ADVERTISEMENT

ಪ್ರತ್ಯೇಕ ಪ್ರಕರಣ: ಎರಡು ದೋಣಿಗಳ ಮುಳುಗಡೆ

ಭಟ್ಕಳ: ಒಟ್ಟು ಏಳು ಮಂದಿ ಮೀನುಗಾರರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 12:32 IST
Last Updated 21 ಡಿಸೆಂಬರ್ 2020, 12:32 IST
ಭಟ್ಕಳದ ಸಮೀಪದ ಸಮುದ್ರದಲ್ಲಿ ಸೋಮವಾರ ಮುಳುಗಿದ ಪಾತಿ ದೋಣಿಯಲ್ಲಿದ್ದ ಮೀನುಗಾರರೊಬ್ಬರನ್ನು ಕರಾವಳಿ ಕಾವಲು ಪಡೆಯ ಸಿಬ್ಬಂದಿ ರಕ್ಷಿಸಿದರು
ಭಟ್ಕಳದ ಸಮೀಪದ ಸಮುದ್ರದಲ್ಲಿ ಸೋಮವಾರ ಮುಳುಗಿದ ಪಾತಿ ದೋಣಿಯಲ್ಲಿದ್ದ ಮೀನುಗಾರರೊಬ್ಬರನ್ನು ಕರಾವಳಿ ಕಾವಲು ಪಡೆಯ ಸಿಬ್ಬಂದಿ ರಕ್ಷಿಸಿದರು   

ಭಟ್ಕಳ: ಇಲ್ಲಿನ ಮೀನುಗಾರಿಕಾ ಬಂದರಿನ ವ್ಯಾಪ್ತಿಯಲ್ಲಿ ಸಮುದ್ರದಲ್ಲಿ ಭಾನುವಾರ ಮತ್ತು ಸೋಮವಾರ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ದೋಣಿಗಳು ಮುಳುಗಿವೆ. ಒಟ್ಟು ಏಳು ಮಂದಿಯನ್ನು ರಕ್ಷಿಸಲಾಗಿದೆ.

ಮೊದಲ ಪ್ರಕರಣದಲ್ಲಿ, ಭಟ್ಕಳದಿಂದ 22 ನಾಟಿಕಲ್ ಮೈಲು (ಸುಮಾರು 40 ಕಿ.ಮೀ) ದೂರದಲ್ಲಿ ಭಾನುವಾರ ಆಳಸಮುದ್ರ ಮೀನುಗಾರಿಕೆ ಮಾಡುತ್ತಿದ್ದ ದೋಣಿಯೊಂದು ಮುಳುಗಿದೆ. ಅದರಲ್ಲಿದ್ದ ಆರು ಜನ ಮೀನುಗಾರರನ್ನು ಸಮೀಪದಲ್ಲಿದ್ದ ಮತ್ತೊಂದು ದೋಣಿಯ ಮೀನುಗಾರರು ರಕ್ಷಣೆ ಮಾಡಿ ದಡಕ್ಕೆ ಕರೆದುಕೊಂಡು ಬಂದಿದ್ದಾರೆ.

ಅವಘಡಕ್ಕೆ ಸಿಲುಕಿದ ದೋಣಿಯನ್ನು ಅಂಕೋಲಾದ ಸುರೇಶ ಖಾರ್ವಿಯ ಅವರಿಂದ ಬಾಡಿಗೆಗೆ ಪಡೆದುಕೊಂಡಿದ್ದ ‘ಮತ್ಸ್ಯಆಂಜನೇಯ’ ಎಂದು ಗುರುತಿಸಲಾಗಿದೆ. ಭಟ್ಕಳದ ದಾಮೋದರ ಮಾಸ್ತಿ ಮೊಗೇರ ಮಾಲೀಕತ್ವದ ‘ನವದುರ್ಗಿ’ ದೋಣಿಯೊಂದಿಗೆ ಅದನ್ನು ಸಮುದ್ರಕ್ಕೆ ತೆಗೆದುಕೊಂಡು ಹೋಗಲಾಗಿತ್ತು.

ADVERTISEMENT

ಅದರಲ್ಲಿದ್ದ ಅಂಕೋಲಾ ಬೆಳಂಬಾರದ ಸುರೇಶ ಖಾರ್ವಿ, ಕಿರಣ ಖಾರ್ವಿ, ಸುದರ್ಶನ ಖಾರ್ವಿ, ಭಟ್ಕಳದ ನಾಗೇಶ ಖಾರ್ವಿ, ಶ್ರೀಕಾಂತ ಖಾರ್ವಿ ಹಾಗೂ ರಮೇಶ ಮೊಗೇರ ಅವರನ್ನು ‘ನವದುರ್ಗಿ ದೋಣಿ’ಯಲ್ಲಿದ್ದ ನಾರಾಯಣ ಖಾರ್ವಿ, ಮಾರುತಿ ಖಾರ್ವಿ, ಲಕ್ಷ್ಮಣ ಖಾರ್ವಿ, ಜನಾರ್ದನ ಮೊಗೇರ ಅವರು ರಕ್ಷಣೆ ಮಾಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ, ಅಳ್ವೇಕೋಡಿಯಿಂದ ಸೋಮವಾರ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ ಪಾತಿದೋಣಿಯೊಂದು ಕಾಗೆಗುಡ್ಡದ ಸಮೀಪ ಸಮುದ್ರದಲ್ಲಿ ಮುಳುಗಡೆಯಾಗಿದೆ.

ಯಾದವ ಮಂಜು ಮೊಗೇರ ಮಾಲೀಕತ್ವದ ‘ಮತ್ಸ್ಯನಿಧಿ’ ದೋಣಿ ಇದಾಗಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಕರಾವಳಿ ಕಾವಲು ಪಡೆ ಸಿಬ್ಬಂದಿ, ಮೀನುಗಾರ ಹಾಗೂ ಪಾತಿದೋಣಿಯನ್ನು ರಕ್ಷಿಸಿ ದಡಕ್ಕೆ ತಲುಪಿಸಿದ್ದಾರೆ. ಕರಾವಳಿ ಕಾವಲು ಪಡೆಯ ಕ್ಯಾಪ್ಟನ್ ಮಲ್ಲಪ್ಪ ಗದ್ದಿಗೌಡರ್, ಸಿಬ್ಬಂದಿ ಸಂಜೀವ ನಾಯ್ಕ, ದಿನೇಶ ನಾಯ್ಕ, ಜನಾರ್ದನ ಮೊಗೇರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.