ADVERTISEMENT

ಹಳಿಯಾಳ| ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣ: ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 7:15 IST
Last Updated 9 ಫೆಬ್ರುವರಿ 2026, 7:15 IST
ಹಳಿಯಾಳದಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.
ಹಳಿಯಾಳದಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.   

ಹಳಿಯಾಳ: ‘ಕಾಳಿ ನದಿಯಿಂದ ತಾಲ್ಲೂಕಿನ ಕೆರೆ ಬಾಂದಾರಗಳಿಗೆ ನೀರು ತುಂಬಿಸುವ ಯೋಜನೆ ಸಂಪೂರ್ಣಗೊಳ್ಳುವ ಹಂತದಲ್ಲಿದ್ದು, ಹಂತ ಹಂತವಾಗಿ ನೀರು ಸರಬರಾಜು ಮಾಡಲಾಗುವುದು’ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಯೋಜನೆಯಿಂದ 46 ಕೆರೆ 19 ಬಾಂದಾರಗಳಿಗೆ ನೀರು ತುಂಬಿಸಲಾಗುತ್ತಿದೆ. ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು, 113 ಗ್ರಾಮಗಳ ಪ್ರತಿ ಮನೆಗೆ ಕುಡಿಯುವ ನೀರು ಸರಬರಾಜು ಆಗಲಿದೆ. ಈಗಾಗಲೇ ಮುರ್ಕವಾಡ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಯೋಜನೆಗೆ ಚಾಲನೆ ನೀಡಿ, ನೀರು ಸರಬರಾಜು ಮಾಡಲಾಗಿದೆ’ ಎಂದು ತಿಳಿಸಿದರು.

‘ಹಳಿಯಾಳ ಪುರಸಭೆಯಿಂದ ಕೈಗೊಂಡ ಒಳಚರಂಡಿ ಯೋಜನೆಯ ವ್ಯವಸ್ಥೆಯ ಕಾರ್ಯಾಚರಣೆಯ ನಿರ್ವಹಣೆಗೆ 5 ವರ್ಷ ಅವಧಿಗೆ ₹10.60 ಕೋಟಿ ಅಂದಾಜು ವೆಚ್ಚದ ಪ್ರಸ್ತಾವ ಬಂದಿದೆ. ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾ ತಾಲ್ಲೂಕುಗಳಲ್ಲಿ ಒಟ್ಟು ₹1.88 ಕೋಟಿ ವೆಚ್ಚದಿಂದ ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಹಳಿಯಾಳ ತಾಲ್ಲೂಕಿನ ಕಾವಲವಾಡ, ಬಿ.ಕೆ.ಹಳ್ಳಿ ಜೋಯಿಡಾ ತಾಲ್ಲೂಕಿನ ನಂದಿಗದ್ದಾ, ಅನಮೋಡ, ಜಗಲಬೇಟ, ದಾಂಡೇಲಿಯ 2 ಸರ್ಕಾರಿ ಶಾಲಾ ಕೊಠಡಿಗಳ ದುರಸ್ತಿ ಕೈಗೊಳ್ಳಲಾಗುವುದು’ ಎಂದರು.

ADVERTISEMENT

‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಅಡಿಯಲ್ಲಿ ಹಳಿಯಾಳ ಮತ್ತು ಜೋಯಿಡಾ ತಾಲ್ಲೂಕುಗಳಲ್ಲಿ ರಸ್ತೆ ಹಾಗೂ ಸೇತುವೆಗಳ ಅಭಿವೃದ್ಧಿಗೆ ₹6 ಕೋಟಿ ಅನುದಾನ ಮಂಜೂರಾಗಿದೆ. ಜೋಯಿಡಾ ತಾಲ್ಲೂಕು ಆಸ್ಪತ್ರೆಯಲ್ಲಿ ಸಂಸ್ಕರಣಾ ಘಟಕ ನಿರ್ಮಾಣ ಹಾಗೂ ರೂಫ್‌ ಶೀಟಿಂಗ್‌ ಅಳವಡಿಕೆಗೆ ₹1.50 ಕೋಟಿ, ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆಯ ದುರಸ್ತಿ ಮತ್ತು ಇತರೆ ದುರಸ್ತಿ ಕಾಮಗಾರಿಗಾಗಿ ₹1.50 ಕೋಟಿ ಮಂಜೂರಾಗಿದೆ. ಜೋಯಿಡಾ ತಾಲ್ಲೂಕಿನ ಕಾಲುಸಂಕ ನಿರ್ಮಾಣಕ್ಕೆ ಅನುಮೊದನೆ ದೊರೆತು ₹1 ಕೋಟಿ ಅನುದಾನ ಮಂಜೂರಾಗಿದೆ’ ಎಂದರು.

ಆರೋಗ್ಯ ಸಹಾಯ ಹ್ಯಾವ್‌ ಎ ಹಾರ್ಟ್ ಪೌಂಡೇಶನ್‌ನಿಂದ ಶ್ರೇಯಾ ಜ್ಞಾನೇಶ್ವರ ದೇಸಾಯಿ ರಾಮನಗರ, ಸುಜಾತಾ ಮಂಜುನಾಥ ನಾವಲಗಿ ತೇರಗಾಂವ, ಮಹಾದೇವ ರಾಮಣ್ಣಾ ಹರಿಜನ ಹಂಪಿಹೊಳಿ ಅವರಿಗೆ ತಲಾ ₹10,000 ಸಹಾಯ ಧನ ವಿತರಿಸಲಾಗಿದೆ. ಹಳಿಯಾಳದ ಶಿವಾಜಿ ಪದವಿ ಪೂರ್ವ ಕಾಲೇಜಿಗೆ ಟೋಯೋಟಾ ಕಿರ್ಲೋಸ್ಕರ ಮೋಟಾರ್ ಪ್ರೈ.ಲಿ.ಬಿಡದಿ ಇವರ ಸಹಕಾರದಿಂದ ಅಟೋ ಮೋಬೈಲ್ ಪ್ರಯೋಗಾಲಯ ಸ್ಥಾಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್‌ ಮಾಹಿತಿ ತಂತ್ರಜ್ಞಾನ ಮತ್ತು ಜೈವ ತಂತ್ರಜ್ಞಾನ ಮೂಲಕ ಜಾರಿಗೊಳ್ಳುತ್ತಿರುವ ಸ್ಥಳೀಯ ಆರ್ಥಿಕತೆ ವೇಗ ವರ್ಧಕ ಕಾರ್ಯಕ್ರಮದಡಿ ಇಲ್ಲಿನ ವಿಶ್ವನಾಥರಾವ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಐದು ವರ್ಷಗಳ ಅವಧಿಗೆ ಸೈಬರ್‌ ಭದ್ರತಾ ನವೀನತಾ ಪ್ರಯೋಗಾಲಯ ಸ್ಥಾಪನೆಗಾಗಿ ₹1.25 ಕೋಟಿ ಅನುದಾನ ಮಂಜೂರಾಗಿದೆ. ಇದರಿಂದ ಜಿಲ್ಲೆಯ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನವೀನತೆ ಮತ್ತು ಉದ್ಯಮಶೀಲತೆ ಸತತ ಆರ್ಥಿಕ ಬೆಳವಣಿಗೆಗೆ ಉತ್ತೇಜನ ಹೊಂದಿರುತ್ತದೆ’ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣಾ ಪಾಟೀಲ, ಮುಖಂಡ ರವಿ ತೋರಣಕಟ್ಟಿ ಇದ್ದರು.

ಹಳಿಯಾಳದಲ್ಲಿ ಶಾಸಕ ಆರ್.ವಿ.ದೇಶಪಾಂಡೆ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.