ADVERTISEMENT

ಕಾರವಾರ: 130 ಕೆ.ಜಿ ತೂಕದ ಹಸಿರು ಕಡಲಾಮೆ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 14:47 IST
Last Updated 19 ಫೆಬ್ರುವರಿ 2026, 14:47 IST
   

ಕಾರವಾರ: ಇಲ್ಲಿನ ಕೋಡಿಬಾಗದ ಸಂತೋಷಿಮಾತಾ ದೇವಸ್ಥಾನದ ಪಕ್ಕದಲ್ಲಿನ ಕಾಳಿ ನದಿಯಲ್ಲಿ ಕಾಂಡ್ಲಾ ಸಸಿಗಳ ನಡುವೆ ಸಿಲುಕಿಕೊಂಡಿದ್ದ ಸುಮಾರು 130 ಕೆ.ಜಿಗೂ ಹೆಚ್ಚು ಭಾರವಿದ್ದ ಹಸಿರು ಕಡಲಾಮೆಯನ್ನು (ಗ್ರೀನ್ ಸೀ ಟರ್ಟಲ್) ಗುರುವಾರ ಸಂರಕ್ಷಣೆ ಮಾಡಲಾಗಿದೆ.

ನದಿಯಲ್ಲಿ ನೀರಿನ ಹರಿವು ಕಡಿಮೆ ಇದ್ದ ಕಾರಣ ಕಾಂಡ್ಲ ಸಸಿಗಳ ನಡುವೆ ಸಿಲುಕಿ ಒದ್ದಾಡುತ್ತಿದ್ದ ಕಡಲಾಮೆಯನ್ನು ಸ್ಥಳೀಯ ಮೀನುಗಾರರು ಗುರುತಿಸಿ, ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಮಾಹಿತಿ ನೀಡಿದ್ದರು. ಕೇಂದ್ರದ ತಜ್ಞರ ಜೊತೆ ಅರಣ್ಯ ಇಲಾಖೆಯ ಕೋಸ್ಟಲ್ ಮರೈನ್ ವಿಭಾಗದ ಸಿಬ್ಬಂದಿ ಸೇರಿ ಕಡಲಾಮೆ ಸಂರಕ್ಷಿಸಿದ್ದಾರೆ.

‘ಹಸಿರು ಕಡಲಾಮೆ ಪಶ್ಚಿಮ ಕರಾವಳಿಯ ಅಳಿವೆ ಪ್ರದೇಶದಲ್ಲಿ ಕಾಣಸಿಗುವುದು ವಿರಳ. ಸಮುದ್ರದ ಉಬ್ಬರ ಇದ್ದಾಗ ಅಳಿವೆಗೆ ಬಂದಿರುವ ಆಮೆ ಇಳಿತದ ಬಳಿಕ ಸಮುದ್ರಕ್ಕೆ ಸಾಗಲಾಗದೆ ಕಾಂಡ್ಆ ಸಸಿಗಳ ನಡುವೆ ಸಿಲುಕಿಕೊಂಡಿರುವ ಸಾಧ್ಯತೆ ಇದೆ’ ಎಂದು ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಶಿವಕುಮಾರ ಹರಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕಡಲಾಮೆ ನಿತ್ರಾಣಗೊಂಡಿದ್ದರಿಂದ ಅರಣ್ಯ ಇಲಾಖೆ ಸುಪರ್ದಿಯಲ್ಲಿ ಇರಿಸಿದ್ದೇವೆ. ಕಡಲಾಮೆ ಬಗ್ಗೆ ನೈಪುಣ್ಯತೆ ಹೊಂದಿರುವ ತಜ್ಞರು ಕುಂದಾಪುರದಿಂದ ಚಿಕಿತ್ಸೆ ನೀಡಲು ಬರುತ್ತಿದ್ದು, ಚಿಕಿತ್ಸೆ ನೀಡಿದ ಬಳಿಕ ಸಮುದ್ರಕ್ಕೆ ಬಿಡಲಾಗುವುದು’ ಎಂದು ಕೋಸ್ಟಲ್ ಮರೈನ್ ವಿಭಾಗದ ಆರ್‌ಎಫ್‌ಒ ಕಿರಣ್ ಮನವಾಚಾರಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.