ADVERTISEMENT

ಹೂಡಿಕೆದಾರರಲ್ಲಿ ಆತಂಕ ಹುಟ್ಟಿಸಿದ ಆ‍್ಯಪ್ ವಂಚನೆ?

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 2:30 IST
Last Updated 17 ಸೆಪ್ಟೆಂಬರ್ 2021, 2:30 IST
ಟವರ್ ಎಕ್ಸ್‌ಚೇಂಜ್ ಆ‍್ಯಪ್
ಟವರ್ ಎಕ್ಸ್‌ಚೇಂಜ್ ಆ‍್ಯಪ್   

ಶಿರಸಿ: ಕೆಲವೇ ದಿನಗಳ ಹಿಂದೆ ತಾಲ್ಲೂಕಿನ ಜನರಿಗೆ ಪರಿಚಿತವಾಗಿ, ಕೋಟ್ಯಂತರ ರೂಪಾಯಿ ಮೊತ್ತದ ಹೂಡಿಕೆ ಮಾಡಿಸಿಕೊಂಡಿದ್ದ ‘ಟವರ್ ಎಕ್ಸ್‌ಚೇಂಜ್ ಮೊಬೈಲ್ ಆ‍್ಯಪ್’ ಕಳೆದ ಮೂರ್ನಾಲ್ಕು ದಿನಗಳಿಂದ ಕೆಲಸ ನಿಲ್ಲಿಸಿದೆ. ಇದು ಹೂಡಿಕೆದಾರರಲ್ಲಿ ಆತಂಕ ಹುಟ್ಟಿಸಿದೆ.

ಮೊಬೈಲ್ ಆ‍್ಯಪ್ ಮುಖಾಂತರ ಜನರಿಂದ ಹಣ ಹೂಡಿಸಿ ಅದರ ಮೂಲಕ ಷೇರುಗಳ ಖರೀದಿ, ಮಾರಾಟ ಪ್ರಕ್ರಿಯೆ ನಡೆಸಿ ಲಾಭಾಂಶ ತೋರಿಸುವ ವಹಿವಾಟನ್ನು ಅಪರಿಚಿತರು ಆರಂಭಿಸಿದ್ದರು. ವಾಟ್ಸ್‌ಆ್ಯಪ್‌ ಗುಂಪುಗಳ ಮೂಲಕ ಯುವಕರು, ಉದ್ಯಮಿಗಳನ್ನು ಇದಕ್ಕಾಗಿ ಸೆಳೆಯಲಾಗುತ್ತಿತ್ತು.

‘ಆ‍್ಯಪ್ ಮೂಲಕ ಕನಿಷ್ಠ ₹5 ಸಾವಿರ ಹೂಡಿಕೆ ಮಾಡುವ ಆಫರ್ ನೀಡಲಾಗುತ್ತಿತ್ತು. ಹೂಡಿಕೆಯಾದ ಠೇವಣಿಯ ಶೇ 12ರಷ್ಟು ಮೊತ್ತದಲ್ಲಿ ದಿನಕ್ಕೆ ಮೂರು ಬಾರಿ ಷೇರು ಖರೀದಿಗೆ ಅವಕಾಶ ಕೊಡುತ್ತಿದ್ದರು. ಅವರು ನೀಡಿದ ಸಮಯಕ್ಕೆ ಷೇರು ಖರೀದಿಸಿ ಅದನ್ನು ಮಾರಿದರೆ ಲಾಭವಾಗುತ್ತಿತ್ತು ಎಂದು ನಂಬಿಸಲಾಗಿತ್ತು. ಈಗ ಏಕಾಏಕಿ ಆ‍್ಯಪ್ ಕೆಲಸ ನಿಲ್ಲಿಸಿದೆ. ಅದನ್ನು ನಿರ್ವಹಿಸುತ್ತಿದ್ದವರ ಮಾಹಿತಿಯೇ ಕಾಣಿಸುತ್ತಿಲ್ಲ’ ಎಂದು ಹಣ ಹೂಡಿರುವ ವ್ಯಕ್ತಿಯೊಬ್ಬರು ತಿಳಿಸಿದರು.

ADVERTISEMENT

‘ತಾಂತ್ರಿಕ ದೋಷದಿಂದ ಸಮಸ್ಯೆ ಉದ್ಭವಿಸಿದೆಯೇ ಅಥವಾ ವಂಚಿಸಲಾಗಿದೆಯೆ ಎಂಬುದು ತಿಳಿಯುತ್ತಿಲ್ಲ’ ಎಂದು ಅಲವತ್ತುಕೊಂಡರು.

‘ಆ‍್ಯಪ್ ವಂಚನೆ ಬಗ್ಗೆ ಹಲವರು ಮೌಖಿಕ ದೂರು ನೀಡಿದ್ದಾರೆ. ಸೂಕ್ತ ದಾಖಲಾತಿ ಸಂಗ್ರಹಿಸಿ ಶುಕ್ರವಾರ ದೂರು ಪಡೆಯುತ್ತೇವೆ. ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು’ ಎಂದು ಸಿಪಿಐ ರಾಮಚಂದ್ರ ನಾಯಕ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.