ಹೊನ್ನಾವರ: ಪ್ರತಿ ವರ್ಷ ಮಳೆಗಾಲದಲ್ಲಿ ಹಲವು ಬಾರಿ ಮನೆಗಳಿಗೆ ನೀರು ನುಗ್ಗಿ ಇನ್ನಿಲ್ಲದ ಪಡಿಪಾಟಲು ಅನುಭವಿಸುವ ಗುಂಡಬಾಳಾ ನದಿ ದಂಡೆಯ ನಿವಾಸಿಗಳಿಗೆ ಈ ಬಾರಿಯೂ ಸಂಕಷ್ಟ ತಪ್ಪಿಲ್ಲ. ನಿವೇಶನ ನೀಡಲು ಉಂಟಾಗಿರುವ ಅನಗತ್ಯ ವಿಳಂಬಕ್ಕೆ ಜನಪ್ರತಿನಿಧಿಗಳ ಬದ್ಧತೆಯ ಕೊರತೆ ಹಾಗೂ ಅಧಿಕಾರಿಗಳ ಉದಾಸೀನತೆ ಕಾರಣ ಎಂಬ ಆರೋಪ ವ್ಯಕ್ತವಾಗಿದೆ.
ನೆರೆ ನದಿ ಎಂದೇ ಕುಖ್ಯಾತಿ ಪಡೆದ ಗುಂಡಬಾಳಾ ನದಿ ಬೇಸಿಗೆಯಲ್ಲಿ ಬರಿದಾಗುತ್ತದೆ. ಸ್ವಲ್ಪ ಮಳೆಗೇ ತುಂಬಿ ತುಳುಕಲಿದೆ. ಘಟ್ಟದ ಮೇಲೆ ಮಳೆಯಾದರೆ ಈ ನದಿಗೆ ದಿಢೀರ್ ಪ್ರವಾಹ ಬಂದು ಸುತ್ತಲಿನ ಮನೆಗಳಿಗೆ ನೀರು ನುಗ್ಗುತ್ತದೆ. ಕಳೆದ ಮಳೆಗಾಲದಲ್ಲಿ ಒಟ್ಟು 6 ಬಾರಿ ನದಿಗೆ ನೆರೆ ಬಂದು ರಾತ್ರೋರಾತ್ರಿ ಜನರು ತಮ್ಮ ಮನೆ ಮಠಗಳನ್ನು ತೊರೆದು ಕಾಳಜಿ ಕೇಂದ್ರಗಳಿಗೆ ಧಾವಿಸಿದ್ದರು.
ಸಂತ್ರಸ್ತರಿಗೆ ಸಾಂತ್ವನ ಹೇಳಲು ಕಾಳಜಿ ಕೇಂದ್ರಗಳಿಗೆ ಭೇಟಿ ನೀಡುವ ಜನಪ್ರತಿನಿಧಿಗಳು ಅವರಿಗೆ ಎತ್ತರದ ಜಾಗದಲ್ಲಿ ಮನೆ ಕಟ್ಟಿಕೊಡುವ ಭರವಸೆಯನ್ನು ಹಲವು ವರ್ಷಗಳಿಂದ ನೀಡುತ್ತಲೇ ಬಂದಿದ್ದಾರೆ.
‘1.4 ಗುಂಟೆ ಮನೆ ನಿವೇಶನ ಹಾಗೂ ಮನೆ ಕಟ್ಟಿಕೊಳ್ಳಲು ₹1.75 ಲಕ್ಷ ಸಹಾಯಧನವನ್ನು ಸರ್ಕಾರದಿಂದ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭರವಸೆ ನೀಡಿದ ನಂತರದಲ್ಲಿ ಒಂದು ಮಳೆಗಾಲ ಈಗಾಗಲೇ ಕಳೆದಿದ್ದು ಇನ್ನೊಂದು ಆರಂಭವಾಗುವುದರಲ್ಲಿದೆ' ಎಂದು ನೆರೆ ಸಂತ್ರಸ್ತರು ಹೇಳಿದ ಮಾತಿನಲ್ಲಿ ನೋವು ಮತ್ತು ವ್ಯಂಗ್ಯ ಅಡಗಿತ್ತು.
‘ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಮಟ್ಟದ ಅಧಿಕಾರಿಗಳಿಗೆ ಮನೆ ನಿವೇಶನಕ್ಕೆ ಆಗ್ರಹಿಸಿ ಈ ವರ್ಷವೂ ಪತ್ರ ಬರೆದಿದ್ದೇವೆ. ಪತ್ರಕ್ಕೆ ಸ್ವೀಕೃತಿ ಸಿಗುತ್ತದೆಯೇ ಹೊರತು ಮನೆ ಮಾತ್ರ ಮರೀಚಿಕೆಯಾಗಿದೆ’ ಎಂದು ಗ್ರೇಸಿ ಫರ್ನಾಂಡೀಸ್ ಹೇಳಿದರು.
‘ಕಷ್ಟ ತಾಳಲಾರದೆ ಖಾಲಿ ಇರುವ ಎತ್ತರದ ಜಾಗದಲ್ಲಿ ಮನೆ ಕಟ್ಟಲು ಮುಂದಾದಾಗ ಪಂಚಾಯಿತಿಯವರು ಬೇರೆಡೆ ಜಾಗ ನೀಡುವ ಭರವಸೆ ನೀಡಿ ನನ್ನನ್ನು ಅಲ್ಲಿಂದ ತೆರವುಗೊಳಿಸಿದರು. 3 ವರ್ಷವಾದರೂ ನನಗೆ ಮನೆ ಸಿಕ್ಕಿಲ್ಲ’ ಎಂದು ವನಿತಾ ಹಳ್ಳೀರ ಅಳಲು ತೋಡಿಕೊಂಡರು.
‘ಹಿಂದೆ ನನಗೆ ನೀಡಿದ್ದ ಮನೆ ನಿವೇಶನವನ್ನು ನಾನು ಮನೆ ಕಟ್ಟಿಲ್ಲ ಎಂಬ ನೆಪವೊಡ್ಡಿ ನೋಟಿಸ್ ಕೂಡ ನೀಡದೆ ಗ್ರಾಮ ಪಂಚಾಯಿತಿಯವರು ವಾಪಸ್ ಪಡೆದಿದ್ದಾರೆ. ಬಡತನದಿಂದ ಮನೆ ಕಟ್ಟಿಕೊಳ್ಳಲಾಗದ ನನ್ನ ಕಷ್ಟಕ್ಕೆ ಜನಪ್ರತಿನಿಧಿಗಳು ಜಾಣಕುರುಡರಾಗಿದ್ದಾರೆ’ ಎಂದು ಈಶ್ವರ ಹಳ್ಳೇರ ಆಡಳಿತ ವ್ಯವಸ್ಥೆಯ ಇನ್ನೊಂದು ಮುಖ ಅನಾವರಣಗೊಳಿಸಿದರು.
ಸ್ಥಳೀಯ ಚಿಕ್ಕನಕೋಡ ಗ್ರಾಮ ಪಂಚಾಯಿತಿ ನಡೆಸಿದ ಸಮೀಕ್ಷೆಯಲ್ಲಿ 132 ನೆರೆ ಸಂತ್ರಸ್ತ ಕುಟುಂಬಗಳನ್ನು ಗುರುತಿಸಿದೆ. ವಠಾರದ ಸಮೀಪದ ಜಾಗದಲ್ಲಿ 16 ನಿವೇಶನ ಹಾಗೂ ಜನಕಡ್ಕಲ್ ಗ್ರಾಮದ ಸ.ನಂ.287/9ರಲ್ಲಿ ಇರುವ 3.12 ಎಕರೆ ಜಾಗದಲ್ಲಿ ಉಳಿದ ನಿವೇಶನ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.
‘ತಮ್ಮ ಊರಿನಲ್ಲಿ ಸಂತ್ರಸ್ತರಿಗೆ ಮನೆ ನಿವೇಶನ ನೀಡಲು ಜನಕಡ್ಕಾಲ್ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ’ ಎನ್ನುವುದು ಅಧಿಕಾರಿಗಳು ನೀಡುವ ಮಾಹಿತಿ. ಕೆಲ ಸ್ಥಳೀಯ ರಾಜಕಾರಣಿಗಳೇ ಜನರನ್ನು ಎತ್ತಿಕಟ್ಟಿ ನಿವೇಶನ ನೀಡುವುದನ್ನು ವಿರೋಧಿಸುವಂತೆ ಮಾಡಿದ್ದಾರೆ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದ್ದು ನೆರೆ ಸಂತ್ರಸ್ತರ ನಿರೀಕ್ಷೆಗೆ ಮತ್ತೆ ತಣ್ಣೀರೆರೆಚಿದಂತಾಗಿದೆ.
‘ಜನಕಡ್ಕಲ್ ನಲ್ಲಿ ನೆರೆ ಸಂತ್ರಸ್ತರಿಗೆ ನಿವೇಶನ ನೀಡಲು ಅಲ್ಲಿನ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವ್ಯಕ್ತಿಯೋರ್ವರು ತಕರಾರು ಎತ್ತಿರುವುದರಿಂದ ವಠಾರದ ಸಮೀಪದ ಜಾಗವನ್ನು ಮತ್ತೆ ಸರ್ವೆ ಮಾಡಬೇಕಾಗಿದೆ. ಮನೆ ನಿವೇಶನ ಹಂಚಿಕೆಯ ವಿಷಯದಲ್ಲಿ ಒಂದು ನಿರ್ಧಾರಕ್ಕೆ ಬರಲಾಗಿಲ್ಲ’ ಎಂದು ಚಿಕ್ಕನಕೋಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ನಾಯ್ಕ ಹೇಳಿದರು.
ಗುಂಡಬಾಳ ನದಿ ನೆರೆ ಸಂತ್ರಸ್ತರಿಗೆ ಮನೆ ನೀಡುವ ಪ್ರಸ್ತಾವದ ಕಡತ ಅಧಿಕಾರಿಗಳ ಪರಿಶೀಲನೆಯಲ್ಲಿದೆ. ಜನಕಡ್ಕಲ್ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಗ್ರಾಮ ಪಂಚಾಯಿತಿಗೆ ಸೂಚಿಸಲಾಗಿದೆಪ್ರವೀಣ ಕರಾಂಡೆ ತಹಶೀಲ್ದಾರ್ ಹೊನ್ನಾವರ ತಾಲ್ಲೂಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.