ಶಿರಸಿಯ ಗೋಸಾವಿ ಗಲ್ಲಿಯಲ್ಲಿ ಚಂದ್ರಶೇಖರ ಬೋವಿವಡ್ಡರ ಅವರ ಮನೆಯ ಧರೆ ಕುಸಿದು ಕೆಳಗಿನ ಮನೆಯ ಮೇಲೆ ಮಣ್ಣು ಬಿದ್ದಿರುವುದು
ಶಿರಸಿ: ತಾಲ್ಲೂಕಿನಲ್ಲಿ ಕಳೆದೆರಡು ದಿನಗಳಿಂದ ಆರಿದ್ರಾ ಮಳೆ ರಭಸದಿಂದ ಸುರಿಯುತ್ತಿದ್ದು, ಅನೇಕ ಜನವಸತಿ ಪ್ರದೇಶಗಳಲ್ಲಿ ಧರೆ ಕುಸಿತವಾಗಿ ಆತಂಕ ಸೃಷ್ಟಿಯಾಗಿದೆ. ಜತೆ ಕೆಲವು ಕಡೆಗಳಲ್ಲಿ ಕೊಟ್ಟಿಗೆ ಕುಸಿತವಾಗಿ ಹಾನಿಯಾಗಿದೆ.
ನಗರಸಭೆ ವ್ಯಾಪ್ತಿಯ ಗಣೇಶನಗರದಲ್ಲಿ ಧರೆ ಕುಸಿತವಾಗಿ ತಿರುಕಪ್ಪ ವಡ್ಡರ್ ಎಂಬುವವರ ಮನೆ ಹಿಂದಿನ ಮಣ್ಣು ಕುಸಿದಿದೆ. ಆ ಮಣ್ಣು ಅಲ್ಲಿರುವ ಮನೆ ಬಾಗಿಲಿನವರೆಗೂ ಬಂದು ಬಿದ್ದಿದೆ. ಗೋಸಾವಿ ಗಲ್ಲಿಯಲ್ಲಿ ಚಂದ್ರಶೇಖರ ಬೋವಿವಡ್ಡರ ಅವರ ಮನೆಯ ಧರೆ ಕುಸಿದ ಪರಿಣಾಮ ಧರೆಯ ಮೇಲಿನ ಮತ್ತು ಕೆಳಗಿನ ಮನೆಯ ನಿವಾಸಿಗಳು ಅಪಾಯಕ್ಕೆ ಸಿಲುಕಿದ್ದಾರೆ. ಧರೆಯ ಕುಸಿತಕ್ಕೆ ಕೆಳಗಿದ್ದ ಮನೆಯ ಮೇಲೆ ಮಣ್ಣ ಬಿದ್ದು ಸ್ನಾನಗೃಹಕ್ನೆ ಹಾನಿಯಾಗಿದೆ. ಧರೆ ಮೇಲಿನ ಮನೆ ಇನ್ನೇನು ಕುಸಿದು ಹೋಗುವ ಸಾದ್ಯತೆಯಿದೆ.
ಬುಧವಾರ ಶಾಸಕ ಭೀಮಣ್ಣನಾಯ್ಕ ಈ ವಾರ್ಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆಗಲು ಕೆಲವರು ಧರೆ ಕುಸಿತದ ಆತಂಕ ವ್ಯಕ್ತಪಡಿಸಿದ್ದರು.
ತಾಲ್ಲೂಕಿನ ಬದನಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಾಪುರದಲ್ಲಿ ಮಳೆ ರಭಸಕ್ಕೆ ಕೊಟ್ಟಿಗೆ ಕುಸಿದು ಬಿದ್ದಿದೆ. ಗುರುವಾರ ನಸುಕಿನಲ್ಲಿ ಕೊಟ್ಟಿಗೆ ನೆಲಸಮವಾಗಿದೆ. 10ಕ್ಕೂ ಅಧಿಕ ಜಾನುವಾರುಗಳು ಕೊಟ್ಟಿಗೆಯಲ್ಲಿದ್ದು, ಅವೆಲ್ಲವೂ ಗಾಯಗೊಂಡಿವೆ. ಲಕ್ಷಣ ಗುಂಡಿಹಂದ್ರಾಳ ಅವರಿಗೆ ಸೇರಿದ ಕೊಟ್ಟಿಗೆ ಇದಾಗಿತ್ತು. ಜಾನುವಾರುಗಳು ಜೀವಾಪಾಯದಿಂದ ಪಾರಾಗಿದ್ದರೂ, ನೋವು ಅನುಭವಿಸುತ್ತಿವೆ. ಕೊಟ್ಟಿಗೆ ಕುಸಿತದಿಂದ ಮಾಲೀಕರಿಗೆ ₹74 ಸಾವಿರ ಹಾನಿಯಾಗಿದೆ. ನರೇಬೈಲ್ ಸಮೀಪದ ಹೊಡಸಲಮನೆ ರಾಜು ನಾರಾಯಣ ನಾಯ್ಕ ಅವರ ಕೊಟ್ಟಿಗೆಯ ಮೇಲೆ ಮರ ಬಿದ್ದ ಘಟನೆ ನಡೆದಿದ್ದು, ದನಗಳಿಗೆ ಪೆಟ್ಟಾಗಿದೆ. ಕಂದಾಯ ಸಿಬ್ಬಂದಿ ಸ್ಥಳ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.