ADVERTISEMENT

ಹಳಿಯಾಳ: ರಾಜ್ಯ ಹೆದ್ದಾರಿಯಲ್ಲಿ ರಾಸ್ತಾ ರೋಖೋ ಇಂದು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 2:40 IST
Last Updated 27 ಅಕ್ಟೋಬರ್ 2025, 2:40 IST
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಹಳಿಯಾಳದ ತಹಶೀಲ್ದಾರ್‌ ಕಾರ್ಯಾಲಯದ ಬಳಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾನುವಾರ ಮಾಜಿ ಶಾಸಕ ಸುನೀಲ ಹೆಗಡೆ ಪಾಲ್ಗೊಂಡಿದ್ದರು
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಹಳಿಯಾಳದ ತಹಶೀಲ್ದಾರ್‌ ಕಾರ್ಯಾಲಯದ ಬಳಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾನುವಾರ ಮಾಜಿ ಶಾಸಕ ಸುನೀಲ ಹೆಗಡೆ ಪಾಲ್ಗೊಂಡಿದ್ದರು   

ಹಳಿಯಾಳ: ಕಬ್ಬು ಬೆಳೆಗಾರರ ಬೇಡಿಕೆಗೆ ಆಗ್ರಹಿಸಿ ಸೋಮವಾರ ಪಟ್ಟಣದ ಶಿವಾಜಿ ಸರ್ಕಲ್‌ ರಾಜ್ಯ ಹೆದ್ದಾರಿಯಲ್ಲಿ ರಾಸ್ತಾ ರೋಖೋ ಪ್ರತಿಭಟನೆ ನಡೆಸಲಿದ್ದೇವೆ ಎಂದು ಕಬ್ಬು ಬೆಳೆಗಾರರ ಸಂಘ ತಿಳಿಸಿದೆ.

ಕಳೆದ ನಾಲ್ಕು ದಿನಗಳಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಳೆಗಾರರು ತಹಶೀಲ್ದಾರ್‌ ಕಾರ್ಯಾಲಯದ ಆವರಣದಲ್ಲಿ ನಡೆಸುತ್ತಿರುವ ಧರಣಿ ಭಾನುವಾರ ನಾಲ್ಕನೇ ದಿನಕ್ಕೆ ಮುಂದುವರೆಯಿತು.

ಧರಣಿಯಲ್ಲಿ ಪಾಲ್ಗೊಂಡು ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಕಬ್ಬು ಬೆಳೆಗಾರರ ಬೇಡಿಕೆ ಅನುಸಾರವಾಗಿ ಸ್ಥಳೀಯ ಇ ಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಬೆಳೆಗಾರರಿಗೆ ನ್ಯಾಯ ಒದಗಿಸಬೇಕು. ಅವರ ಬೇಡಿಕೆಯಂತೆ ಪ್ರತಿ ಟನ್‌ಗೆ ₹3,350 ಪ್ರತಿ ಟನ್‌ಗೆ ಕಬ್ಬಿನ ಹಣ ಪಾವತಿಸಬೇಕು. ಲಗಾಣಿಯನ್ನು ಕಾರ್ಖಾನೆ ಅವರೇ ಪಾವತಿಸಬೇಕು ಎಂದರು.

ADVERTISEMENT

ಕಬ್ಬು ಬೆಳೆಗಾರರ ಬೇಡಿಕೆಯನ್ನು ಕಾರ್ಖಾನೆಯವರು ಈಡೇರಿಸಲೇಬೇಕು. ಭಾರತೀಯ ಜನತಾ ಪಕ್ಷದಿಂದ ಕಬ್ಬು ಬೆಳೆಗಾರರ ಹೋರಾಟಕ್ಕೆ  ಸಂಪೂರ್ಣ ಬೆಂಬಲ ನೀಡಿ ತಾವು ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ಎಸ್‌.ಎಲ್‌. ಘೋಟ್ನೇಕರ ಸೋಮವಾರ ತಮ್ಮ ಎಲ್ಲ ಕಾರ್ಯಕರ್ತರೊಂದಿಗೆ ಪಾಲ್ಗೊಳ್ಳಲಿದ್ದೇವೆ. ಬೇಡಿಗೆ ಈಡೇರುವವರೆಗೂ ಹೋರಾಟಗಾರರು ಹೋರಾಟ ನಿರಂತರವಾಗಿ ನಡೆಸಲಿ ಎಂದರು.

ಕಬ್ಬು ಬೆಳೆಗಾರರ ಸಂಘದ ಮುಖಂಡ ನಾಗೇಂದ್ರ ಜಿವೋಜಿ, ಕುಮಾರ ಬೋಬಾಟಿ, ರಾಮದಾಸ ಬೆಳಗಾಂವಕರ, ಸಾತೋರಿ ಗೋಡಿಮನಿ, ಸುರೇಶ ಶಿವಣ್ಣವರ, ಭರತೇಶ ಪಾಟೀಲ, ವಿಠ್ಠಲ ಸಿದ್ದಣ್ಣವರ, ಸಂತೋಷ ಘಟಕಾಂಬಳೆ, ಸೋನಪ್ಪಾ ಸುಣಕಾರ ಇದ್ದರು.

‘ಕಾರ್ಖಾನೆ ಬೆಳೆಗಾರರ ಬೇಡಿಕೆಗೆ ಸ್ಪಂದಿಸಲಿ’

ಹಳಿಯಾಳ: ಸ್ಥಳೀಯ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ಬೇಡಿಕೆಗೆ ಸ್ಪಂದಿಸಲಿ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶಾಸಕ ಆರ್‌.ವಿ. ದೇಶಪಾಂಡೆ ಹೇಳಿದರು.

ಭಾನುವಾರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕೆಲವೊಂದು ಬೇಡಿಕೆಗಳನ್ನು ಕಾರ್ಖಾನೆಯವರು ಈಡೇರಿಸಿದ್ದಾರೆ. ಈಗಾಗಲೇ ತೂಕದ ಮಾಪನ ( ವೇ ಬ್ರಿಡ್ಜ) ವನ್ನು ಕಾರ್ಖಾನೆ ಹೊರಗೆ ಅಳವಡಿಸುವ ಕುರಿತು ಕಾಮಗಾರಿ ನಡೆಯುತ್ತಿದೆ. ಬೆಳೆಗಾರರ ಹಿಂದಿನ ಬಾಕಿ ₹256 ಬೆಳೆಗಾರರು ಕೇಳುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದ್ದು, ವಿಚಾರಣೆ ಹಂತದಲ್ಲಿದೆ ಎಂದು ಕಾರ್ಖಾನೆಯವರು ತಿಳಿಸಿದ್ದಾರೆ. ಕಬ್ಬು ಬೆಳೆಗಾರರ ಬೇಡಿಕೆಯಂತೆ ಅವರಿಗೆ ಹಣ ಪಾವತಿಸಬೇಕೆಂ ಒತ್ತಾಯಿಸುತ್ತೇನೆ. ರೈತರು ಹಾಗೂ ಸಕ್ಕರೆ ಕಾರ್ಖಾನೆಯ ಜೊತೆ ಯಾವುದೇ ಭಿನ್ನಾಭಿಪ್ರಾಯ ಬರದ ಹಾಗೆ ಕಾರ್ಖಾನೆಯವರು ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಬೇಡಿಕೆಗಳನ್ನು ಪ್ರಾಧ್ಯಾನ್ಯತೆಯ ಮೇರೆಗೆ ರೈತರ ಜೊತೆ ಶೀಘ್ರವಾಗಿ ಮಾತುಕತೆ ನಡೆಸಿ ಈಡೇರಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.