ADVERTISEMENT

ಮುಂಡಗೋಡ: ಮಳೆಗಾಲ ಸಿದ್ಧತೆಗೆ ಶಾಸಕ ಶಿವರಾಮ ಹೆಬ್ಬಾರ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 13:42 IST
Last Updated 22 ಏಪ್ರಿಲ್ 2025, 13:42 IST
2024-25ನೇ ಸಾಲಿನ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಮುಂಡಗೋಡ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ವತಿಯಿಂದ ನೀಡುವ ಲ್ಯಾಪ್‌ ಟಾಪ್ ಅನ್ನು ಶಾಸಕ ಶಿವರಾಮ ಹೆಬ್ಬಾರ ಮಂಗಳವಾರ ವಿತರಿಸಿದರು
2024-25ನೇ ಸಾಲಿನ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಮುಂಡಗೋಡ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ವತಿಯಿಂದ ನೀಡುವ ಲ್ಯಾಪ್‌ ಟಾಪ್ ಅನ್ನು ಶಾಸಕ ಶಿವರಾಮ ಹೆಬ್ಬಾರ ಮಂಗಳವಾರ ವಿತರಿಸಿದರು   

ಮುಂಡಗೋಡ: ‘ಮಳೆಗಾಲದ ಸಿದ್ಧತೆಗಳನ್ನು ಈಗಲೇ ಕೈಗೊಳ್ಳಬೇಕು. ಅಂಗನವಾಡಿ, ಶಾಲಾ ಕೊಠಡಿಗಳು ಹಾಗೂ ವಸತಿನಿಲಯಗಳ ಪರಿಶೀಲನೆ ಮಾಡಬೇಕು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದ ಆಹಾರ ಸಾಮಗ್ರಿಗಳನ್ನು ಮನೆಗೆ ಒಯ್ಯುವ ಕೀಳುಮಟ್ಟದ ವ್ಯವಸ್ಥೆಯನ್ನು ಸಮಾಜ ಒಪ್ಪುವುದಿಲ್ಲ. ಇಂತಹ ಘಟನೆಗಳು ನಡೆಯದಂತೆ ತಹಶೀಲ್ದಾರ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು’ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಸಾರ್ವಜನಿಕರ ದೂರುಗಳು ಕೇಳಿಬರದಂತೆ ಅಧಿಕಾರಿಗಳು ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಬೇಕು. ಯೋಜನೆಗಳ ಅನುಷ್ಠಾನದಲ್ಲಿ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಅಂತರ್ಜಲ ಕುಸಿತದಿಂದ ಕೊಳವೆಬಾವಿಗಳಲ್ಲಿ ನೀರು ಬರುತ್ತಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ನೀರಿನ ಸಮಸ್ಯೆ ಎದುರಾಗಲಿರುವ ಕಡೆಗಳಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪರ್ಯಾಯ ಆಯ್ಕೆ ಮಾಡಿಕೊಳ್ಳಬೇಕು. ಜಲಜೀವನ ಮಿಷನ್‌ನಡಿ ಕಾಮಗಾರಿ ಪೂರ್ಣಗೊಳ್ಳದಿದ್ದರೆ, ಅಂತವುಗಳನ್ನು ಹಸ್ತಾಂತರ ಮಾಡಿಕೊಳ್ಳಬಾರದು’ ಎಂದು ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಪಿಡಿಒ ಅವರಿಗೆ ಸೂಚಿಸಿದರು.

ADVERTISEMENT

‘ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಅರಣ್ಯ ಸಂಪತ್ತನ್ನು ಜನರೇ ಬಹಳ ಹಿಂದಿನಿಂದಲೂ ರಕ್ಷಿಸಿಕೊಂಡು ಬಂದಿದ್ದಾರೆ. ಅರಣ್ಯ ಪ್ರದೇಶಗಳಲ್ಲಿ ಹಲವರು ಬದುಕು ಕಟ್ಟಿಕೊಂಡಿದ್ದಾರೆ. ಜಿಪಿಎಸ್‌ ಮಾಡಿಸಿಕೊಂಡ ಅರಣ್ಯವಾಸಿಗಳಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು. ಕಾನೂನುಬಾಹಿರ ಚಟುವಟಿಕೆಗಳಿಗೆ ನನ್ನ ಬೆಂಬಲವಿಲ್ಲ’ ಎಂದರು.

‘ಈಚೆಗೆ ಸುರಿದ ಗಾಳಿಮಳೆಯಿಂದ ತಾಲ್ಲೂಕಿನ ಗುಂಜಾವತಿ, ಮೈನಳ್ಳಿ ಭಾಗದಲ್ಲಿ ಸಾಕಷ್ಟು ಮರಗಳು ಬಿದ್ದಿವೆ. ಬೆಲೆಬಾಳುವ ಮರಗಳು ಮಣ್ಣಾಗದಂತೆ ಎಚ್ಚರಿಕೆ ವಹಿಸಿ, ಅರಣ್ಯ ಇಲಾಖೆಗೆ ಉತ್ಪನ್ನ ಆಗುವಂತೆ ಅವುಗಳ ಸದ್ಭಳಕೆ ಮಾಡಿಕೊಳ್ಳಬೇಕು. ಕೆಡಿಪಿ ಸಭೆಗೆ ಗೈರಾಗಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ನೋಟಿಸ್‌ ನೀಡಿ’ ಶಾಸಕ ಹೆಬ್ಬಾರ ಸೂಚಿಸಿದರು.

ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಮಂಜೂರು ಇರುವ ಒಟ್ಟು 14 ವೈದ್ಯರ ಪೈಕಿ, 10 ಮಂದಿ ತಜ್ಞ ವೈದ್ಯರಿರಬೇಕು. 4 ಮಂದಿ ಎಂಬಿಬಿಎಸ್‌ ವೈದ್ಯರಿರಬೇಕು. ಆದರೆ ಸದ್ಯ ‌6 ಮಂದಿ ತಜ್ಞವೈದ್ಯರು ಇದ್ದಾರೆ. ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಬ್ಬರು ಮಾತ್ರ ವೈದ್ಯರಿದ್ದಾರೆ. 17 ಶುಶ್ರೂಷಕಿಯರ ಹುದ್ದೆ ಖಾಲಿ ಇವೆ. ಇದರಿಂದ ತೊಂದರೆಯಾಗುತ್ತಿದ್ದು, ಇರುವ ವೈದ್ಯರೇ ಬಡಜನರಿಗೆ ಉತ್ತಮ ಸೇವೆ ನೀಡುತ್ತಿದ್ದಾರೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ನರೇಂದ್ರ ಪವಾರ ಹೇಳಿದರು.

ತಾಲ್ಲೂಕು ಆಸ್ಪತ್ರೆಯಲ್ಲಿ ಇರುವ ಸೌಲಭ್ಯಗಳನ್ನು ಬಳಸಿಕೊಂಡು, ಬಡಜನರಿಗೆ ಉತ್ತಮ ಚಿಕಿತ್ಸೆ ನೀಡಬೇಕು. ತೀರಾ ಅನಿವಾರ್ಯವಾದರೆ ಮಾತ್ರ, ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆ ಕಳಿಸಬಹುದು ಎಂದು ಶಾಸಕ ಹೆಬ್ಬಾರ ಹೇಳಿದರು.

ತಹಶೀಲ್ದಾರ್‌ ಶಂಕರ ಗೌಡಿ, ತಾಲ್ಲೂಕು ಪಂಚಾಯಿತಿ ಇಒ ಟಿ.ವೈ.ದಾಸನಕೊಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಸುಮಾ, ಎಚ್.ಎಂ.ನಾಯ್ಕ, ಕೃಷ್ಣ ಹಿರೇಹಳ್ಳಿ, ಶಾರದಾ ರಾಠೋಡ, ರಾಜಶೇಖರ ಹಿರೇಮಠ, ಗೋಪಾಲ ಪಾಟೀಲ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.