ADVERTISEMENT

ಕಾಂಗ್ರೆಸ್ ವಿರೋಧಿ, ಜೆಡಿಎಸ್ ಹತ್ತಿರ; ಚುನಾವಣೆ ಗೆಲ್ಲುವುದಷ್ಟೆ ನಮ್ಮ ಗುರಿ –ಆರಗ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 12:23 IST
Last Updated 23 ನವೆಂಬರ್ 2021, 12:23 IST
   

ಶಿರಸಿ: ಕಾಂಗ್ರೆಸ್‌ ನಮ್ಮ ವಿರೋಧಿ. ಅವರಿಗಿಂತ ಜೆಡಿಎಸ್‌ನವರು ಹತ್ತಿರದವರು. ಅವರ ಅಭ್ಯರ್ಥಿ ಇಲ್ಲದ ಕಡೆ ಬೆಂಬಲ ಪಡೆದರೆ ತಪ್ಪೇನಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಸಿದ್ದಾಪುರ ತಾಲ್ಲೂಕಿನ ಕಲಗದ್ದೆ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ ಅವರು ಮಾಧ್ಯಮದವರ ಜತೆ ಮಾತನಾಡಿದರು. ಇದೆ ವೇಳೆ 'ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ' ಎಂಬ ಕಾಂಗ್ರೆಸ್‌ ಆರೋಪಕ್ಕೆ ಈ ರೀತಿ ಸಮರ್ಥನೆ ನೀಡಿದರು.

'ಕಾಂಗ್ರೆಸ್‌ಗೆ ಒಳ ಒಪ್ಪಂದ ಮಾಡಿಕೊಂಡ ರೂಢಿ ಇದೆ. ನಾವು ಅವರ ರೀತಿಯಲ್ಲಿ ಸಾಗುವುದಿಲ್ಲ. ನಮಗೆ ಕಾಂಗ್ರೆಸ್‌ ಸೋಲಿಸುವದಷ್ಟೆ ಗುರಿ. ಜೆಡಿಎಸ್ ಅಭ್ಯರ್ಥಿ ಇಲ್ಲದ ಕಡೆ ಅವರ ಬೆಂಬಲ ಪಡೆದು ಹೆಚ್ಚು ಲೀಡ್ ಪಡೆಯುತ್ತೇವೆ' ಎಂದರು.

ADVERTISEMENT

'ಮುರ್ಡೇಶ್ವರ ದೇವಸ್ಥಾನದ ವಿಗ್ರಹ ಧ್ವಂಸಗೊಳಿಸಿ ಐಸಿಸ್ ಧ್ವಜ ನೆಟ್ಟ ಚಿತ್ರ ಹರಿಬಿಟ್ಟವರ ಕುರಿತು ತನಿಖೆಗೆ ಸೂಚಿಸಲಾಗಿದೆ. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಲಾಗುವದು. ದೇವಸ್ಥಾನಕ್ಕೆ ಸೋಮವಾರದಿಂದಲೆ ಭದ್ರತೆ ಹೆಚ್ಚಿಸಲಾಗಿದೆ' ಎಂದರು.

'ರಾಜ್ಯದ ಕರಾವಳಿ ಭಾಗದಲ್ಲಿ ಭದ್ರತೆ ಹೆಚ್ಚಿಸುವ ಕುರಿತು ಕೇಂದ್ರ ಸರ್ಕಾರದ ನೆರವು ಕೇಳಿದ್ದೇವೆ. ಕರಾವಳಿ ಕಾವಲು ಪಡೆಗೆ 30 ಸುಸಜ್ಜಿತ ಬೋಟ್‌ಗಳ ಬೇಡಿಕೆಯನ್ನೂ ಇಡಲಾಗಿದೆ' ಎಂದರು.

'ದೇಶದ್ರೋಹ ಚಟುವಟಿಕೆಯಲ್ಲಿ ಭಟ್ಕಳವೂ ಸೇರಿದಂತೆ ಕರಾವಳಿ ಭಾಗದ ಹಲವು ಯುವಕರು ಪಾಲ್ಗೊಳ್ಳುತ್ತಿರುವ ಸಂಶಯವಿದ್ದು, ಈ ಬಗ್ಗೆ ನಿಗಾ ಇಡಲಾಗುತ್ತಿದೆ. ಮೋದಿ ಸರ್ಕಾರ ಬಂದ ಮೇಲೆ ಬಾಂಬ್ ಸ್ಫೋಟದಂತಹ ಚಟುವಟಿಕೆ ತಗ್ಗಿದೆ' ಎಂದರು.

'ಎಸ್‌.ಡಿ.ಪಿ.ಐ., ಪಿ.ಎಫ್.ಐ. ಸಂಘಟನೆ ನಿಷೇಧಿಸುವ ನಿರ್ಧಾರ ಕೇಂದ್ರ ಸರ್ಕಾರಕ್ಕೆ ಬಿಟ್ಟದ್ದು' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.