ಹೊನ್ನಾವರ: ತಾಲ್ಲೂಕಿನಲ್ಲಿ ದೀಪಾವಳಿ ಹಬ್ಬಕ್ಕೆ ಜನರ ತಯಾರಿ ಜೋರಾಗಿ ನಡೆದಿದ್ದು ಮೊಗೆಕಾಯಿಗೆ ಬೇಡಿಕೆ ಹೆಚ್ಚಿದೆ. ವಿವಿಧ ಕಾರಣಗಳಿಗಾಗಿ ಈಗ ಗ್ರಾಮೀಣ ಭಾಗಗಳಲ್ಲೂ ಮೊಗೆಕಾಯಿ ಬೆಳೆಯುವ ಕಾಯಕ ಮರೆಯಾಗುತ್ತಿದೆ.
ಕೆಲ ವರ್ಷಗಳ ಹಿಂದೆ ಹಳ್ಳಿಗಳಲ್ಲಿ ಜನರು ಗುಡ್ಡ ಪ್ರದೇಶಗಳಲ್ಲಿ, ಗದ್ದೆಗಳಲ್ಲಿ ಸಾಮೂಹಿಕ ಕೃಷಿಯ ಮೂಲಕ ಮೊಗೆಕಾಯಿ ಬೆಳೆಯುವ ಪದ್ಧತಿಯಿತ್ತು. ಮಳೆಗಾಲದ ಆರಂಭದಲ್ಲಿ ಊರ ಸಮೀಪದ ಗುಡ್ಡ ಅಥವಾ ಶೇಂಗಾ ಬೆಳೆಯುವ ಪ್ರದೇಶಗಳಲ್ಲಿ ಮಡಿಗಳನ್ನು ಮಾಡಿ ಮೊಗೆ ಬೀಜ ಬಿತ್ತುತ್ತಿದ್ದರು.
ಬೀಜ ಮೊಳೆತು ಬಳ್ಳಿಯಾಗುತ್ತಿದ್ದಂತೆ ಅವುಗಳಿಗೆ ಒಂದೆರಡು ಬಾರಿ ಗೊಬ್ಬರ ಹಾಕುವ ಕೆಲಸ ನಡೆಯುತ್ತಿತ್ತು. 3-4 ತಿಂಗಳುಗಳಲ್ಲಿ ಬಳ್ಳಿ ಹೂಬಿಟ್ಟು ಮಿಡಿಕಚ್ಚಿ ಕಾಯಿ ದೊಡ್ಡದಾಗಿ ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಕೊಯ್ಲಿಗೆ ಬರುತ್ತಿತ್ತು. ಬೀಜ ಬಿತ್ತನೆ,ಗೊಬ್ಬರ ಹಾಕುವ ಪ್ರಕ್ರಿಯೆ ಹಾಗೂ ಕಾಯಿ ಕೊಯ್ಲು ಎಲ್ಲವೂ ಸಾಮೂಹಿಕವಾಗಿ ನಡೆಯುತ್ತಿತ್ತು.
‘ಮೊಗೆಕಾಯಿ ಬೆಳೆದ ಜಾಗದಲ್ಲಿ ಕೆಲವೊಮ್ಮೆ ಕಾವಲು ಕೂಡ ಕಾಯುತ್ತಿರಲಿಲ್ಲ. ಕೆಲಸದ ದಿನಗಳನ್ನು ಬಿಟ್ಟರೆ ಮೊಗೆ ಬೆಳೆದ ಜಾಗಕ್ಕೆ ಕೊಯ್ಲಿಗೆ ಮಾತ್ರ ಹೋಗುತ್ತಿದ್ದೇವು. ಆ ದಿನಗಳಲ್ಲಿ ಈಗಿನಂತೆ ಗುಡ್ಡ ಪ್ರದೇಶಗಳಲ್ಲೂ ಅಷ್ಟೊಂದು ಪ್ರಾಣಿಗಳ ಕಾಟ ಇರುತ್ತಿರಲಿಲ್ಲ. ಈಗ ವನ್ಯಪ್ರಾಣಿಗಳ ಹಾವಳಿಯಿಂದ ಮನೆ ಮುಂದೆಯೂ ಮೊಗೆ ಅಥವಾ ಯಾವುದೇ ತರಕಾರಿ ಬೆಳೆಯಲಾಗುತ್ತಿಲ್ಲ. ಸಾಮೂಹಿಕ ಕೃಷಿಯಿಂದ ಮೊಗೆ ಬೆಳೆಯುತ್ತಿದ್ದ ನೆಮ್ಮದಿ ಹಾಗೂ ಸಾವಯವ ಗೊಬ್ಬರ ಬಳಸಿ ತೆಗೆಯಲಾಗುತ್ತಿದ್ದ ಆರೋಗ್ಯಕರ ಫಸಲು ಎಲ್ಲವೂ ಈಗ ನೆನಪು ಮಾತ್ರ. ನೋಡಿ ದುಬಾರಿ ಬೆಲೆ ತೆತ್ತು ಅನಿವಾರ್ಯವಾಗಿ ಪೇಟೆಗೆ ಬಂದು ಮೊಗೆ ಕಾಯಿ ಕೊಂಡೊಯ್ಯುತ್ತಿದ್ದೇನೆ’ ಎಂದು ಕವಲಕ್ಕಿಯಲ್ಲಿ ಮೊಗೆಕಾಯಿ ಖರೀದಿಸುತ್ತಿದ್ದ ಕೊಳಗದ್ದೆಯ ರಾಮ ಗೌಡ ಅನುಭವ ಹಂಚಿಕೊಂಡರು.
ಇಲ್ಲಿನ ಕೆಲವು ಸಣ್ಣ ಪುಟ್ಟ ವ್ಯಾಪಾರಸ್ಥರು ಕೂಡ ಹೊರಗಿನವರಿಂದ ಮೊಗೆಕಾಯಿ ಖರೀದಿಸಿ ಕವಲಕ್ಕಿ, ಹಡಿನಬಾಳ ಮತ್ತಿತರ ಸಣ್ಣಪುಟ್ಟ ಪೇಟೆ ಜಾಗಗಳಲ್ಲಿ ಮಾರಾಟಕ್ಕಿಟ್ಟಿದ್ದಾರೆ. ಕೆಜಿ ಮೊಗೆ ಕಾಯಿ ₹60-80 ದರಕ್ಕೆ ಮಾರಾಟವಾಗುತ್ತಿದೆ.
‘ಸ್ಥಳೀಯವಾಗಿ ಮೊಗೆಕಾಯಿ ಸಿಗುತ್ತಿಲ್ಲ. ಇವೆಲ್ಲ ಹೊರಗಿನಿಂದ ತರಿಸಿದ್ದು. ವ್ಯಾಪಾರದಲ್ಲಿ ಪೈಪೋಟಿ ಇದೆ. ವ್ಯಾಪಾರ ಚೆನ್ನಾಗಿ ನಡೆದಿದ್ದು ಸೋಮವಾರದವರೆಗೆ ಮುಂದುವರಿಯುವ ನಿರೀಕ್ಷೆಯಿದೆ’ ಎಂದು ವ್ಯಾಪಾರಿ ಶೇಖರ ನಾಯ್ಕ ಹೇಳಿದರು.
ಮೊಗೆಕಾಯಿಗೆ ಕಣ್ಣು ಮೂಗು ಬಾಯಿ ಮೀಸೆ ಬಿಡಿಸಿ ಬಲಿ ಚಕ್ರವರ್ತಿ ಎಂದು ಪೂಜಿಸುವ ಪದ್ಧತಿ ಇದೆ. ದೀಪಾವಳಿಗೆ ಹಬ್ಬದ ದಿನಗಳಂದು ತಯಾರಿಸುವ ಕಡಬು ಹಾಗೂ ಗೋಪೂಜೆಗೆ ಸಿದ್ಧಪಡಿಸುವ ಗೋಗ್ರಾಸಕ್ಕೆ ಮೊಗೆಕಾಯಿ ಬಳಸಲಾಗುತ್ತದೆ. ಈ ಎಲ್ಲ ಕಾರಣಗಳಿಂದ ಹಬ್ಬಕ್ಕೆ ಮೊಗೆಕಾಯಿಗೆ ಬೇಡಿಕೆ ಕೂಡ ಹೆಚ್ಚುತ್ತಿದ್ದು ಮೊಗೆಕಾಯಿ ವ್ಯಾಪಾರಸ್ಥರೂ ತಾಲ್ಲೂಕಿನ ವಿವಿಧೆಡೆಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.