ADVERTISEMENT

ಅತಿಥಿ ಶಿಕ್ಷಕರಿಗೆ ಅವಕಾಶ ಅಗತ್ಯ: ಶಾಸಕ ಭೀಮಣ್ಣ ನಾಯ್ಕ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 7:13 IST
Last Updated 6 ಅಕ್ಟೋಬರ್ 2025, 7:13 IST
ಶಿರಸಿಯಲ್ಲಿ ನಡೆದ ಅತಿಥಿ ಶಿಕ್ಷಕರ ಸಮಾವೇಶದಲ್ಲಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿದರು
ಶಿರಸಿಯಲ್ಲಿ ನಡೆದ ಅತಿಥಿ ಶಿಕ್ಷಕರ ಸಮಾವೇಶದಲ್ಲಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿದರು   

ಶಿರಸಿ: ‘ಸರ್ಕಾರದಿಂದ ಶಿಕ್ಷಕರ ನೇಮಕಾತಿ ವಿಳಂಬವಾದ ಸಮಯದಲ್ಲಿ ವಯಸ್ಸಿನ ಸಡಿಲಿಕೆ ಮಾಡಿ ಅತಿಥಿ ಶಿಕ್ಷಕರಿಗೆ ಅವಕಾಶ ನೀಡುವ ಅಗತ್ಯತೆ ಇದ್ದು, ಈ ಕುರಿತು ಶಿಕ್ಷಣ ಸಚಿವರಲ್ಲಿ ವಿಷಯ ಪ್ರಸ್ತಾಪಿಸಲಾಗುವುದು’ ಎಂದು ಶಾಸಕ ಭೀಮಣ್ಣ ನಾಯ್ಕ ಭರವಸೆ ನೀಡಿದರು. 

ನಗರದ ಅಂಬೇಡ್ಕರ್‌ ಭವನದಲ್ಲಿ ಕರ್ನಾಟಕ ರಾಜ್ಯ ಅತಿಥಿ ಶಿಕ್ಷಕರ ಸಂಘದ ಶಿರಸಿ ಶೈಕ್ಷಣಿಕ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ ಅತಿಥಿ ಶಿಕ್ಷಕರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಅತಿಥಿ ಶಿಕ್ಷಕರಿಗೆ ₹12 ಸಾವಿರ ಗೌರವಧನ ನೀಡುತ್ತಿದ್ದು, ಅದರಿಂದ ಜೀವನ ನಡೆಸುವುದು ಕಷ್ಟಸಾಧ್ಯವಾಗಿದೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಅತಿಥಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಅತಿಥಿ ಶಿಕ್ಷಕರು ಮತ್ತು ಕಾಯಂ ಶಿಕ್ಷಕರು ತಾರತಮ್ಯವಿಲ್ಲದೇ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ಅನುಕೂಲ ಮಾಡಿಕೊಡಬೇಕೆಂದು ಬಿಇಒ ಅವರಿಗೆ ಸೂಚಿಸಿದ್ದೇನೆ. ಅತಿಥಿ ಶಿಕ್ಷಕರ ನ್ಯಾಯಯುತ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆ. ಇದರ ಜತೆ, ಸಂಘಟನೆ ಬಲವಾದಾಗ ಮಾತ್ರ ನಿಮ್ಮ ಬೇಡಿಕೆ ಈಡೇರುತ್ತದೆ’ ಎಂದರು.

ADVERTISEMENT

ಕೆಪಿಸಿಸಿ ಶಿಕ್ಷಕರ ಘಟಕದ ಅಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ‘ಎಲ್ಲೆಡೆ ಈಗ ಅರೆಕಾಲಿಕ ಶಿಕ್ಷಕರ ನೇಮಕಾತಿಯ ಪಿಡುಗು ಆರಂಭವಾಗಿದೆ. ಶಿಕ್ಷಕರು ಅರೆ ಹೊಟ್ಟೆಯಲ್ಲಿ ಪರಿಣಾಮಕಾರಿ ಬೋಧನೆ ಮಾಡಲು ಸಾಧ್ಯವಿಲ್ಲ. ಪರಿಣಾಮಕಾರಿ ಬೋಧನೆಗೆ ಕಾಯಂ ಸ್ಥಾನಮಾನ ಬೇಕು’ ಎಂದರು. 

‘ಸುಪ್ರೀಂ  ಕೋರ್ಟ್ ನಿರ್ದೇಶನದ ಪ್ರಕಾರ ಶಿಕ್ಷಕರಿಗೆ ಬಡ್ತಿ ವೇಳೆ ಟಿಇಟಿ ಪರೀಕ್ಷೆಉತ್ತೀರ್ಣರಾಗಿರುವುದು ಕಡ್ಡಾಯ. ಆದರೆ ಉಳಿದ ಇಲಾಖೆಗಳಲ್ಲಿ ಇಂಥ ಮಾನದಂಡವೇ ಇಲ್ಲ’ ಎಂದು ಹೇಳಿದರು. 

ಸಂಘಟನೆಯ ಗೌರವಾಧ್ಯಕ್ಷ ಡಿ.ಎಸ್‌ .ರಾಜಗೋಪಾಲ ಮಾತನಾಡಿ, ‘ ರಾಜ್ಯದಲ್ಲಿ 42 ಸಾವಿರ ಅತಿಥಿ ಶಿಕ್ಷಕರಿದ್ದರು ಅವರಿಗೆ ಸಭೆ, ಹೋರಾಟ, ಸಂಘಟನೆ ಮಾಡಲು ಸರ್ಕಾರ ಬಿಡುತ್ತಿಲ್ಲ. ಹೋರಾಟಗಾರರನ್ನು ಕೊನೆಗಾಣಿಸುತ್ತಾರೆ. ಹೀಗಾಗಿ ಇನ್ನಷ್ಟು ಪರಿಣಾಮಕಾರಿಯಾಗಿ ಸಂಘಟನೆ ಬೆಳೆಸಬೇಕಿದೆ. ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಸಂಘಟನೆ, ಸಭೆ ಮಾಡಿ ನಮ್ಮ ಹಕ್ಕಿಗಾಗಿ ಹೋರಾಟ ಮಾಡಬೇಕು’ ಎಂದರು. 

ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಮೇತ್ರಿಯಾ, ಸಂಘಟನೆ ಪ್ರಮುಖರಾದ ತುಲಸಿದಾಸ ಪಾವಸ್ಕರ, ರಾಜ್ಯ ಉರ್ದು ಒಕ್ಕೂಟದ ಅಧ್ಯಕ್ಷ ಅಬ್ದುಲ್ ರೆಹಮಾನ್, ಶೈಕ್ಷಣಿಕ ಜಿಲ್ಲಾ ಘಟಕದ ಅಧ್ಯಕ್ಷೆ ರಿಹಾನಾ ಶೇಖ್, ವಕೀಲ ರವೀಂದ್ರ, ಡಿಡಿಪಿಐ ಡಿ.ಆರ್.ನಾಯ್ಕ ಇತರರಿದ್ದರು. 

ಹಕ್ಕೊತ್ತಾಯಗಳು..

* ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಮೆರಿಟ್ ಪದ್ಧತಿ ಕೈಬಿಡಬೇಕು

* ಸೇವಾಭದ್ರತೆ ಒದಗಿಸಬೇಕು

* ವಾರ್ಷಿಕ 12 ತಿಂಗಳ ವೇತನ ಸೇವೆ ಮುಂದುವರಿಕೆ ಜತೆ ಪ್ರತಿ ವರ್ಷ ಶೇ 5ರ ಕೃಪಾಂಕ ನೀಡಬೇಕು

* ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಬೇಕು

* ಪ್ರತಿವರ್ಷ ಸೇವಾ ಪ್ರಮಾಣ ಪತ್ರ ನೀಡಬೇಕು

* ವೇತನವನ್ನು ನೇರವಾಗಿ ಅತಿಥಿ ಶಿಕ್ಷಕರ ಖಾತೆಗೆ ಜಮಾ ಮಾಡಬೇಕು *ಜೀವ ವಿಮೆ ಸೌಲಭ್ಯ ಒದಗಿಸಬೇಕು

ಅತಿಥಿ ಶಿಕ್ಷಕರು 12 ರಿಂದ 15 ವರ್ಷ ಕೆಲಸ ಮಾಡಿದರೂ ಕೆಲಸದ ಭದ್ರತೆಯಿಲ್ಲ. ಹೀಗಾಗಿ ಅತಿಥಿ ಶಿಕ್ಷರಿಗೆ ನೇಮಕಾತಿ ಸಂದರ್ಭದಲ್ಲಿ ಕೃಪಾಂಕ ನೀಡಬೇಕು.
-ರಿಹಾನಾ ಶೇಖ್, ಅತಿಥಿ ಶಿಕ್ಷಕರ ಸಂಘದ ಶೈಕ್ಷಣಿಕ ಜಿಲ್ಲಾ ಘಟಕದ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.