
ಗೋಕರ್ಣ: ಅಕಾಲಿಕ ಮಳೆಯಿಂದ ಭತ್ತದ ಬೆಳಯಲ್ಲಾದ ನಷ್ಟವನ್ನು ತರಕಾರಿ ಬೆಳೆಯಲ್ಲಿ ಸರಿದೂಗಿಸುವ ಪ್ರಯತ್ನದಲ್ಲಿ ರೈತರು ಸಜ್ಜಾಗುತ್ತಿದ್ದಾರೆ. ಶೇಂಗಾ, ಗೆಣಸು ಸೇರಿದಂತೆ ವಿವಿಧ ಜಾತಿಯ ತರಕಾರಿ ಬೆಳೆಯಲು ಗದ್ದೆಗಳನ್ನು ಅಣಿಗೊಳಿಸಲಾಗುತ್ತಿದೆ.
ಈ ಭಾಗದ ಮುಖ್ಯ ಬೆಳೆ ಭತ್ತದ ಕೊಯ್ಲು ಮುಗಿದಿದ್ದು, ಬಹುತೇಕ ರೈತರು ನಷ್ಟ ಅನುಭವಿಸಿದ್ದಾರೆ. ಮಳೆಗಾಲ ಮುಗಿದು ಚಳಿಗಾಲ ಶುರುವಾದ ಬೆನ್ನಲ್ಲೇ ತರಕಾರಿ ಬೀಜ ಬಿತ್ತನೆ ಮುಗಿದಿದೆ. ಶೇಂಗಾ ಬಿತ್ತನೆಗೆ ಪ್ರಕ್ರಿಯೆಗಳು ಚುರುಕುಗೊಂಡಿವೆ.
ಗೋಕರ್ಣ ಸುತ್ತಮುತ್ತಲಿನ ಕೃಷಿಭೂಮಿಯಲ್ಲಿ ಈಗ ಹಸಿರು ಸೊಪ್ಪು, ತರಕಾರಿ ಬಳ್ಳಿಗಳು ತಲೆಎತ್ತಿವೆ. ಮೊಳಕೆಯೊಡೆದ ತರಕಾರಿ ಸಸಿಗಳ ಪಾಲನೆಯಲ್ಲಿ ರೈತರು ತೊಡಗಿರುವುದು ಕಾಣಸಿಗುತ್ತಿದೆ.
ಗೋಕರ್ಣ ಭಾಗದಲ್ಲಿ ಬೆಳೆಯುವ ತರಕಾರಿಗೆ ಹೆಚ್ಚಿನ ಬೇಡಿಕೆ ಇದೆ. ವಿವಿಧ ಜಾತಿಯ ತರಕಾರಿಗಳು ತಾಜಾ ಸಿಗುವುದರಿಂದ ಜನ ಇಷ್ಟ ಪಡಲು ಕಾರಣವಾಗಿದೆ. ಪ್ರತಿನಿತ್ಯ ಶಿರಸಿ, ಯಲ್ಲಾಪುರ, ಕಾರವಾರ ಹಾಗೂ ಹುಬ್ಬಳ್ಳಿ ಮಾರುಕಟ್ಟೆಗೆ ನೂರಾರು ಕ್ವಿಂಟಲ್ ತರಕಾರಿ ಇಲ್ಲಿಂದಲೇ ಪೂರೈಕೆ ಆಗುತ್ತದೆ. ಬಹುಬೇಡಿಕೆಯ ಸೊಪ್ಪು, ಬದನೆಕಾಯಿ, ಹಾಗಲಕಾಯಿ, ಪಟ್ಟಲಕಾಯಿ, ತೊಂಡೆಕಾಯಿ, ಕುಂಬಳಕಾಯಿ, ಸೌತೆಕಾಯಿ, ಮೊಗ್ಗೆಕಾಯಿ, ಮುಂತಾದವುಗಳನ್ನು ಬೆಳೆಯಲು ಆದ್ಯತೆ ನೀಡುತ್ತೇವೆ ಎನ್ನುತ್ತಾರೆ ಸ್ಥಳೀಯ ರೈತರು.
‘ಗೋಕರ್ಣದಲ್ಲಿ ಮನೆ ಮನೆಗೆ ತರಕಾರಿ ಮಾರಾಟ ಮಾಡುವುದೇ ಹೆಚ್ಚು ಪ್ರತಿ ದಿವಸ ಬೆಳ್ಳಿಗೆ ತಾಜಾ ತರಕಾರಿ ಗದ್ದೆಯಿಂದ ಕೊಯ್ದು ಮಹಿಳೆಯರು ತರಕಾರಿ ಮಾರಾಟಕ್ಕೆ ತೆಗೆದುಕೊಂಡು ಹೋಗುತ್ತಾರೆ. ಕೆಲವರು ತರಕಾರಿ ಸಂಗಡ ಶೇಂಗಾ, ಗೆಣಸನ್ನೂ ಬೆಳೆಯುವ ತವಕದಲ್ಲಿದ್ದಾರೆ’ ಎಂದು ರೈತ ಮಹಿಳೆ ಸಾವಿತ್ರಿ ಶುಕ್ರು ಗೌಡ ಹೇಳುತ್ತಾರೆ.
‘ಇಲ್ಲಿನ ಮರಳು ಮಿಶ್ರಿತ ಮಣ್ಣಿನ ನೆಲದಲ್ಲಿ ಬೆಳೆಯುವ ತರಕಾರಿ ತುಂಬಾ ರುಚಿಕರ ಮತ್ತು ಪ್ರಸಿದ್ಧಿ ಪಡೆದಿದೆ. ತರಕಾರಿ ಸಸಿಗಳು ಬೆಳವಣಿಗೆ ಹಂತದಲ್ಲಿದ್ದು, ಕೆಲವೇ ದಿನದಲ್ಲಿ ತಾಜಾ ಫಸಲು ಕೈಸೇರುತ್ತದೆ. ತಾಜಾ ತರಕಾರಿಯನ್ನು ಮನೆ ಮನೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವ ಪದ್ದತಿ ಮೊದಲಿನಿಂದಲೂ ರೂಢಿಯಲ್ಲಿ ಬಂದಿದೆ’ ಎಂದು ವಿವರಿಸಿದರು.
ಗೊಕರ್ಣದ ಬಿಜ್ಜೂರಿನಲ್ಲಿ ತೊಂಡೆಕಾಯಿ ಬೆಳೆಗೆ ಚಪ್ಪರ ಮಾಡಿರುವುದು.
ಕೃಷಿ ಇಲಾಖೆ ಕಚೇರಿಯಲ್ಲಿ ಶೇಂಗಾ ಬೀಜ ಲಭ್ಯವಿದ್ದು ಅದರ ಜೊತೆಗೆ ಶೇಂಗಾ ಬೆಳೆಗೆ ಬೇಕಾದ ಗೊಬ್ಬರವನ್ನೂ ಸಹ ವಿತರಿಸಲಾಗುತ್ತಿದೆವೆಂಕಟೇಶಮೂರ್ತಿ ಟಿ.ಸಿ. ಸಹಾಯಕ ಕೃಷಿ ನಿರ್ದೇಶಕ
ರಸ್ತೆಯೇ ಮಾರುಕಟ್ಟೆ
‘ತರಕಾರಿ ಬೆಳೆಗೆ ಪ್ರಸಿದ್ಧವಾದ ಗೋಕರ್ಣದಲ್ಲಿ ತರಕಾರಿ ಮಾರಾಟಕ್ಕೆ ರಸ್ತೆಯೇ ಮುಖ್ಯ ಮಾರುಕಟ್ಟೆಯಾಗಿದೆ. ಊರಿನ ಹೃದಯ ಭಾಗದಲ್ಲಿ ಗ್ರಾಮ ಪಂಚಾಯಿತಿಯಿಂದ ಮಾರುಕಟ್ಟೆ ಕಟ್ಟಲ್ಪಟ್ಟರೂ ಅದು ಉಪಯೋಗಕ್ಕೆ ಬರುತ್ತಿಲ್ಲ. ಇಕ್ಕಟ್ಟಾಗಿದ್ದು ಎಲ್ಲಾ ಮಾರಾಟಗಾರರೂ ಕುಳಿತುಕೊಳ್ಳಲು ಸ್ಥಳದ ಅಭಾವವಿದೆ. ಮೂಲಭೂತ ಸೌಕರ್ಯಗಳು ಇಲ್ಲ. ಎಪಿಎಂಸಿ ಜಾಗದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಲು ಪ್ರಸ್ತಾವನೆ ಬಂದರೂ ಅದು ಸಾಧ್ಯವಾಗಿಲ್ಲ. ಏಕೆಂದರೆ ಅದು ಊರಿನಿಂದ 2 ಕಿಲೋ ಮೀಟರ್ ದೂರದಲ್ಲಿದೆ. ಇದು ಅನುಕೂಲವಾದ ಸ್ಥಳವಲ್ಲ’ ಎಂಬುದು ತರಕಾರಿ ಬೆಳೆಗಾರರ ದೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.