
ಹಳಿಯಾಳ: ತಾಲ್ಲೂಕಿನ ಮುರ್ಕವಾಡದ ಗ್ರಾಮದೇವಿ ಲಕ್ಷ್ಮೀದೇವಿ (ದ್ಯಾಮವ್ವಾ ದೇವಿ)ಯ ಮಹಾರಥೋತ್ಸವ 12 ವರ್ಷಗಳ ನಂತರ ಸಹಸ್ರಾರು ಭಕ್ತರ ಜಯಕಾರದ ನಡುವೆ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಮಧ್ಯಾಹ್ನ 12.22ರ ಸುಮಾರಿಗೆ ಗ್ರಾಮದೇವಿಯರಿಗೆ ಪಂಚ ಕಮಿಟಿಯಿಂದ ಪೂಜೆ ಸಲ್ಲಿಸಿದ ನಂತರ ಕೆ.ಕೆ ಹಳ್ಳಿ ಸುಬ್ರಮಣ್ಯ ಸ್ವಾಮೀಜಿ ಹಾಗೂ ವಿವಿಧ ಧರ್ಮ ಗುರುಗಳು ರಥೋತ್ಸವಕ್ಕೆ ಚಾಲನೆ ನೀಡಿದರು.
ರಥೋತ್ಸವ ಗ್ರಾಮದ ಮುಖ್ಯ ಬೀದಿಯಿಂದ ಸಾಗುತ್ತಿದ್ದಂತೆ ಭಕ್ತರು ಉತ್ತತ್ತಿ, ಬಾಳೆಹಣ್ಣು, ಫಲ ಪುಷ್ಪಗಳನ್ನು ರಥಕ್ಕೆ ಎಸೆಯುತ್ತಿರುವುದು ವಿರಳವಾಗಿತ್ತು. ರಥೋತ್ಸವದ ಅಂಗವಾಗಿ ಇಡೀ ಗ್ರಾಮವನ್ನು ತಳೀರು ತೋರಣದಿಂದ ಸಿಂಗರಿಸಲಾಗಿತ್ತು. ಪ್ರತಿ ಮನೆಯ ಮುಂದೆ ಆಯಾ ಕುಟುಂಬದ ಸದಸ್ಯರ ಸ್ವಾಗತ ಕೋರುವ ಪ್ಲ್ಯಾಕ್ಸ್ ಬೋರ್ಡ್‌ಗಳು ರಾರಾಜಿಸುತ್ತಿದ್ದವು.
ಶ್ರೀ ಮಾತಂಗಿ ದೇವಿ ಮಹಿಳಾ ಡೊಳ್ಳಿನ ಸಂಘ ಸೋಮನಕೊಪ್ಪ ಕಲಘಟಗಿ, ಜೈಯ ಭೀಮ ಗೆಳೆಯರ ಬಳಗ ಲೋಕುರ ಧಾರವಾಡದ ಜಗ್ಗಲಗಿ ಮೇಳ ಮತ್ತಿತರ ವಾದ್ಯ ಮೇಳಗಳು ರಥೋತ್ಸವದ ಮುಂದೆ ಸಾಗಿ ವಿಶೇಷ ಮೆರುಗು ನೀಡಿದವು. ರಥದ ಸುತ್ತಲೂ ಗ್ರಾಮದ ಎಲ್ಲಾ ದೇವಾಲಯಗಳ ದೇವತೆಗಳ ಚಿತ್ರ ಅಳವಡಿಸಲಾಗಿತ್ತು.
ಮಧ್ಯಾಹ್ನ ಪ್ರಾರಂಭವಾದ ರಥೋತ್ಸವ ಸಂಜೆ ಜಾತ್ರಾ ಗದ್ದುಗೆಗೆ ತೆರಳಿ ಜಾತ್ರಾ ಗದ್ದುಗೆಯಲ್ಲಿ ಗ್ರಾಮದೇವಿ ಲಕ್ಷ್ಮಿದೇವಿಯನ್ನು ಪುನಃ ಪ್ರತಿಷ್ಠಾಪಿಸಲಾಯಿತು. ಹಾಗೂ ಉಡಿ ತುಂಬುವ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಫೆ.15 ರಂದು ಸಂಜೆ ಲಕ್ಷ್ಮಿ ದೇವಿಯನ್ನು ಸೀಮೆಗೆ ಕಳಿಸುವ ಕಾರ್ಯಕ್ರಮ ನಡೆಸಲಾಗುವುದು. ಫೆ.18ರಂದು ಗ್ರಾಮದೇವಿಯನ್ನು ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾಪನೆ ಮಾಡಲಾಗುವುದು. ಫೆ.23 ರಂದು ಜಾತ್ರಾ ಮಹೋತ್ಸವದ ಅಂಗವಾಗಿ ಬಯಲು ಕುಸ್ತಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ. ಪ್ರತಿ ದಿನ ಅಧ್ಯಾತ್ಮಿಕ ಸಾಂಸ್ಕೃತಿಕ ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.