ADVERTISEMENT

ಗೋಕರ್ಣ: ಚುರುಕುಗೊಂಡ ಪ್ರವಾಸೋದ್ಯಮ

ವಿದೇಶಿ ಪ್ರವಾಸಿಗರ ಆಗಮನ: ವಾರಾಂತ್ಯಕ್ಕೆ ಬೀಚ್‌ಗಳಲ್ಲಿ ಹೆಚ್ಚಿದ ಜನ

ರವಿ ಸೂರಿ
Published 7 ಡಿಸೆಂಬರ್ 2024, 3:58 IST
Last Updated 7 ಡಿಸೆಂಬರ್ 2024, 3:58 IST
ಗೋಕರ್ಣದ ರಥಬೀದಿಯಲ್ಲಿ ಕಂಡ ಬಂದ ವಿದೇಶಿ ಪ್ರವಾಸಿಗರು
ಗೋಕರ್ಣದ ರಥಬೀದಿಯಲ್ಲಿ ಕಂಡ ಬಂದ ವಿದೇಶಿ ಪ್ರವಾಸಿಗರು   

ಗೋಕರ್ಣ: ಅಂತರಾರಾಷ್ಟ್ರೀಯ ಪ್ರಸಿದ್ಧಿ ಪಡೆದ ಬೀಚುಗಳನ್ನು ಹೊಂದಿದ ಗೋಕರ್ಣಕ್ಕೆ ವಿದೇಶಿ ಪ್ರವಾಸಿಗರ ಆಗಮನ ಪ್ರಾರಂಭವಾಗಿದೆ. ಕೋವಿಡ್ ನಂತರ ಇಲ್ಲಿಗೆ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದ್ದರೂ, ವಿದೇಶಿಗರ ಆಗಮನದಿಂದ ಪ್ರವಾಸೋದ್ಯಮಕ್ಕೆ ಹೊಸ ಹುರುಪು ಹುಟ್ಟಿಸಿದೆ.

ಓಂ ಬೀಚ್, ಕುಡ್ಲೆ ಬೀಚ್ ಹಾಗೂ ಮೇನ್ ಬೀಚ್‌ಗಳಲ್ಲಿ ವಿದೇಶಿಗರು ಸೇರಿದಂತೆ ವಾರಾಂತ್ಯದಲ್ಲಿ ಸ್ವದೇಶಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ.

ಇಂಗ್ಲೆಂಡ್, ಫ್ರಾನ್ಸ್, ಇಟಲಿ, ಸ್ಪೇನ್, ಜರ್ಮನಿ, ಆಸ್ಟ್ರೀಯಾ, ಇಸ್ರೇಲ್ ಹಾಗೂ ರಷ್ಯಾ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಬರುತ್ತಿದ್ದಾರೆ. ಕೆಲವರಂತೂ ಇಲ್ಲಿಯ ಜನರೊಂದಿಗೆ ಬೆರೆತು ಇಲ್ಲಿಯವರಂತೆ ಉಡುಗೆ, ತೊಡುಗೆ ರೂಢಿಸಿಕೊಂಡಿದ್ದಾರೆ. ಯೋಗ, ಧ್ಯಾನದ ಆಸಕ್ತಿ ಮೂಡಿಸಿಕೊಂಡು ತಮ್ಮ ಜೀವನದಲ್ಲೂ ಅಳವಡಿಸಿಕೊಂಡಿದ್ದಾರೆ. ಆದರೆ ವಿದೇಶದಲ್ಲಿ ಕುಸಿಯುತ್ತಿರುವ ಆರ್ಥಿಕ ಸ್ಥಿತಿ, ವೀಸಾ ಅವಧಿಯ ಕಡಿತ ಪ್ರತಿ ವರ್ಷ ಬರುವ ವಿದೇಶಿಗರನ್ನು ಚಿಂತೆಗೀಡು ಮಾಡಿದೆ.

ADVERTISEMENT

ಕಳೆದೆರಡು ವರ್ಷಗಳಿಂದ ವಿದೇಶಿಗರಿಗೆ ವೀಸಾ ಸಮಸ್ಯೆ ತಲೆದೊರುತ್ತಿದೆ. ಮೊದಲು ಆರು ತಿಂಗಳು ಅಥವಾ ಒಂದು ವರ್ಷದವರೆಗೆ ವೀಸಾ ನೀಡುತ್ತಿದ್ದರು. ಆದರೆ ಈಗ ಕೇವಲ ಮೂರು ತಿಂಗಳ ಮಟ್ಟಿಗೆ ಮಾತ್ರ ಪ್ರವಾಸಿ ವೀಸಾ ನೀಡಲಾಗುತ್ತಿದೆ. ವ್ಯಾಪಾರಿ ವೀಸಾ ಮಾತ್ರ ಒಂದು ವರ್ಷದ ಮಟ್ಟಿಗೆ ನೀಡಲಾಗುತ್ತಿದೆ. ವ್ಯಾಪಾರಿ ವೀಸಾ ಪ್ರವಾಸಿಗರಿಗೆ ಸ್ವಲ್ಪ ದುಬಾರಿಯಾಗಲಿದೆ. ಅಷ್ಟು ದೂರದಿಂದ ಬಂದು ಮೂರು ತಿಂಗಳು ಮಾತ್ರ ಭಾರತದಲ್ಲಿ ಉಳಿಯಲು ಅವಕಾಶ ನೀಡುವುದು ಬೇಸರದ ಸಂಗತಿ ಎಂದು ಹಲವು ವಿದೇಶಿ ಪ್ರವಾಸಿಗರು ಹೇಳುತ್ತಾರೆ.

ವಿದೇಶಿಗರ ಉಪಯೋಗಕ್ಕಾಗಿ ಸಮುದ್ರ ತೀರಗಳಲ್ಲಿ ಪ್ರತಿ ವರ್ಷ ತಾತ್ಕಾಲಿಕ ಶೆಡ್ಸ್‌, ವಸತಿ ಗೃಹಗಳನ್ನು ಸ್ಥಳೀಯರಿಂದ ನಿರ್ಮಿಸಲಾಗಿದೆ. ಅದಕ್ಕೆ ಗ್ರಾಮ ಪಂಚಾಯಿತಿ ನಿರ್ದಿಷ್ಟ ಶುಲ್ಕ ನಿಗದಿಪಡಿಸಿ ಜಾಗದ ವಾರಸುದಾರರಿಂದ ಪಡೆಯುತ್ತಿದ್ದಾರೆ. ಗೋಕರ್ಣದ ಎಲ್ಲಾ ಬೀಚ್‌ಗಳು ಸೇರಿ ಅಂದಾಜು 300ಕ್ಕೂ ಹೆಚ್ಚು ಅಂಗಡಿಗಳು ತೆರೆಯಲ್ಪಡುತ್ತವೆ. ಇದರಿಂದ ಲಕ್ಷಾಂತರ ರೂಪಾಯಿ ಆದಾಯ ಆಡಳಿತಕ್ಕೆ ಬರುತ್ತಿದೆ.

‘ಕಡಲತೀರದಲ್ಲಿ ಪ್ರವಾಸಿಗರ ರಕ್ಷಣೆಗಾಗಿ ನಿಯೋಜಿಸಲ್ಪಡುವ ಜೀವರಕ್ಷಕರಿಗೂ ಅಂಗಡಿಕಾರರೇ ಹಣ ಸಂದಾಯ ಮಾಡಬೇಕಾಗಿದೆ. ಆದರೆ, ಅಗತ್ಯ ಸೌಲಭ್ಯ ಕಲ್ಪಿಸಿಕೊಡುತ್ತಿಲ್ಲ’ ಎಂಬುದು ಅಂಗಡಿಕಾರರ ದೂರು.

ಪ್ರಸಕ್ತ ಸಾಲಿನಲ್ಲಿ 5,400ಕ್ಕೂ ಹೆಚ್ಚು ವಿದೇಶಿಗರ ಭೇಟಿ ಟೂರಿಸ್ಟ್ ವೀಸಾ ಅವಧಿ ಕೇವಲ ಮೂರು ತಿಂಗಳು ಪ್ರವಾಸೋದ್ಯಮ ಕುಸಿತದಿಂದ ವ್ಯಾಪಾರಿಗಳಲ್ಲಿ ಅಭದ್ರತೆ
ಆರ್ಥಿಕವಾಗಿ ಪ್ರಬಲರಾದ ವಿದೇಶಿಗರು ಮಾತ್ರ ಪ್ರತಿವರ್ಷ ತಪ್ಪದೇ ಗೋಕರ್ಣಕ್ಕೆ ಬರುತ್ತಿದ್ದಾರೆ. ವಿದೇಶಿ ಯುವ ಜನತೆ ಏಷ್ಯಾದ ಕಡಿಮೆ ವೆಚ್ಚದ ಇತರ ದೇಶಗಳಿಗೆ ಪ್ರವಾಸ ಹೋಗುತ್ತಿದ್ದಾರೆ
ಸಬೀನೆ ಹೋಪ್ಪೆ ಜರ್ಮನ್ ಮಹಿಳೆ
ವಿದೇಶಿ ಪ್ರವಾಸಿಗರಿಗಿಂತ ದೇಶಿ ಪ್ರವಾಸಿಗರಿಂದಲೇ ಹೆಚ್ಚಿನ ಆದಾಯ ಬರುತ್ತಿದೆ. ಪ್ರತಿ ವರ್ಷ ಬರುವ ಹೆಚ್ಚಿನ ವಿದೇಶಿಗರು ತಾವೇ ಆಹಾರ ತಯಾರಿಸಿಕೊಳ್ಳುತ್ತಾರೆ
ಮಂಜುನಾಥ ಶೆಟ್ಟಿ ಹೋಟೆಲ್ ಮಾಲೀಕ ಗೋಕರ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.