
ಕಾರವಾರ: 16 ವರ್ಷಗಳ ಬಳಿಕ ನಡೆಯಲಿರುವ ಜನಗಣತಿಗೆ ಸಿದ್ಧತೆ ಆರಂಭಿಸಿರುವ ಕೇಂದ್ರ ಸರ್ಕಾರವು ದೇಶದ ಆಯ್ದ ತಾಲ್ಲೂಕುಗಳಲ್ಲಿ ಪೂರ್ವಭಾವಿ ಗಣತಿ ಕೈಗೊಳ್ಳುತ್ತಿದೆ. ಈ ಪ್ರಕ್ರಿಯೆಗೆ ಜಿಲ್ಲೆಯ ಜೊಯಿಡಾ ತಾಲ್ಲೂಕು ಆಯ್ಕೆಯಾಗಿದೆ.
2026ರ ಅ.1 ರಿಂದ ದೇಶದಲ್ಲಿ ಮೊದಲ ಹಂತದ ಜನಗಣತಿ ಆರಂಭಗೊಳ್ಳಲಿದ್ದು, ರಾಜ್ಯದಲ್ಲಿ 2027ರಲ್ಲಿ ಎರಡನೇ ಹಂತದಲ್ಲಿ ಜನಗಣತಿ ನಡೆಯಲಿದೆ. ಅದಕ್ಕೂ ಮುನ್ನ ಜೊಯಿಡಾದಲ್ಲಿ ಪೂರ್ವಭಾವಿ ಜಣಗಣತಿ ಮೂಲಕ ಮಾಹಿತಿ ಕಲೆಹಾಕಲಾಗುತ್ತದೆ.
ನ.10 ರಿಂದ 30ರ ವರೆಗೆ ಜೊಯಿಡಾ ತಾಲ್ಲೂಕಿನ 46 ಗ್ರಾಮಗಳಲ್ಲಿ ಜನಗಣತಿ ಕಾರ್ಯ ನಡೆಯಲಿದ್ದು, ಇದಕ್ಕಾಗಿ 68 ಬ್ಲಾಕ್‌ಗಳನ್ನು ರಚಿಸಿಕೊಳ್ಳಲಾಗಿದೆ. ಪೂರ್ವಭಾವಿ ಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿರುವ 71 ಗಣತಿದಾರರಿಗೆ, 13 ಮೇಲ್ವಿಚಾರಕರಿಗೆ ಜೊಯಿಡಾದ ಆಡಳಿತಸೌಧದಲ್ಲಿ ಮೂರು ದಿನ ತರಬೇತಿ ನೀಡಲಾಗಿದೆ.
2011ರ ಬಳಿಕ ದೇಶವ್ಯಾಪಿ ಜನಗಣತಿ ನಡೆಯಲಿದ್ದು, ಇದೇ ಮೊದಲ ಬಾರಿಗೆ ಡಿಜಿಟಲ್ ಗಣತಿ ಕೈಗೊಳ್ಳಲಾಗುತ್ತಿದೆ. ಹೀಗಾಗಿ, ಪೂರ್ವಭಾವಿ ಸಿದ್ಧತೆ ಕೈಗೊಂಡಿರುವ ಸರ್ಕಾರವು ವಿಭಿನ್ನ ಭೌಗೋಳಿಕ ನೆಲೆಗಳ ಪ್ರದೇಶದಲ್ಲಿ ಪೂರ್ವಭಾವಿ ಗಣತಿ ಕೈಗೊಳ್ಳುತ್ತಿದೆ.
‘ಪೂರ್ವಭಾವಿ ಜನಗಣತಿಗೆ ರಾಜ್ಯದಲ್ಲಿ ಮೂರು ತಾಲ್ಲೂಕುಗಳನ್ನು ಮಾತ್ರವೇ ಆಯ್ದುಕೊಳ್ಳಲಾಗಿದ್ದು, ಅವುಗಳಲ್ಲಿ ಜೊಯಿಡಾ ಕೂಡ ಒಂದು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಬೆಂಗಳೂರು ನಗರದ ವಾರ್ಡ್‌ವೊಂದನ್ನು ಆಯ್ಕೆ ಮಾಡಲಾಗಿದೆ. ಅರಣ್ಯ ಪ್ರದೇಶವೇ ಹೆಚ್ಚಿರುವ ಜೊಯಿಡಾದಲ್ಲಿ ಡಿಜಿಟಲ್ ಸ್ವರೂಪದ ಜನಗಣತಿ ಕೈಗೊಳ್ಳಲು ಎದುರಾಗಬಹುದಾದ ತಾಂತ್ರಿಕ ಸಮಸ್ಯೆಗಳೇನು ಎಂಬುದರ ಅಧ್ಯಯನಕ್ಕೆ ಪೂರ್ವಭಾವಿ ಜನಗಣತಿ ನಡೆಯಲಿದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
‘ಜನಗಣತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಗಣತಿದಾರರು, ಮೇಲ್ವಿಚಾರಕರಿಗೆ ಕೇಂದ್ರ ಸರ್ಕಾರ ರಿಜಿಸ್ಟ್ರಾರ್ ಜನರಲ್ ಹಾಗೂ ಗಣತಿ ಆಯುಕ್ತಾಲಯದಿಂದ ತರಬೇತಿ ಪಡೆದ ಮಾಸ್ಟರ್ ಟ್ರೇನರ್‌ಗಳು ಮೂರು ದಿನ ತರಬೇತಿ ನೀಡಿದ್ದಾರೆ. ನ.10ರಿಂದ ಜನಗಣತಿ ಆರಂಭಗೊಳ್ಳಲಿದ್ದು ಗಣತಿದಾರರು ಆಯಾ ಬ್ಲಾಕ್‌ಗಳ ಮನೆ ಪಟ್ಟಿ ಸಿದ್ಧಪಡಿಸಿ, ಬಳಿಕ ಪ್ರತಿ ಮನೆಗಳ ಗಣತಿ ಕಾರ್ಯ ನಡೆಸಲಿದ್ದಾರೆ’ ಎಂದು ಜೊಯಿಡಾ ತಹಶೀಲ್ದಾರ್ ಮಂಜುನಾಥ ಮುನವಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಮಗ್ರ ಜನಗಣತಿ ಇದಾಗಿದ್ದು, ಜಾತಿ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಸೇರಿದಂತೆ ಗಣತಿ ಆಯುಕ್ತಾಲಯ ನಿರ್ದೇಶಿಸಿದ ಎಲ್ಲ ಮಾಹಿತಿಗಳನ್ನು ಸಂಗ್ರಹಿಸುವ ಕೆಲಸವನ್ನು ಗಣತಿದಾರರು ಮಾಡಲಿದ್ದಾರೆ’ ಎಂದರು.
ಜೊಯಿಡಾ ಆಯ್ಕೆ ಏಕೆ?
‘ಅತೀ ಹಿಂದುಳಿದ ತಾಲ್ಲೂಕುಗಳ ಪಟ್ಟಿಯಲ್ಲಿರುವ ಜೊಯಿಡಾ ಇಂಟರ್‌ನೆಟ್ ರಸ್ತೆ ಸಂಪರ್ಕಗಳ ಕೊರತೆಯಿಂದ ಇಂದಿಗೂ ಬಳಲುತ್ತಿದೆ. ಇಂತಹ ಸ್ಥಳದಲ್ಲಿ ಡಿಜಿಟಲ್ ಸ್ವರೂಪದಲ್ಲಿ ಜನಗಣತಿ ನಡೆಸುವ ಸವಾಲುಗಳೇನು ಎಂಬುದರ ಅಧ್ಯಯನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. 20 ದಿನಗಳ ಕಾಲ ನಡೆಯುವ ಪೂರ್ವಭಾವಿ ಜನಗಣತಿ ಪ್ರಕ್ರಿಯೆಯ ವರದಿಗಳನ್ನು ಆಧರಿಸಿ ಜನಗಣತಿಗೆ ಎದುರಾಗುವ ಲೋಪಗಳನ್ನು ಸರಿಪಡಿಸಿಕೊಳ್ಳಲು ಇದೇ ತಾಲ್ಲೂಕು ಆಯ್ಕೆ ಮಾಡಿಕೊಂಡಿರುವ ಸಾಧ್ಯತೆ ಇದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.