
ಶಿರಸಿ: ಕನ್ನಡಿಗರ ಮೊದಲ ರಾಜಧಾನಿ ಬನವಾಸಿಯ ಅಸ್ಮಿತೆಯಂತಿರುವ ಕದಂಬೋತ್ಸವ ಈ ಬಾರಿ ಅನಿಶ್ಚಿತತೆಯ ನೆರಳಿನಲ್ಲಿದೆ. ಫೆಬ್ರವರಿ ತಿಂಗಳು ಆರಂಭವಾದರೂ ಉತ್ಸವಕ್ಕೆ ದಿನಾಂಕ ನಿಗದಿಯಾಗದಿರುವುದು ಸಾರ್ವಜನಿಕರಲ್ಲಿ ಉತ್ಸವಾಚರಣೆ ಆಗುವುದೇ ಎಂಬ ಸಂಶಯ ಮೂಡಿದೆ.
ಕದಂಬರ ಐತಿಹಾಸಿಕ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು 1996ರಲ್ಲಿ ಕದಂಬೋತ್ಸವ ಆಚರಣೆಯನ್ನು ಆರಂಭಿಸಿತು. ಮುಖ್ಯಮಂತ್ರಿಯವರಿಂದ ಉದ್ಘಾಟನೆಗೊಳ್ಳುವ ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪಂಪ ಪ್ರಶಸ್ತಿಯನ್ನು ಪ್ರದಾನ ಮಾಡುವುದು ಒಂದು ವಿಶೇಷ ಸಂಪ್ರದಾಯವಾಗಿದೆ. ಎರಡು ದಿನಗಳ ಕಾಲ ನಡೆಯುವ ಈ ವೈಭವದ ಉತ್ಸವದಲ್ಲಿ ಖ್ಯಾತ ಕಲಾವಿದರು ಹಾಗೂ ಸ್ಥಳೀಯ ಪ್ರತಿಭೆಗಳು ತಮ್ಮ ಕಲೆ ಪ್ರದರ್ಶಿಸಲು ಅವಕಾಶ ಪಡೆಯುತ್ತಾರೆ.
‘ಆರಂಭಿಕ ವರ್ಷಗಳಲ್ಲಿ ನಿಗದಿತ ಸಮಯದೊಳಗೆ ಜರುಗುತ್ತಿದ್ದ ಕದಂಬೋತ್ಸವ ನಂತರದ ವರ್ಷಗಳಲ್ಲಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುವಂತಾಗಿದೆ. ರಾಜ್ಯ ಸರ್ಕಾರದ ಅಧಿಕೃತ ಉತ್ಸವಗಳಲ್ಲಿ ಒಂದಾಗಿದ್ದರೂ ಸ್ಥಳೀಯ ಜನಪ್ರತಿನಿಧಿಗಳ ಒತ್ತಡದ ನಡುವೆಯೂ ದಿನಾಂಕಗಳು ಏರುಪೇರಾಗುತ್ತಲೇ ಬಂದಿವೆ’ ಎಂಬುದು ಬನವಾಸಿಗರ ದೂರಾಗಿದೆ.
‘ಬನವಾಸಿ ಕೇವಲ ಐತಿಹಾಸಿಕ ತಾಣವಲ್ಲ, ಬದಲಾಗಿ ಶಿಲ್ಪಕಲೆಯ ಆಗರವಾದ ಮಧುಕೇಶ್ವರ ಮತ್ತು ಪಾರ್ವತಿ ಅಮ್ಮನವರ ದೇವಾಲಯಗಳಿಂದಾಗಿ ನಿತ್ಯ ಸಾವಿರಾರು ಪ್ರವಾಸಿಗರನ್ನು ಸೆಳೆಯುವ ಕೇಂದ್ರವಾಗಿದೆ. ಆದರೆ, ಅಭಿವೃದ್ಧಿಯ ದೃಷ್ಟಿಯಿಂದ ಬನವಾಸಿ ಇಂದಿಗೂ ಹಿಂದುಳಿದಿದೆ. 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದರೂ ಇದು ಇನ್ನೂ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಉಳಿದಿದ್ದು, ಪ್ರತಿ ಬೇಸಿಗೆಯಲ್ಲಿ ವರದಾ ನದಿ ಬತ್ತಿ ಹೋದಾಗ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ಇದೆ. ಕದಂಬೋತ್ಸವದ ನೆಪದಲ್ಲಾದರೂ ಊರಿನ ರಸ್ತೆಗಳು ಸುಧಾರಿಸಲಿ, ಸರ್ಕಾರದಿಂದ ಅನುದಾನ ಹರಿದುಬರಲಿ ಎಂಬುದು ಸ್ಥಳೀಯರ ಆಶಯವಾಗಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಉತ್ಸವ ದಿನಾಂಕ ಘೋಷಣೆ ಆಗದಿರುವುದು ಜನರಲ್ಲಿ ಉತ್ಸವಾಚರಣೆಯ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕಿದೆ.
‘ಉತ್ಸವದ ಸಿದ್ಧತೆಗೆ ಕನಿಷ್ಠ ಒಂದು ತಿಂಗಳ ಸಮಯ ಬೇಕಾಗುತ್ತದೆ. ಕಲಾವಿದರ ಆಯ್ಕೆ, ಕ್ರೀಡಾಕೂಟದ ಆಯೋಜನೆ, ಕದಂಬ ಜ್ಯೋತಿಯ ಸಂಚಾರ, ಗುಡ್ನಾಪುರದಲ್ಲಿ ನಡೆಯುವ ಸಾಂಸ್ಕೃತಿಕ ಪೂರ್ವಭಾವಿ ಕಾರ್ಯಕ್ರಮಗಳು ಇಡೀ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸುತ್ತಿದ್ದವು. ಆದರೆ ಈಗ ಕನ್ನಡದ ಮೊದಲ ರಾಜಧಾನಿಯ ಪರಂಪರೆಗೆ ಸರ್ಕಾರವು ತೋರುತ್ತಿರುವ ಈ ನಿರ್ಲಕ್ಷ್ಯ ಧೋರಣೆಯು ಸಾಂಸ್ಕೃತಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ಬನವಾಸಿ ನಿವಾಸಿ ಮಂಜುನಾಥ ನಾಯ್ಕ.
-ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಕದಂಬೋತ್ಸವದ ದಿನಾಂಕ ಘೋಷಿಸುವ ಮೂಲಕ ಬನವಾಸಿಯ ಸಾಂಸ್ಕೃತಿಕ ಬದುಕಿಗೆ ಮರುಜೀವ ನೀಡಬೇಕುಉದಯಕುಮಾರ ಕಾನಳ್ಳಿ, ಸಾಮಾಜಿಕ ಕಾರ್ಯಕರ್ತ
ಈಗಾಗಲೇ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಕದಂಬೋತ್ಸವ ಆಚರಣೆ ಕುರಿತಂತೆ ಮುಖ್ಯಮಂತ್ರಿಗಳ ಜತೆ ಮಾತನಾಡಿ ದಿನಾಂಕ ನಿಶ್ಚಯ ಮಾಡಲಾಗುವುದುಶಿವರಾಮ ಹೆಬ್ಬಾರ, ಶಾಸಕ