ಕಾರವಾರ: ಪ್ರಾಚೀನ ಕಾಲದ ಮಾದರಿಯಲ್ಲೇ ಸಿದ್ಧಪಡಿಸಲಾದ ಭಾರತೀಯ ನೌಕಾಸೇನೆಯ ಹಡಗು ‘ಐಎನ್ಎಸ್‌ವಿ ಕೌಂಡಿನ್ಯ’ ಬುಧವಾರ ಇಲ್ಲಿನ ಕದಂಬ ನೌಕಾನೆಲೆಯಲ್ಲಿ ಲೋಕಾರ್ಪಣೆಗೊಂಡಿತು.
ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರು ನೌಕೆ ಲೋಕಾರ್ಪಣೆಗೊಳಿಸಿದರು. ಮರದ ಹಲಗೆಗಳನ್ನು ತೆಂಗಿನ ನಾರುಗಳ ದಾರ ಬಳಸಿ ಹೊಲಿದು ರಚಿಸಿದ ನೌಕೆಯ ಮುಂಭಾಗದಲ್ಲಿ ಸಿಂಹದ ಪ್ರತಿಕೃತಿ ರಚಿಸಿದ್ದು ಗಮನಸೆಳೆಯುತ್ತಿದೆ. ಹರಪ್ಪ ಶೈಲಿಯ ಲಂಗರು ಹೊಂದಿದೆ.
‘ಹಿಂದೂ ಮಹಾಸಾಗರದಾದ್ಯಂತ ಪ್ರಯಾಣ ಬೆಳೆಸಿದ ಪೌರಾಣಿಕ ಭಾರತೀಯ ನಾವಿಕ ಮತ್ತು ಸನ್ಯಾಸಿ ಕೌಂಡಿನ್ಯ ಅವರು ನೌಕಾಯಾನದಲ್ಲಿ ಹೆಸರು ಮಾಡಿದ್ದರು. ಹೀಗಾಗಿ ನೌಕೆಗೆ ಅವರ ಹೆಸರು ಇಡಲಾಗಿದೆ. ನೌಕೆಯ ಹಾಯಿಗೆ ಕದಂಬರ ರಾಜಲಾಂಛನವಾಗಿದ್ದ ಗಂಡಭೇರುಂಡ ಚಿತ್ರ ಅಳವಡಿಸಲಾಗಿದೆ. ಅಜಂತಾ ಗುಹೆಯಲ್ಲಿನ ಪ್ರಾಚೀನ ನೌಕಾಯಾನದ ಚಿತ್ರಗಳು ನೌಕೆ ತಯಾರಿಕೆಗೆ ಸ್ಫೂರ್ತಿಯಾಗಿವೆ’ ಎಂದು ಈ ಹಡಗಿನ ತಯಾರಿಕೆಯ ಪರಿಕಲ್ಪನೆಯ ರೂವಾರಿ, ಪ್ರಧಾನ ಮಂತ್ರಿ ಅವರ ಆರ್ಥಿಕ ಸಲಹಾ ಮಂಡಳಿ ಸದಸ್ಯ ಸಂಜೀವ್ ಸನ್ಯಾಲ್ ತಿಳಿಸಿದರು.
‘ಗೋವಾದ ಹೋದಿ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ನೌಕೆಯನ್ನು ಎರಡು ವರ್ಷಗಳ ಅವಧಿಯಲ್ಲಿ ನಿರ್ಮಿಸಿದೆ. ಸಾಂಪ್ರದಾಯಿಕ ತೆಂಗಿನ ನಾರಿನ ಹೊಲಿಗೆ ತಂತ್ರಗಳನ್ನು ಬಳಸಿ ಬಾಬು ಶಂಕರನ್ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಕರಕುಶಲಕರ್ಮಿಗಳು ಸೇರಿ ಹಡಗನ್ನು ನಿರ್ಮಿಸಿದ್ದಾರೆ’ ಎಂದು ನೌಕಾದಳದ ಅಧಿಕಾರಿಗಳು ವಿವರಿಸಿದರು.
‘ಹಡಗು ಸದ್ಯ ಕದಂಬ ನೌಕಾನೆಲೆಯಲ್ಲಿ ಇರಲಿದ್ದು, ಕೆಲ ದಿನಗಳ ಬಳಿಕ ಒಮನ್ ದೇಶಕ್ಕೆ ಪ್ರಯಾಣ ಬೆಳೆಸಲಿದೆ’ ಎಂದೂ ಮಾಹಿತಿ ನೀಡಿದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವೈಸ್ ಅಡ್ಮಿರಲ್ ರಾಜಾರಾಮ್ ಸ್ವಾಮಿನಾಥನ್, ನೌಕಾದಳದ ನಿವೃತ್ತ ಮುಖ್ಯಸ್ಥ ಕರಣವೀರ ಸಿಂಗ್, ಕರ್ನಾಟಕ ನೌಕಾ ಪ್ರದೇಶದ ಧ್ವಜಾಧಿಕಾರಿ ರಿಯರ್ ಅಡ್ಮಿರಲ್ ಕೆ.ಎಂ.ರಾಮಕೃಷ್ಣನ್ ಇದ್ದರು.
ಪ್ರಾಚೀನ ಮಾದರಿಯ ‘ಐಎನ್ಎಸ್ವಿ ಕೌಂಡಿನ್ಯ’ ನೌಕೆ ಲೋಕಾರ್ಪಣೆಗೊಳಿಸಿದ ಬಳಿಕ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ನೌಕಾದಳದ ಅಧಿಕಾರಿಗಳೊಂದಿಗೆ ನೌಕೆಯ ಮೇಲೆ ನಿಂತು ಚಿತ್ರ ತೆಗೆಸಿಕೊಂಡರು. ಪ್ರಧಾನ ಮಂತ್ರಿ ಅವರ ಆರ್ಥಿಕ ಸಲಹಾ ಮಂಡಳಿ ಸದಸ್ಯ ಸಂಜೀವ ಸನ್ಯಾಲ್ ನೌಕಾದಳದ ಹಿರಿಯ ಅಧಿಕಾರಿಗಳು ಜತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.