ADVERTISEMENT

ದಶಕ ಕಳೆದರೂ ಹೆದ್ದಾರಿ ಕೆಲಸ ಮುಗಿದಿಲ್ಲವೇಕೆ?: ಸಂಸದರಿಂದ ಅಧಿಕಾರಿಗಳ ತರಾಟೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 5:27 IST
Last Updated 15 ಅಕ್ಟೋಬರ್ 2025, 5:27 IST
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಯಿತು
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಯಿತು   

ಕಾರವಾರ: ‘ಕಾಶ್ಮೀರದ ಚಿನಾಬ್‌ ಕಣಿವೆಯಲ್ಲಿ ವಿಶ್ವದ ಅತ್ಯಂತ ಎತ್ತರದ ರೈಲ್ವೆ ಸೇತುವೆ ನಿಗದಿತ ಅವಧಿಯೊಳಗೆ ಮುಕ್ತಾಯಗೊಂಡಿದೆ. ಆದರೆ, ಜಿಲ್ಲೆಯಲ್ಲಿ ದಶಕ ಕಳೆದರೂ ರಾಷ್ಟ್ರೀಯ ಹೆದ್ದಾರಿ ಮುಗಿದಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಸಿದ ಅವರು ಅಧಿಕಾರಿಗಳನ್ನು ತರಾಟೆಗೆ ಪಡೆದರು.

‘ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳದ, ನಿರ್ಲಕ್ಷ್ಯ ತೋರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ’ ಎಂದು ಸೂಚಿಸಿದರು.

ADVERTISEMENT

‘ಅಪಘಾತವಾಗುವ ಸ್ಥಳಗಳಲ್ಲಿನ ರಸ್ತೆ ತಿರುವನ್ನು ವಿಸ್ತರಿಸಬೇಕು. ಅಪಘಾತ ವಲಯಗಳಲ್ಲಿ ಸೂಚನಾ ಫಲಕ ಮತ್ತು ರಿಫ್ಲೆಕ್ಟರ್‌ಗಳನ್ನು ಅಳವಡಿಸಬೇಕು. ಹೆದ್ದಾರಿಗಳಲ್ಲಿ ಬೀಡಾಡಿ ದನಗಳಿಂದ ಅಪಘಾತಗಳಾಗುವುದನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ವಾರಸುದಾರರು ಇಲ್ಲದಿರುವ ಬೀಡಾಡಿ ದನಗಳನ್ನು ನಿಯಂತ್ರಿಸುವ ಬಗ್ಗೆ ಪಶುಪಾಲನಾ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸೂಕ್ತ ಕ್ರಮಕೈಗೊಳಬೇಕು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ, ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಕೆ.ಶಿವಕುಮಾರ್ ಪಾಲ್ಗೊಂಡಿದ್ದರು.

ಟವರ್ ಮಂಜೂರಾತಿಗೆ ಪ್ರಯತ್ನ

‘ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಾಣಗೊಂಡ 120 ಬಿಎಸ್‌ಎನ್‌ಎಲ್ ಮೊಬೈಲ್ ಟವರ್‌ಗಳು ಕಾರ್ಯಾರಂಭಿಸಿವೆ. ನಿರೀಕ್ಷೆಯಷ್ಟು ಪ್ರದೇಶ ವ್ಯಾಪ್ತಿಗೆ ನೆಟ್‌ವರ್ಕ್ ಸಿಗದ ದೂರುಗಳಿದ್ದು ಅವುಗಳನ್ನು ಸರಿಪಡಿಸುವ ಪ್ರಯತ್ನ ಸಾಗಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಇಲ್ಲಿನ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ದೂರವಾಣಿ ಸಲಹಾ ಸಮಿತಿ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ‘ಜಿಲ್ಲೆಯಲ್ಲಿ ಈ ಮೊದಲು ಸ್ಥಾಪನೆಯಾಗಿದ್ದ 250 ಟವರ್ 4ಜಿ ಮೇಲ್ದರ್ಜೆಗೆ ಏರಿದೆ‌. ಹೊಸದಾಗಿ 250 ಟವರ್ ಮಂಜೂರಾಗಿದ್ದು ಇನ್ನೂ 71 ನಿರ್ಮಾಣ ಹಂತದಲ್ಲಿದೆ. ಬೇಡಿಕೆ ಇರುವ ಕಡೆಗಳಲ್ಲಿ ಹೊಸ ಟವರ್ ಮಂಜೂರಾತಿಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಲಾಗುವುದು’ ಎಂದರು. ಬಿಎಸ್‌ಎನ್‌ಎಲ್ ಪಿಜಿಎಂ ನವೀನ್ ಕುಮಾರ್ ಗುಪ್ತ ಡಿಜಿಎಂ ಮಲ್ಲಿಕಾರ್ಜುನ ತಾಳಿಕೋಟಿ ದೂರವಾಣಿ ಸಲಹಾ ಸಮಿತಿ ಸದಸ್ಯರು ಇದ್ದರು.