ಕಾರವಾರ: ತಾಲ್ಲೂಕಿನ ಕದ್ರಾ ಮಾರ್ಗದಲ್ಲಿ ಕಳೆದ ಎರಡು ವಾರದಲ್ಲಿ ಐದಕ್ಕೂ ಹೆಚ್ಚು ಬಾರಿ ಮಲ್ಲಾಪುರ ಮಾರ್ಗದ ಬಸ್ ಕೆಟ್ಟು ನಿಂತಿತ್ತು. ಸಂಚರಿಸುತ್ತಿದ್ದ ಬಸ್‌ನಲ್ಲಿ ಕಾಣಿಸಿಕೊಂಡ ದಟ್ಟ ಹೊಗೆ ಪ್ರಯಾಣಿಕರನ್ನು ಆತಂಕಕ್ಕೆ ದೂಡಿತ್ತು. ಗೋಕರ್ಣದ ಸಮೀಪ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಬಸ್‌ವೊಂದು ಮಾರ್ಗ ಮಧ್ಯೆ ಕೆಟ್ಟು ನಿಂತಿದ್ದರಿಂದ ಶಾಲೆ ಕಾಲೇಜಿಗೆ ತೆರಳಲಾಗದೆ ವಿದ್ಯಾರ್ಥಿಗಳು ಪರದಾಡಿದರು.
ಇಂತಹ ಬಸ್ ಸಮಸ್ಯೆಯ ಸುದ್ದಿ ನಿತ್ಯವೂ ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ವರದಿಯಾಗುತ್ತಲೇ ಇದೆ. ಮಳೆಗಾಲ ಆರಂಭವಾದ ಬಳಿಕವಂತೂ ರಸ್ತೆ ಮಧ್ಯದಲ್ಲಿಯೇ ಬಸ್‌ಗಳು ಕೆಟ್ಟು ನಿಲ್ಲುವ ಪ್ರಸಂಗ ಹೆಚ್ಚಿದೆ. ಜಿಲ್ಲೆಯ ಶಿರಸಿ, ಕಾರವಾರ ಸಾರಿಗೆ ಘಟಕ ವ್ಯಾಪ್ತಿಯಲ್ಲಿ ಪದೇ ಪದೇ ಬಸ್‌ಗಳು ಕೈಕೊಡುವ ದೂರುಗಳು ವ್ಯಾಪಕವಾಗಿವೆ.
‘ಕಾರವಾರದಿಂದ ಮಲ್ಲಾಪುರ ಭಾಗಕ್ಕೆ ಸಂಚರಿಸುವ ಬಸ್ ನಿಗದಿತ ಸ್ಥಾನ ತಲುಪುವುದೇ ಅನುಮಾನವಾಗುತ್ತಿದೆ. ಕಳೆದ 15 ದಿನಗಳಲ್ಲಿ 6ಕ್ಕಿಂತ ಹೆಚ್ಚು ಬಾರಿ ಬಸ್ ಮಾರ್ಗಮಧ್ಯದಲ್ಲಿಯೇ ಕೆಟ್ಟಿದೆ. ಇದರಿಂದ ವಿದ್ಯಾರ್ಥಿಗಳು, ಕಾರ್ಮಿಕರು ಪರದಾಡಿದ್ದೇವೆ. ಕೆಲ ತಿಂಗಳುಗಳಿಂದ ಈ ಸಮಸ್ಯೆ ಮುಂದುವರಿದಿಕೊಂಡು ಬಂದಿದೆ’ ಎಂದು ಹಣಕೋಣದ ಕಿರಣ ಆಚಾರಿ ದೂರುತ್ತಾರೆ.
‘ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಶಕ್ತಿ ಯೋಜನೆ ಯಶಸ್ಸು ಸಾಧಿಸಿದೆ ಎಂದು ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿರುವ ಸರ್ಕಾರಕ್ಕೆ ಬಸ್‌ಗಳ ದುಸ್ಥಿತಿ ಅರಿವಿಗೆ ಬರುತ್ತಿಲ್ಲವೇ?’ ಎಂಬುದು ಗ್ರಾಮೀಣ ಭಾಗದ ಪ್ರಯಾಣಿಕರ ಪ್ರಶ್ನೆ.
‘ಗ್ರಾಮೀಣ ಮಾರ್ಗಗಳಿಗೆ ಸುಸ್ಥಿತಿಯಲ್ಲಿರುವ ಬಸ್‌ಗಳು ಸಂಚರಿಸುತ್ತಿಲ್ಲ. ಹಳತಾದ ಬಸ್‌ಗಳನ್ನೇ ಓಡಿಸಲಾಗುತ್ತಿದೆ. ಮಳೆಗೆ ಕಿಟಕಿ ಸೋರುವದರಿಂದ ಕುಳಿತುಕೊಳ್ಳಲು ಆಸನಗಳು ಸಿಗದಂತಾಗಿದೆ’ ಎಂಬುದು ದೇವಳಮಕ್ಕಿ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ ಗೌಡ ಆರೋಪ.
‘ಬಸ್‌ಗಳ ಓಡಾಟಕ್ಕೆ ಮಿತಿ ಇದ್ದರೂ 10–15 ಲಕ್ಷ ಕಿ.ಮೀ ಸಂಚರಿಸಿದ ಬಸ್‌ಗಳನ್ನು ಓಡಿಸಲಾಗುತ್ತಿದೆ. ಹೀಗೆ ಸಂಚರಿಸುವ ಬಸ್‌ಗಳು ಹಳ್ಳಿ ರಸ್ತೆಗೆ ಸಾಗಿದಾಗ ಕೆಟ್ಟು ನಿಲ್ಲುವ ಸಾಧ್ಯತೆ ಹೆಚ್ಚು. ಹಳತಾದ ಬಸ್‌ಗಳನ್ನು ರಸ್ತೆ ಸರಿ ಇಲ್ಲದ ಹಳ್ಳಿಗಳಿಗೆ ಓಡಿಸದಂತೆ ವಿನಂತಿಸಿದರೂ ಸಾರಿಗೆ ಘಟಕದಲ್ಲಿನ ಅಧಿಕಾರಿಗಳು ಸ್ಪಂದಿಸುವುದಿಲ್ಲ’ ಎಂದು ಚಾಲಕರೊಬ್ಬರು ಬೇಸರಿಸಿದರು.
ಸಕಾಲಕ್ಕೆ ಬಸ್ ಸಂಚರಿಸದ ಪದೇ ಪದೇ ಕೆಟ್ಟು ನಿಲ್ಲುವ ದೂರು ಬಗೆಹರಿಸಲು ವಿಶೇಷ ಅಭಿಯಾನ ಆರಂಭಿಸಲಾಗಿದೆ. ಹಿರಿಯ ತಾಂತ್ರಿಕ ಅಧಿಕಾರಿಗಳು ಸಾರಿಗೆ ಘಟಕಗಳಲ್ಲಿದ್ದು ಬಸ್‌ಗಳ ಸಮಸ್ಯೆ ಪರಿಹರಿಸಲಿದ್ದಾರೆಬಸವರಾಜ ಅಮ್ಮನವರ್ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.