ADVERTISEMENT

ಮತ್ತೆ ಭರ್ತಿಯಾಗುವತ್ತ ಕದ್ರಾ ಜಲಾಶಯ

ಒಳಹರಿವು ಹೆಚ್ಚಾದರೆ ನದಿಗೆ ನೀರು: ಎಚ್ಚರಿಕೆ ವಹಿಸಲು ಕರ್ನಾಟಕ ವಿದ್ಯುಚ್ಛಕ್ತಿ ನಿಗಮ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 14:18 IST
Last Updated 25 ಅಕ್ಟೋಬರ್ 2019, 14:18 IST
ಕಾರವಾರದ ಬೈತಖೋಲ ಬಂದರಿನಲ್ಲಿ ದಕ್ಕೆಯ ಮಟ್ಟಕ್ಕೆ ನೀರು ಬಂದು ದೋಣಿಗಳು ಮೇಲೆ ಬಂದಿರುವುದು.
ಕಾರವಾರದ ಬೈತಖೋಲ ಬಂದರಿನಲ್ಲಿ ದಕ್ಕೆಯ ಮಟ್ಟಕ್ಕೆ ನೀರು ಬಂದು ದೋಣಿಗಳು ಮೇಲೆ ಬಂದಿರುವುದು.   

ಕಾರವಾರ: ಆಗಸ್ಟ್ ತಿಂಗಳಿನಲ್ಲಿ ಪ್ರವಾಹಕ್ಕೆ ತತ್ತರಿಸಿದ್ದ ಕಾಳಿ ನದಿಪಾತ್ರದ ಗ್ರಾಮಸ್ಥರಿಗೆ ಮತ್ತೆ ಆತಂಕ ಎದುರಾಗಿದೆ. ಕದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ಒಳಹರಿವು ಹೆಚ್ಚಿದೆ.

34.50 ಮೀಟರ್ ಗರಿಷ್ಠಮಟ್ಟದ ಈ ಜಲಾಶಯದಲ್ಲಿ ಶುಕ್ರವಾರ 32.20 ಮೀಟರ್ ನೀರು ಸಂಗ್ರಹವಾಗಿತ್ತು. 17,222 ಕ್ಯುಸೆಕ್ ಒಳಹರಿವು ದಾಖಲಾಗಿತ್ತು. ಇದೇ ಪ್ರಮಾಣದಲ್ಲಿ ಮಳೆಯಾಗುತ್ತಿದ್ದರೆ ಜಲಾಶಯವುಪುನಃತನ್ನ ಗರಿಷ್ಠ ಮಟ್ಟ ತಲುಪಲಿದೆ. ಆಗ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಸಮಯದಲ್ಲಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುವುದು ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಗಮ ಸೂಚನೆ ನೀಡಿದೆ.

ಜಲಾಶಯದ ಕೆಳಭಾಗದಲ್ಲಿ ವಾಸವಿರುವ ಸಾರ್ವಜನಿಕರು ತಮ್ಮ ಜಾನುವಾರು, ಸಾಮಗ್ರಿಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕು. ಅಲ್ಲದೇ ಈ ಭಾಗದಲ್ಲಿ ದೋಣಿ ಸಂಚಾರ, ಮೀನುಗಾರಿಕೆ ಮುಂತಾದ ಚಟುವಟಿಕೆ ಮಾಡಬಾರದು ಎಂದು ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಜಲಾಶಯದಿಂದ ಶುಕ್ರವಾರ ಒಟ್ಟು 31 ಸಾವಿರ ಕ್ಯುಸೆಕ್ ನೀರನ್ನುಹೊರಬಿಡಲಾಗಿದ್ದು, ಕಾಳಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಮೀನುಗಾರರಿಗೆ ತೊಂದರೆ: ನಗರದಲ್ಲಿ ಗುರುವಾರ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆ ಮತ್ತು ಗಾಳಿಯಿಂದ ಮೀನುಗಾರರು ಇನ್ನಿಲ್ಲದ ಸಂಕಷ್ಟ ಅನುಭವಿಸುತ್ತಿದ್ದಾರೆ. ದೋಣಿಗಳನ್ನು ಬೈತಖೋಲ ಬಂದರಿನಲ್ಲಿ ಲಂಗರು ಹಾಕಿದ್ದರೂ ಸಮುದ್ರದಲ್ಲಿ ನೀರಿನ ಮಟ್ಟ ಏರಿಕೆ ಕಂಡು ಕಂಗಾಲಾದರು.

ಸಾಮಾನ್ಯವಾಗಿ ಬಂದರಿನಲ್ಲಿ ಐದಾರು ಅಡಿಗಳಷ್ಟು ಕೆಳಗೆ ನೀರಿರುತ್ತದೆ. ಆದರೆ,ಶುಕ್ರವಾರ ನೀರುಏರಿಕೆ ಕಂಡು ದಕ್ಕೆಯ ಮಟ್ಟಕ್ಕೆ ತಲುಪಿತ್ತು. ಇದರಿಂದ ದೋಣಿಗಳೂ ಮೇಲೆ ಬಂದು ಹಾನಿಗೀಡಾಗುವ ಸಾಧ್ಯತೆಯಿತ್ತು. ಅದೃಷ್ಟವಶಾತ್ ಹಾಗಾಗದೇ ನೀರು ಇಳಿದಾಗ ಮೀನುಗಾರರು ನಿಟ್ಟುಸಿರುಬಿಟ್ಟರು.

ಬೈತಖೋಲ ಬಂದರಿನಿಂದ ಮೀನು ತುಂಬಿಕೊಂಡು ಬೇರೆ ಬೇರೆ ನಗರಗಳಿಗೆ ಸಾಗುವ ನೂರಾರು ಲಾರಿಗಳು ಸಾಲಾಗಿ ನಿಂತಿದ್ದುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.