ADVERTISEMENT

ಹೊನ್ನಾವರ | ಶರಾವತಿ ನದಿ ದಂಡೆಗಳಲ್ಲಿ ನೆರೆ

ಲಿಂಗನಮಕ್ಕಿ ಜಲಾಶಯ ಭರ್ತಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 7:07 IST
Last Updated 30 ಆಗಸ್ಟ್ 2025, 7:07 IST
ಹೊನ್ನಾವರ ತಾಲ್ಲೂಕಿನ ಅಳ್ಳಂಕಿ ಗಾಬಿತಕೇರಿಯ ಮನೆಯೊಂದು ನೆರೆ ನೀರಿನಿಂದ ಆವೃತವಾಗಿದೆ.              
ಹೊನ್ನಾವರ ತಾಲ್ಲೂಕಿನ ಅಳ್ಳಂಕಿ ಗಾಬಿತಕೇರಿಯ ಮನೆಯೊಂದು ನೆರೆ ನೀರಿನಿಂದ ಆವೃತವಾಗಿದೆ.                 

ಹೊನ್ನಾವರ: ಲಿಂಗನಮಕ್ಕಿ ಜಲಾಶಯ ಹಾಗೂ ಪ್ರಸ್ತುತ ಜಲಾಶಯದ ಕೆಳ ಭಾಗದಲ್ಲಿರುವ ಗೇರುಸೊಪ್ಪ ಜಲಾಶಯ ಬಹುತೇಕ ಭರ್ತಿಯಾಗಿದ್ದು ಜಲಾಶಯಗಳ ಸುರಕ್ಷತೆಯ ಹಿನ್ನೆಲೆಯಲ್ಲಿ ಜಲಾಶಯದಿಂದ ಹೊರಕ್ಕೆ ಬಿಡಲಾಗುತ್ತಿರುವ ಹೆಚ್ಚುವರಿ ನೀರಿನಿಂದಾಗಿ
ಜಲಾಶಯದ ಕೆಳ ಭಾಗದ ಶರಾವತಿ ನದಿ ದಂಡೆ ಪ್ರದೇಶಗಳಲ್ಲಿ ನೀರು ನುಗ್ಗಿದೆ.

ಗುರುವಾರ ಸಂಜೆಯಿಂದ 75 ಸಾವಿರ ಕ್ಯೂಸೆಕ್ ನೀರಿ ಹರಿಬಿಡಲಾಗುತ್ತಿತ್ತು. ಶುಕ್ರವಾರ ಸಂಜೆಯ ವೇಳೆಗೆ ನೀರು ಬಿಡುವ ಪ್ರಮಾಣವನ್ನು 88500 ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ ಎಂದು ಕೆಪಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ತಗ್ಗು ಪ್ರದೇಶಗಳಲ್ಲಿರುವ ಗದ್ದೆ, ತೋಟಗಳಿಗೆ ನೀರು ನುಗ್ಗಿದ್ದು ಅಳ್ಳಂಕಿ ಗಾಬಿತಕೇರಿ ಸೇರಿದಂತೆ ನದಿ ದಂಡೆಗಳ ಕೆಲ ಪ್ರದೇಶಗಳ ವಾಸದ ಮನೆಗಳೂ ಜಲಾವೃತವಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಶುಕ್ರವಾರ ಸಂಜೆ ನೀರು ಬಿಡುವ ಪ್ರಮಾಣ ಹೆಚ್ಚಿಸಿದ್ದರಿಂದ ಇನ್ನೂ ಹೆಚ್ಚಿನ ಪ್ರದೇಶಗಳಿಗೆ ನೆರೆ ನೀರು ನುಗ್ಗುವ ಭೀತಿ ನಿರ್ಮಾಣವಾಗಿದೆ.

ADVERTISEMENT

ಈ ನಡುವೆ ಶರಾವತಿ ನದಿಯ ಉಪ ನದಿಗಳಾದ ಗುಂಡಬಾಳ, ಬಡಗಣಿ ಮತ್ತು ಭಾಸ್ಕೇರಿ ಮತ್ತಿತರ ಹಳ್ಳಗಳೂ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಗುರುವಾರ ರಾತ್ರಿ ಹಾಗೂ ಶುಕ್ರವಾರ ಬೆಳಿಗ್ಗೆ ತಾಲ್ಲೂಕಿನ ಹಲವೆಡೆ ಭಾರಿ ಮಳೆಯಾಯಿತಾದರೂ ನಂತರದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಪ್ರವಾಹದ ತೀವ್ರತೆ ಸದ್ಯ ಕಡಿಮೆಯಾಗಿದೆ. 

ಶರಾವತಿ ನದಿ ದಂಡೆಗಳ ಪ್ರದೇಶಗಳಾದ ಸರಳಗಿ, ಹೆರಂಗಡಿ, ಮೇಲಿನ ಇಡಗುಂಜಿ, ಜಲವಳ್ಳಿ, ಗುಂಡಬಾಳಾ ನದಿ ದಂಡೆಗಳ ಪ್ರದೇಶಗಳಾದ ಚಿಕ್ಕನಕೋಡ, ಗುಂಡಬಾಳಾ, ಖರ್ವಾ, ಬೇರೊಳ್ಳಿ, ಭಾಸ್ಕೇರಿ ಹಳ್ಳ ದಂಡೆಗಳ ಪ್ರದೇಶಗಳಾದ ಹೊಸಾಕುಳಿ, ಮುಗ್ವ ಸೇರಿದಂತೆ ಒಟ್ಟು 15 ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು ಒಟ್ಟು 368 ಸಂತ್ರಸ್ತರು ಇಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

ತಹಶೀಲ್ದಾರ್‌ ಪ್ರವೀಣ ಕರಾಂಡೆ, ನೆರೆ ಸಂತ್ರಸ್ತರ ಸಮಿತಿ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಮತ್ತಿತರರು ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.