ಯಲ್ಲಾಪುರ: ‘ಅರಣ್ಯ ರಕ್ಷಿಸಲು ಇಲಾಖೆ ಜೊತೆಗೆ ನಾವಿದ್ದೇವೆ. ಆದರೆ ಬಡವರಿಗೆ ತೊಂದರೆ ಆಗದಂತೆ ಕೆಲಸ ಮಾಡಿ. ಕೇವಲ ಪುಸ್ತಕ ನೋಡಿಕೊಂಡು ಆಡಳಿತ ನಡೆಸಲು ಸಾಧ್ಯವಿಲ್ಲ. ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉದ್ಯೋಗ ಖಾತ್ರಿ ಯೋಜನೆಯ ನಿಗದಿತ ಗುರಿ ಸಾಧಿಸುವಲ್ಲಿ ಕಳಪೆ ಪ್ರದರ್ಶನ ನೀಡಿದ ಅರಣ್ಯ ಇಲಾಖೆಯ ಕಾರ್ಯವೈಖರಿ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.
‘ಕುಡಿಯುವ ನೀರಿಗೆ ವಿಶೇಷ ಆದ್ಯತೆ ಮೇಲೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಕಾಮಗಾರಿ ಮುಗಿದಿದ್ದರೂ ವಿದ್ಯುತ್ ಸಂಪರ್ಕ ಆಗದ ನೀರಾವರಿ ಪಂಪ್‌ಸೆಟ್‌ಗಳಿಗೆ ತಕ್ಷಣ ಸಂಪರ್ಕ ನೀಡಬೇಕು’ ಎಂದು ವಿದ್ಯುತ್ ಇಲಾಖೆಯ ಸಹಾಯಕ ಎಂಜಿನಿಯರ್ ಹೇಮಂತ ಅವರಿಗೆ ಸೂಚಿಸಿದರು.
‘ಅನೇಕ ಕಡೆಯಲ್ಲಿ ನೀರಿನ ಲಭ್ಯತೆ ಪರಿಶೀಲಿಸದೆ ಜೆಜೆಎಂ ಕಾಮಗಾರಿ ಮಾಡಲಾಗಿದೆ. ಯೋಜನೆ ರೂಪಿಸುವಾಗ ಸ್ಥಳೀಯರ ಸಲಹೆ ಪಡೆಯಬೇಕು’ ಎಂದರು.
ಮಂಚಿಕೇರಿಯ ಸೆಕ್ಷನ್ ಆಫೀಸರ್ ಸಾರ್ವಜನಿಕರ ಫೋನ್ ಕರೆ ಸ್ವೀಕರಿಸುತ್ತಿಲ್ಲ ಎಂಬ ಗ್ರಾಮ ಪಂಚಾಯಿತಿ ಸದಸ್ಯ ಗ.ರಾ.ಭಟ್ಟ ಅವರ ಆರೋಪಕ್ಕೆ, ‘ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಬೇಕಾದದ್ದು ಅವರ ಕರ್ತವ್ಯ. ಫೋನ್ ಕರೆ ಸ್ವೀಕರಿಸಬೇಕು. ಆಗದಿದ್ದರೆ ಕುರ್ಚಿ ಬಿಡಬೇಕು’ ಎಂದರು.
ಸಭೆಯಲ್ಲಿ ತಹಶೀಲ್ದಾರ್ ಅನುಪಸ್ಥಿತಿಯ ಕುರಿತು ಬೇಸರ ವ್ಯಕ್ತಪಡಿಸಿದ ಶಾಸಕರು, ‘ಆರು ತಿಂಗಳಿಗೆ ಒಮ್ಮೆ ಕೆಡಿಪಿ ಸಭೆ ಕರೆದರೂ ತಹಶೀಲ್ದಾರಿಗೆ ಬರಲು ಆಗುವುದಿಲ್ಲವೇ’ ಎಂದು ಹಾಜರಿದ್ದ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು.
ಮಂಗ ಮುಂತಾದ ಪ್ರಾಣಿಗಳಿಂದ ತೆಂಗಿನ ಬೆಳೆ ಹಾಳಾಗುತ್ತಿದೆ. ತಾಲ್ಲೂಕಿನಲ್ಲಿ ನೀರಾ ಇಳಿಸಲು ಅನುಮತಿ ನೀಡಬೇಕು ಎಂದು ಟಿ.ಸಿ.ಗಾಂವ್ಕರ ವಿನಂತಿಸಿದಾಗ, ನೀರಾ ಅನುಮತಿಯನ್ನು ತಾಲ್ಲೂಕಿಗೂ ವಿಸ್ತರಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ನರೇಂದ್ರ ಪವಾರ ಮಾತನಾಡಿ, ‘ಚಿಕನ್ ಗುನ್ಯಾ ರೋಗ ಬರುವ ಸಾಧ್ಯತೆ ಇದ್ದು ಸಾರ್ವಜನಿಕರು ಜ್ವರ ಬಂದರೆ ತಾಲ್ಲೂಕು ಆಸ್ಪತ್ರೆ ಸಂಪರ್ಕಿಸಬೇಕು. ವಾತಾವರಣವನ್ನು ಸ್ವಶ್ಛವಾಗಿಡಬೇಕು’ ಎಂದರು.
ಸಹಾಯಕ ಕೃಷಿ ನಿರ್ದೇಶಕ ನಾಗರಾಜ ನಾಯ್ಕ ಮಾತನಾಡಿ, ‘ತಾಲ್ಲೂಕಿನಲ್ಲಿ ಭತ್ತ ಬೆಳೆಯುವ ಕ್ಷೇತ್ರ ಕಡಿಮೆಯಾಗುತ್ತಿದ್ದು ಕಬ್ಬಿನ ಕ್ಷೇತ್ರ ವಿಸ್ತರಣೆಯಾಗುತ್ತಿದೆ’ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನರ್ಮದಾ ನಾಯ್ಕ, ಗ್ಯಾರಂಟಿ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ, ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ನಟರಾಜ್, ಇಒ ರಾಜೇಶ ದನವಾಡಕರ, ಬಿಇಒ ಎನ್ ಆರ್ ಹೆಗಡೆ, ಸಿಡಿಪಿಒ ಶ್ರೀದೇವಿ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.