ADVERTISEMENT

ಜಿಲ್ಲೆಯಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳ ಚಿತ್ರಾಪುರದ ಸರ್ಕಾರಿ ಶಾಲೆ

155 ವರ್ಷಗಳಿಂದ ಅಕ್ಷರ ದೀವಿಗೆ ಹಚ್ಚುತ್ತಿರುವ ಚಿತ್ರಾಪುರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ

ರಾಘವೇಂದ್ರ ಭಟ್ಟ
Published 21 ಜೂನ್ 2019, 19:30 IST
Last Updated 21 ಜೂನ್ 2019, 19:30 IST
ಶಿಸ್ತುಬದ್ದವಾಗಿ ಪ್ರಾರ್ಥನೆಯಲ್ಲಿ ನಿರತರಾಗಿರುವ ಭಟ್ಕಳ ತಾಲ್ಲೂಕು ಚಿತ್ರಾಪುರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು.
ಶಿಸ್ತುಬದ್ದವಾಗಿ ಪ್ರಾರ್ಥನೆಯಲ್ಲಿ ನಿರತರಾಗಿರುವ ಭಟ್ಕಳ ತಾಲ್ಲೂಕು ಚಿತ್ರಾಪುರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು.   

ಭಟ್ಕಳ: ತಾಲ್ಲೂಕಿನ ಚಿತ್ರಾಪುರದ ಮಠದ ಸಣ್ಣ ಕೋಣೆಯಲ್ಲಿ ಗುರುಕುಲ ಪದ್ಧತಿಯ ಜತೆಗೆ ಪಠ್ಯದ ಶಿಕ್ಷಣ ನೀಡಲು ಆರಂಭವಾದ ಶಾಲೆ 155 ವರ್ಷಗಳಿಂದ ನಿರಂತರ ಜ್ಞಾನ ದೀವಿಗೆ ಬೆಳಗುತ್ತಿದೆ. ಇಂದು ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ಜ್ಞಾನ ದೇಗುಲವಾಗಿ ಬೆಳೆದಿದೆ.

1864ರಲ್ಲಿ ಕೇವಲ 25 ವಿದ್ಯಾರ್ಥಿಗಳೊಂದಿಗೆ ಚಿತ್ರಾಪುರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆರಂಭವಾಯಿತು. ಇಂದು ಜಿಲ್ಲೆಯಲ್ಲೇ ಅತಿ ಹೆಚ್ಚು ಮಕ್ಕಳು ದಾಖಲಾತಿ ಪಡೆದಿರುವ ಹೆಗ್ಗಳಿಕೆ ಪಡೆದಿದೆ. 155 ವರ್ಷಗಳ ಇತಿಹಾಸವಿರುವ ಈ ಶಾಲೆಗೆ ಚಿತ್ರಾಪುರ ಮಠದಿಂದಲೇದೇಣಿಗೆಯಾಗಿ ನಿರ್ಮಿಸಿದ ಮೂರಂತಸ್ತಿನ ಕಟ್ಟಡವಿದೆ. ಸಕಲ ಸೌಕರ್ಯಗಳನ್ನೂ ಹೊಂದಿದ್ದು, 326 ವಿದ್ಯಾರ್ಥಿಗಳಿದ್ದಾರೆ.

ಶಾಲೆಯಲ್ಲಿ ಎಲ್ಲ ರಾಷ್ಟ್ರೀಯ ಹಬ್ಬಗಳನ್ನು ಶಿಸ್ತುಬದ್ಧವಾಗಿ ಆಚರಿಸಲಾಗುತ್ತದೆ. ಗುಣಮಟ್ಟದ ಶಿಕ್ಷಣದ ಜತೆಗೆ ಪರಿಸರ ದಿನಾಚರಣೆ, ಯೋಗ, ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾ ಚಟುವಟಿಕೆಗಳನ್ನು ನಿಯಮಿತವಾಗಿ ನಡೆಸಲಾಗುತ್ತದೆ ಎಂದು ಶಾಲೆಯ ಮುಖ್ಯ ಶಿಕ್ಷಕ ವಾಮನ್ ಪಾವಸ್ಕರ್ ಹೇಳಿದರು.

ADVERTISEMENT

ಶಾಲೆಯಲ್ಲಿ ವಿಜ್ಞಾನ ಕ್ಲಬ್, ಹೌಸ್ ಕ್ಲಬ್ ಸೇರಿದಂತೆ ಇನ್ನಿತರ ಕ್ಲಬ್‌ಗಳನ್ನು ರಚಿಸಲಾಗಿದೆ. ಇವುಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಲು ವಾರಕ್ಕೆಒಮ್ಮೆವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.ತಿಂಗಳಿಗೊಮ್ಮೆ ಪಠ್ಯೇತರ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಮುಖ್ಯ ಶಿಕ್ಷಕರು ಹಾಗೂ ಒಂಬತ್ತುಶಿಕ್ಷಕಿಯರು ಸೇರಿದಂತೆ ಒಟ್ಟು ಮಂದಿ ಬೋಧಕ ಸಿಬ್ಬಂದಿಯಿದ್ದಾರೆ ಎಂದು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಮದಾಸ ಜಿ. ಆಗೇರತಿಳಿಸಿದರು.

ಕ್ರೀಡೆಯಲ್ಲಿ ಸಂಚಲನ: ‘ನಮ್ಮ ಶಾಲೆಯ ವಿದ್ಯಾರ್ಥಿಗಳು ತಾಲ್ಲೂಕು ಹಾಗೂ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.ಕಳೆದ ವರ್ಷ ನಮ್ಮ ಶಾಲೆಯ ವಿದ್ಯಾರ್ಥಿ ಕುಲದೀಪಕುಮಾರ್ ಜಗತ್ಪಾಲ್ ಕಶ್ಯಪ್, ಡಿಸ್ಕಸ್ ಥ್ರೋನಲ್ಲಿ ರಾಷ್ಟಮಟ್ಟದಲ್ಲಿ ಸ್ಪರ್ಧಿಸಿದ್ದುಹೆಮ್ಮೆಯ ವಿಷಯವಾಗಿದೆ’ ಎಂದು ಅವರು ಹೇಳಿದರು.

ನೀರಿನ ಸಮಸ್ಯೆ:ಸುಸಜ್ಜಿತ ಕಟ್ಟಡ, ಕೊಠಡಿಗಳು, ಪ್ರಯೋಗಾಲಯ,ಹೆಣ್ಣು ಹಾಗೂ ಗಂಡು ಮಕ್ಕಳಿಕೆ ಪ್ರತ್ಯೇಕವಾದ ಶೌಚಾಲಯಗಳಿವೆ.ಆದರೆ, ಈ ಶಾಲೆಗೆ ನೀರಿನ ಸಮಸ್ಯೆ ಕಾಡುತ್ತಿದೆ. ಆರಂಭದಿಂದಲೂ ಇರುವ ಈ ಸಮಸ್ಯೆಗೆ ಪರಿಹಾರ ದೊರಕಿಲ್ಲ. ಸದ್ಯ ಚಿತ್ರಾಪುರ ಮಠದ ಸಮೀಪ ಇರುವ ಟ್ಯಾಂಕ್‌ನಿಂದ ಶಾಲೆಗೆ ನೀರನ್ನು ಪಡೆದುಕೊಳ್ಳಲಾಗುತ್ತಿದೆ ಎಂದು ಮುಖ್ಯ ಶಿಕ್ಷಕ ವಾಮನ್ ಪಾವಸ್ಕರ್ ಹೇಳಿದರು.

‘ಈ ಸಮಸ್ಯೆಗೆ ಪರಿಹಾರ ಒದಗಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಈ ಹಿಂದೆ ಶಾಲಾ ಆವರಣದಲ್ಲಿಕೊಳವೆಬಾವಿ ಕೊರೆದರೂ ನೀರು ದೊರಕಲಿಲ್ಲ. ನೀರಿನ ಸಮಸ್ಯೆಯನ್ನು ಸ್ಥಳೀಯರೇ ಆದ ಶಾಸಕ ಸುನೀಲ ನಾಯ್ಕ ಅವರ ಗಮನಕ್ಕೆ ತರಲಾಗಿದೆ. ಅನುದಾನ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಾದೇವ ನಾಯ್ಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.