ADVERTISEMENT

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅದ್ದೂರಿ ಕ್ರಿಸ್‌ಮಸ್: ಶಾಂತಿಗಾಗಿ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 7:06 IST
Last Updated 26 ಡಿಸೆಂಬರ್ 2025, 7:06 IST
ಕ್ರಿಸ್‌ಮಸ್ ಅಂಗವಾಗಿ ಕಾರವಾರದ ಕ್ಯಾಥಡ್ರಲ್ ಚರ್ಚ್‌ನಲ್ಲಿ ನಿರ್ಮಿಸಿದ ಗೋದಲಿಗೆ ಕಾರವಾರ ಕ್ಯಾಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡುಮಿಂಗ್ ಡಯಾಸ್ ಅವರು ಪೂಜೆ ಸಲ್ಲಿಸಿದರು
ಕ್ರಿಸ್‌ಮಸ್ ಅಂಗವಾಗಿ ಕಾರವಾರದ ಕ್ಯಾಥಡ್ರಲ್ ಚರ್ಚ್‌ನಲ್ಲಿ ನಿರ್ಮಿಸಿದ ಗೋದಲಿಗೆ ಕಾರವಾರ ಕ್ಯಾಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡುಮಿಂಗ್ ಡಯಾಸ್ ಅವರು ಪೂಜೆ ಸಲ್ಲಿಸಿದರು   

ಕಾರವಾರ: ಜಿಲ್ಲೆಯಾದ್ಯಂತ ಕ್ರಿಸ್‍ಮಸ್ ಆಚರಣೆ ಗುರುವಾರ ನಡೆಯಿತು. ಹಬ್ಬದ ಹಿನ್ನೆಲೆಯಲ್ಲಿ ಚರ್ಚ್‌ಗಳಲ್ಲಿ ಮಧ್ಯರಾತ್ರಿಯಿಂದಲೇ ವಿಶೇಷ ಪ್ರಾರ್ಥನೆ ನಡೆದವು.

ವಿದ್ಯುದ್ದೀಪ, ಆಕಾಶದೀಪ, ಆಲಂಕಾರಿಕ ವಸ್ತುಗಳಿಂದ ಸಿಂಗಾರಗೊಂಡಿದ್ದ ಚರ್ಚ್‌ಗಳಲ್ಲಿ ರಾತ್ರಿ 12 ಗಂಟೆಯಾಗುತ್ತಿದ್ದಂತೆ ಕ್ರೈಸ್ತ ಧರ್ಮೀಯರು ಒಟ್ಟಾಗಿ ಪ್ರಾರ್ಥನೆ ಸಲ್ಲಿಸಿದರು. ಕ್ಯಾರಲ್ (ಭಕ್ತಿಗೀತೆ) ಹಾಡುವ ಮೂಲಕ ಏಸುಕ್ರಿಸ್ತನನ್ನು ನೆನೆದರು. ತಡರಾತ್ರಿಯವರೆಗೂ ಚರ್ಚ್‌ಗಳ ಆವರಣದಲ್ಲಿ ಜನಜಂಗುಳಿ ಕಂಡುಬಂತು.

ಕಾರವಾರ ಕ್ಯಾಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡುಮಿಂಗ್ ಡಯಾಸ್ ನೇತೃತ್ವದಲ್ಲಿ ಇಲ್ಲಿನ ಕ್ಯಾಥೆಡ್ರಲ್ ಚರ್ಚ್‌ನಲ್ಲಿ ಕ್ರಿಸ್‌ಮಸ್ ಆಚರಣೆ ನಡೆದವು. ಬಲಿಪೂಜೆ, ಗೋದಲಿಗೆ ಪೂಜೆ ನೆರವೇರಿಸಲಾಯಿತು. ಜಗತ್ತಿನ ಶಾಂತಿ, ಸಹಬಾಳ್ವೆಗೆ ಪ್ರಾರ್ಥನೆ ಸಲ್ಲಿಸಿ ಹಬ್ಬದ ವಿಶೇಷ ಸಂದೇಶ ನೀಡಲಾಯಿತು. ವಿಶೇಷ ಪ್ರಾರ್ಥನೆ ಸಲ್ಲಿಕೆ ಬಳಿಕ ಬಂಧುಗಳೊಡನೆ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು. ಹಬ್ಬದ ವಿಶೇಷ ತಿನಿಸುಗಳನ್ನು ಸವಿಯಲಾಯಿತು.

ADVERTISEMENT

ಗುರುವಾರ ನಸುಕಿನ ಜಾವವೂ ಚರ್ಚ್‌ಗಳಲ್ಲಿ ಹಬ್ಬದ ವಿಶೇಷ ಪ್ರಾರ್ಥನೆ ನಡೆದವು. ಚರ್ಚ್ ಆವರಣದಲ್ಲಿ ನಿರ್ಮಿಸಲಾದ ಗೋದಲಿಗಳು ನೋಡುಗರನ್ನು ಆಕರ್ಷಿಸಿದ್ದವು. ಕ್ಯಾಥೆಡ್ರಲ್ ಚರ್ಚ್, ಹೈಚರ್ಚ್ ಸೇರಿದಂತೆ ಗ್ರಾಮೀಣ ಭಾಗದ ಬಿಣಗಾ, ಮಲ್ಲಾಪುರ, ಹಳಗಾ ಸೇರಿ ಹಲವೆಡೆಗಳಲ್ಲಿರುವ ಚರ್ಚ್‌ಗಳಲ್ಲಿ ಹಬ್ಬದ ವಿಶೇಷ ಪ್ರಾರ್ಥನೆಗಳು ನಡೆದವು. ಕುಟುಂಬ ಸಮೇತರಾಗಿ ಬಂದ ಜನರು ಮೊಂಬತ್ತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು.

ಸಂಜೆಯ ವೇಳೆ ಚರ್ಚ್ ಆವರಣದಲ್ಲಿ ಹೌಜಿ, ಸಂಗೀತ ಕುರ್ಚಿ ಸೇರಿದಂತೆ ವಿವಿಧ ಮನೋರಂಜನೆ ಚಟುವಟಿಕೆಗಳು ನಡೆದವು. ವಾರಗಳ ಕಾಲ ಹಬ್ಬದ ಅಂಗವಾಗಿ ಚರ್ಚ್‌ಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.