ADVERTISEMENT

ಕುಮಟಾ | ಹೆದ್ದಾರಿ ವಿಸ್ತರಣೆ: ಶಾಸಕ, ಅಧಿಕಾರಿಗಳಿಂದ ಸಮಸ್ಯೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 14:15 IST
Last Updated 1 ಏಪ್ರಿಲ್ 2025, 14:15 IST
ಕುಮಟಾ ಪಟ್ಟಣದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ತಾಂತ್ರಿಕ ತೊಂದರೆಯಿರುವ ಪ್ರದೇಶಗಳಿಗೆ ಶಾಸಕ ದಿನಕರ ಶೆಟ್ಟಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು 
ಕುಮಟಾ ಪಟ್ಟಣದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ತಾಂತ್ರಿಕ ತೊಂದರೆಯಿರುವ ಪ್ರದೇಶಗಳಿಗೆ ಶಾಸಕ ದಿನಕರ ಶೆಟ್ಟಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು    

ಕುಮಟಾ: ಪಟ್ಟಣದ ಗಿಬ್ ವೃತ್ತದಿಂದ ರಾಮಲೀಲಾ ಆಸ್ಪತ್ರೆವರೆಗೆ ಸುಮಾರು ಒಂದೂವರೆ ಕಿ.ಮೀ. ದೂರ ಅಲ್ಲಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಅಡ್ಡಿಯಾಗಿದ್ದ ತಾಂತ್ರಿಕ ಸಮಸ್ಯೆಗಳ ಪರಿಶೀಲಿಸಲು ಶಾಸಕ ದಿನಕರ ಶೆಟ್ಟಿ ಈಚೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು.

‘ಪಟ್ಟಣದ ಗಿಬ್ ವೃತ್ತ, ಡಾ.ಹರ್ಷ ಹೆಗಡೆ ಕಾಂಪ್ಲೆಕ್ಸ್ ಹಾಗೂ ರಾಮಲೀಲಾ ಆಸ್ಪತ್ರೆ ಬಳಿಯ ಸಂಬಂಧಿಸಿದ ಭೂ ಮಾಲೀಕರ ಜೊತೆ ಚರ್ಚೆ ನಡೆಸಲಾಗಿದೆ. ಪಟ್ಟಣದಲ್ಲಿ ಹಿಂದೆ ಚತುಷ್ಪಥ ಹೆದ್ದಾರಿಗಾಗಿ ಭೂಸ್ವಾಧೀನ ಮಾಡಿ ಹಾಕಿರುವ ಕಾಂಪೌಂಡ್ ಗಡಿ ಗುರುತು ಈಗ ಕಾಮಗಾರಿ ಮುಂದುವರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಆಧಾರವಾಗಿದೆ. ಹಿಂದೆ ಭೂ ಸ್ವಾಧೀನಪಡಿಸಿಕೊಂಡು ಭೂ ಮಾಲೀಕರಿಗೆ ಪರಿಹಾರ ನೀಡಲಾಗಿದೆಯೇ ಅಥವಾ ಇಲ್ಲವೇ ಎನ್ನುವುದರ ಬಗ್ಗೆ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಾಹಿತಿ ಲಭ್ಯವಿರುತ್ತದೆ. ಪರಿಹಾರ ನೀಡದಿದ್ದತೆ ತಕ್ಷಣ ಪರಿಹಾರ ನೀಡಿ ಕಾಮಗಾರಿ ಆರಂಭಿಸಲಾಗುವುದು’ ಎಂದು ದಿನಕರ ಶೆಟ್ಟಿ ಮಾಹಿತಿ ನೀಡಿದರು.

‘ಹಿಂದೆ ಭೂ ಸ್ವಾಧೀನಪಡಿಸಿಕೊಂಡ ನಂತರ ಭೂ ಮಾಲೀಕರಿಗೆ ಪರಿಹಾರ ನೀಡಿದ ಬಗ್ಗೆ ಯಾವುದೇ ದಾಖಲಾತಿ ಇಲ್ಲ ಎಂದು ಉಪವಿಭಾಗಾಧಿಕಾರಿ ಕಚೇರಿ ಮಾಹಿತಿ ನೀಡಿದೆ. ಅಂಥವರಿಗೆ ಪರಿಹಾರಕ್ಕಾಗಿ 3ಡಿ ವಿನ್ಯಾಸ ಆಗಲೇ ಸಿದ್ಧವಾಗಿದ್ದು, ಪರಿಹಾರ ನೀಡುವ ಖಾತರಿ ಮೇಲೆ ಚತುಷ್ಪಥ ಹೆದ್ದಾರಿ ಕಾಮಗಾರಿ ಆರಂಭಿಸಲಾಗುವುದು’ ಎಂದು ರಾಷ್ಟ್ರೀಯ  ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ ಹೇಳಿದರು.

ADVERTISEMENT

‘ರಾಮಲೀಲಾ ಆಸ್ಪತ್ರೆ ಬಳಿ ಹೆದ್ದಾರಿ ವಿಸ್ತರಣೆಗಾಗಿ ಅರೆಬರೆ ಡಾಂಬರೀಕರಣ ಮಾಡಿದ ಜಾಗದಲ್ಲಿ ಖಾಸಗಿ ವಾಹನ ನಿಲುಗಡೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲಿ ತಕ್ಷಣ ಕಾಮಗಾರಿ ಆರಂಭಿಸಿದರೆ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ' ಎಂದು ಸ್ಥಳೀಯರು ತಂಡಕ್ಕೆ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.