ADVERTISEMENT

ಕಾರವಾರ: ಸಣ್ಣ ಕೈಗಾರಿಕೆಗೆ ಗ್ರಾಮ ಪಂಚಾಯತ್ ಅಸಹಕಾರ

ಶಿರವಾಡದಲ್ಲಿ ಬೀದಿದೀಪ ನಿರ್ವಹಣೆ, ಕುಡಿಯುವ ನೀರಿಗೆ ಸಮಸ್ಯೆ ಆರೋಪ

ಸದಾಶಿವ ಎಂ.ಎಸ್‌.
Published 26 ಫೆಬ್ರುವರಿ 2021, 19:30 IST
Last Updated 26 ಫೆಬ್ರುವರಿ 2021, 19:30 IST
ಕಾರವಾರದ ಶಿರವಾಡ ಕೈಗಾರಿಕಾ ಪ್ರದೇಶದ ಒಂದು ನೋಟ
ಕಾರವಾರದ ಶಿರವಾಡ ಕೈಗಾರಿಕಾ ಪ್ರದೇಶದ ಒಂದು ನೋಟ   

ಕಾರವಾರ: ನಗರದ ಹೊರವಲಯದ ಶಿರವಾಡ ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕೆಗಳು ಕೋವಿಡ್ ಹೊಡೆತದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿವೆ. ಆದರೆ, ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಸಹಕಾರ ಸಿಗುತ್ತಿಲ್ಲ ಎಂದು ಉದ್ಯಮಿಗಳು ಆರೋಪಿಸಿದ್ದಾರೆ.

ಕೈಗಾರಿಕಾ ಪ್ರದೇಶದಲ್ಲಿ ಬೀದಿ ದೀಪಗಳ ನಿರ್ವಹಣೆ ಮಾಡುತ್ತಿಲ್ಲ. ಇಲ್ಲಿರುವ ಮನೆಗಳಿಗೆ ಮತ್ತು ಉದ್ಯಮಗಳಿಗೆ ಗ್ರಾಮ ಪಂಚಾಯಿತಿಯಿಂದ ನೀರಿನ ಸೌಲಭ್ಯವನ್ನು ಒದಗಿಸಿಲ್ಲ. ಇದರಿಂದ ಈಗಾಗಲೇ ಸಂಕಷ್ಟದಲ್ಲಿರುವ ಉದ್ಯಮಗಳ ಮೇಲೆ ಮತ್ತಷ್ಟು ಹೊರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

‘ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮವು (ಕೆ.ಎಸ್‍.ಎಸ್‍.ಐ.ಡಿ.ಸಿ) ಈ ಪ್ರದೇಶದಲ್ಲಿ 35 ಪ್ಲಾಟ್‌ಗಳನ್ನು ಅಭಿವೃದ್ಧಿ ಪಡಿಸಿತು. ಅವುಗಳ ನಿರ್ವಹಣೆಯನ್ನು 2006ರಲ್ಲಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಯಿತು. ಬಳಿಕ 2012ರಲ್ಲಿ ಎಲ್ಲ ಉದ್ಯಮಗಳಿಗೆ ಇ–ಸ್ವತ್ತು ನೀಡಲಾಯಿತು. ಆ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗೆ ನೀಡಬೇಕಿದ್ದ ಎಲ್ಲ ಹಳೆಯ ತೆರಿಗೆಗಳನ್ನೂ ಪಾವತಿಸಿಕೊಂಡಿದ್ದಾರೆ. ಆದರೆ, ಬಳಿಕ ನಿರ್ವಹಣೆ ಮಾತ್ರ ಮಾಡುತ್ತಿಲ್ಲ’ ಎಂದು ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಗಂಗಾಧರ ನಾಯ್ಕ ಹೇಳುತ್ತಾರೆ.

ADVERTISEMENT

‘ಇಲ್ಲಿ ಮಾರ್ಚ್‌ನಿಂದಲೇ ಕುಡಿಯುವ ನೀರಿನ ಸಮಸ್ಯೆ ಶುರುವಾಗುತ್ತದೆ. ನೀರು ಪೂರೈಕೆಗೆಂದು ಇಲ್ಲಿನ ರಸ್ತೆಗಳ ಅಡಿಯಲ್ಲಿಪೈಪ್‌ಲೈನ್ ಅಳವಡಿಸಲಾಗಿದೆ. ಆದರೆ, ಗ್ರಾಮ ಪಂಚಾಯಿತಿಯಿಂದ ನೀರು ಕೊಡುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೂ ತರಲಾಯಿತು. ಬಳಿಕ ಕೆ.ಎಸ್‍.ಎಸ್‍.ಐ.ಡಿ.ಸಿ.ಯವರೇ ಕೊಳವೆ ಬಾವಿಯನ್ನು ಕೊರೆಯಿಸಿಕೊಟ್ಟರು. ಅದರಿಂದ ಈಗ ಹರಿಸಲಾಗುತ್ತಿದೆ’ ಎಂದು ಅವರು ವಿವರಿಸುತ್ತಾರೆ.

‘ಇದೇರೀತಿ, ಬೀದಿದೀಪಗಳ ನಿರ್ವಹಣೆಗೂ ಗ್ರಾಮ ಪಂಚಾಯಿತಿ ಮುಂದಾಗುತ್ತಿಲ್ಲ. ಹಲವು ದೀಪಗಳು ಕೆಟ್ಟು ಹೋಗಿವೆ. ಇಲ್ಲಿ ಕೈಗಾರಿಕಾ ಪ್ರದೇಶ ಆಗಿರುವ ಕಾರಣ ಭದ್ರತೆ ಮತ್ತು ಬೆಳಕಿನ ವ್ಯವಸ್ಥೆ ಅತ್ಯಗತ್ಯ. ಹಾಗಾಗಿ ನಾವೇ ಹೊಸ ಎಲ್.ಇ.ಡಿ ದೀಪಗಳನ್ನು ಅಳವಡಿಸಿಕೊಂಡಿದ್ದೇವೆ’ ಎಂದು ಹೇಳಿದರು.

ನಿಧಾನವಾಗಿ ಚೇತರಿಕೆ:ಕೋವಿಡ್ ಸಂದರ್ಭದಲ್ಲಿ ಕೈಗಾರಿಕಾ ಪ್ರದೇಶದ ಹಲವು ಉದ್ದಿಮೆಗಳು ಬಾಗಿಲು ಮುಚ್ಚಿದ್ದವು. ಜನಜೀವನ ಸಹಜವಾಗುತ್ತ ಸಾಗಿದಂತೆ ನಿಧಾನವಾಗಿ ಒಂದೊಂದೇ ಸಣ್ಣ ಕೈಗಾರಿಕೆಗಳು ಮತ್ತೆ ಕಾರ್ಯಾರಂಭ ಮಾಡುತ್ತಿವೆ. ಸದ್ಯ ಸುಮಾರು 25ರಷ್ಟು ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ.

ಸಮೀಪದಲ್ಲಿರುವ ನಗರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕದಿಂದ ಹರಿಯುವ ಕೊಳಚೆ ನೀರು, ‌ಮಳೆಗಾಲದಲ್ಲಿ ಇಲ್ಲಿನ ಚರಂಡಿಗಳಲ್ಲಿ ಹರಿಯುತ್ತದೆ. ಅದು ಸಮೀಪದ ಕುಡಿಯುವ ನೀರಿನ ಬಾವಿಗಳಲ್ಲಿ ತುಂಬಿಕೊಳ್ಳುತ್ತದೆ. ಇದನ್ನು ತಡೆಯಲು ಕ್ರಮ ಕೈಗೊಳ್ಳುವಂತೆಯೂ ಸ್ಥಳೀಯರು ಒತ್ತಾಯಿಸಿದ್ದಾರೆ.

***

ನಾವು ಗ್ರಾ.ಪಂಚಾಯಿತಿಗೆ ನಿಯಮದಂತೆ ತೆರಿಗೆ ಪಾವತಿಸಲು ಸಿದ್ಧರಿದ್ದೇವೆ. ಅದಕ್ಕೆ ಬದಲಾಗಿ ಗ್ರಾ. ಪಂ ಕನಿಷ್ಠ ಮೂಲ ಸೌಕರ್ಯವನ್ನು ಕೊಡಲಿ.

– ಗಂಗಾಧರ ನಾಯ್ಕ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ

***

ಕೈಗಾರಿಕಾ ವಲಯಕ್ಕೆ ನಾವು ನೀರು ಪೂರೈಕೆ ಮಾಡುತ್ತಿದ್ದೇವೆ. ಅಲ್ಲಿ ನಾಲ್ಕು ಕೊಳವೆ ಬಾವಿಗಳಿವೆ. ಜೊತೆಗೇ ಕೆ.ಎಸ್‍.ಎಸ್‍.ಐ.ಡಿ.ಸಿ ಹೊಸದೊಂದು ಕೊರೆಯಿಸಿದೆ.

– ಸಂದೀಪ ಕೊಠಾರಕರ್, ಶಿರವಾಡ ಗ್ರಾ.ಪಂ ಪಿ.ಡಿ.ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.