ಇದ್ದಾರೆ
ದೇವಸ್ಥಾನದ ಶಿವಪದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಕಂದಾಯ ಅಧಿಕಾರಿ ತಮ್ಮಣ್ಣ ಗಾಣಿಗೇರ್, ಮೇಲುಸ್ತುವಾರಿ ಸಮಿತಿಯ ಸದಸ್ಯರಾದ ಪರಮೆಶ್ವರ ಪ್ರಸಾದ ರಮಣಿ, ಮಹೇಶ ಹಿರೇಗಂಗೆ, ಭಟ್ಕಳ ವಿಭಾಗದ ನೂತನ ಡಿ.ಎಸ್.ಪಿ ಗಿರೀಶ್ ಮತ್ತು ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್ ಇದ್ದಾರೆ   

ಗೋಕರ್ಣ: ಶಿವಯೋಗದ ಆಚರಣೆಗೆ ಗೋಕರ್ಣ ಸಜ್ಜಾಗಿದೆ. ಶಿವರಾತ್ರಿ ಉತ್ಸವದ ಅಂಗವಾಗಿ ಶನಿವಾರ ಮಹಾಬಲೇಶ್ವರ ದೇವಸ್ಥಾನದ ಶಿವಪದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ದೇವಸ್ಥಾನದ ಆಡಳಿತ ಸಮಿತಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಶಿವಯೋಗದ ದಿವಸ ಭಕ್ತರಿಗೆ ಹಾಗೂ ಸ್ಥಳೀಯರಿಗೆ ದೇವರ ದರ್ಶನಕ್ಕೆ ಯಾವುದೇ ಸಮಸ್ಯೆಯಾಗದಂತೆ ಸಿದ್ಧತೆಯನ್ನು ಕೈಗೊಂಡಿದೆ. ಮುಖ್ಯ ದೇವಸ್ಥಾನ ಮಹಾಬಲೇಶ್ವರ ಸೇರಿದಂತೆ ಎಲ್ಲಾ ದೇವಸ್ಥಾನವನ್ನೂ ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದೆ. ಮಹಾಬಲೇಶ್ವರ ದೇವಸ್ಥಾನದಿಂದ ಸಮುದ್ರ ತೀರದವರಿಗೆ ಆಕರ್ಷಕವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ಅತ್ಯಂತ ಎತ್ತರದ ರಥ ಎಂದೇ ಪ್ರಸಿದ್ಧಿ ಪಡೆದ ಬ್ರಹ್ಮರಥವನ್ನು ಸ್ಥಳೀಯ ಹಾಲಕ್ಕಿ ಜನಾಂಗದವರಿಂದ ಕಟ್ಟುವ ಕಾರ್ಯ ಭರದಿಂದ ಸಾಗಿದ್ದು, ಕೊನೆಯ ಹಂತಕ್ಕೆ ತಲುಪಿದೆ. ಬಣ್ಣ ಬಣ್ಣದ ಪತಾಕೆಗಳಿಂದ ರಥಕ್ಕೆ ಶೃಂಗರಿಸಲಾಗಿದೆ. ಆರೋಗ್ಯ ಇಲಾಖೆ ಜನಜಾಗೃತಿ ಕೈಗೊಂಡಿದೆ. ಸಾರ್ವಜನಿಕ ಸ್ಥಳದಲ್ಲಿ ಪಿನೈಲ್ ಸೇರಿದಂತೆ ರೋಗ ನಿರೊಧಕವನ್ನು ಸಿಂಪಡಿಸಿದೆ. ಮನೆ ಮನೆಗೂ ನೀರಿನ ಸ್ವಚ್ಛತೆಗಾಗಿ ಔಷಧಿಗಳನ್ನು ವಿತರಿಸಿದೆ. ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್. ನೇತೃತ್ವದಲ್ಲಿ ಪೊಲೀಸರು ಸೂಕ್ತ ಬಂಧವಸ್ತ ಏರ್ಪಡಿಸಲು ಎಲ್ಲಾ ಕ್ರಮಗಳನ್ನೂ ಕೈಗೊಂಡಿದ್ದಾರೆ.

ADVERTISEMENT

ದೇವಸ್ಥಾನದ ಶಿವಪದ ವೇದಿಕೆಯಲ್ಲಿ ಶನಿವಾರ ಸಂಜೆ ಕಂದಾಯ ಅಧಿಕಾರಿ ತಮ್ಮಣ್ಣ ಗಾಣಿಗೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಮೇಲುಸ್ತುವಾರಿ ಸಮಿತಿಯ ಸದಸ್ಯರಾದ ಪರಮೆಶ್ವರ ಪ್ರಸಾದ ರಮಣಿ, ಮಹೇಶ ಹಿರೇಗಂಗೆ, ಭಟ್ಕಳ ವಿಭಾಗದ ನೂತನ ಡಿಎಸ್‍ಪಿ ಗಿರೀಶ್ ಮತ್ತು ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್. 5 ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೆಂಗಳೂರಿನ ಕೆ. ಕವನಾ ಆನಂದಕುಮಾರ ಅವರಿಂದ ಭರತನಾಟ್ಯ, ಪ್ರಕಾಶ ಅಂಬೇಕರ ಸಂಗಡಿಗರಿಂದ ಭಜನೆ ಹಾಗೂ ಮೈತ್ರೇಯಿ ಮಹಿಳಾ ಮಂಡಲದ ಸದಸ್ಯರಿಂದ ಗಾಯನ, ನೃತ್ಯ ಕಾರ್ಯಕ್ರಮ ರಂಜಿಸಿತು.

ಭಾನುವಾರ ಶಿವಯೋಗದ ದಿವಸ ಜಾಗರಣೆಯ ನಿಮಿತ್ತ ಚಂದ್ರಕಾಂತ ಗೌಡ ಸಂಗಡಿಗರಿಂದ ಭಜನೆ ನಡೆಯಲಿದೆ.

ಸ್ಥಳೀಯ ಆಡಳಿತ ನಿಷ್ಕ್ರೀಯ!

‘ರಾಜ್ಯದಾದ್ಯಂತ ಪ್ರಸಿದ್ಧಿ ಪಡೆದ ಜಾತ್ರೆಯಾದರೂ ಸ್ಥಳೀಯ ಆಡಳಿತ ಸೂಕ್ತ ಸೌಲಭ್ಯ ಒದಗಿಸದೇ ನಿಷ್ಕ್ರಿಯತೆ ತೋರಿಸಿದೆ. ಕುಡಿಯುವ ನೀರಿನ ವ್ಯವಸ್ಥೆಯಾಗಲಿ ಬೀದಿ ದೀಪಗಳ ವ್ಯವಸ್ಥೆಯಾಗಲಿ ಊರಿನ ಸ್ವಚ್ಛತೆಯಾಗಲಿ ಸಮರ್ಪಕವಾಗಿ ಮಾಡಿಲ್ಲದೆ ನಿರ್ಲಕ್ಷಿಸಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾಯಿತ ಸದಸ್ಯರ ಅವದಿ ಮುಗಿದಿದ್ದು ಒಂದು ಕಾರಣವಾಗಿದೆ. ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಸ್ಪಂದಿಸುತ್ತಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.