ADVERTISEMENT

ದಿನಕ್ಕೊಂದು ಜಾತಿ ಸೃಷ್ಟಿಸುವ ಕಾಂಗ್ರೆಸ್‌: ವಿಶ್ವೇಶ್ವರ ಹೆಗಡೆ ಕಾಗೇರಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 4:06 IST
Last Updated 18 ಸೆಪ್ಟೆಂಬರ್ 2025, 4:06 IST
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಮುಂಡಗೋಡ ತಾಲ್ಲೂಕು ಆಸ್ಪತ್ರೆಯ ರೋಗಿಗಳಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ರೋಗಿಗಳಿಗೆ ಹಣ್ಣುಗಳನ್ನು ನೀಡಿದರು
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಮುಂಡಗೋಡ ತಾಲ್ಲೂಕು ಆಸ್ಪತ್ರೆಯ ರೋಗಿಗಳಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ರೋಗಿಗಳಿಗೆ ಹಣ್ಣುಗಳನ್ನು ನೀಡಿದರು   

ಮುಂಡಗೋಡ: ‘ಸಿದ್ಧರಾಮಯ್ಯ ನೇತೃತ್ವದ ಸರ್ಕಾರವು ಹೊಸ ಹೊಸ ಜಾತಿಗಳನ್ನು ಸೃಷ್ಟಿಸುತ್ತಿದೆ. ಬ್ರಾಹ್ಮಣ ಕ್ರಿಶ್ಚಿಯನ್‌, ಲಿಂಗಾಯತ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌ ಜಾತಿಗಳಿವೆಯಂತೆ. ಇನ್ನೂ ಯಾವ್ಯಾವ ಕ್ರಿಶ್ಚಿಯನ್‌ ಜಾತಿಗಳು ಹುಟ್ಟಿಕೊಳ್ಳುತ್ತವೆಯೋ ನೋಡಬೇಕಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವ್ಯಂಗ್ಯವಾಗಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಅಂಗವಾಗಿ ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಬಿಜೆಪಿ ಪಕ್ಷದಿಂದ ಬುಧವಾರ ನಡೆದ ರಕ್ತದಾನ ಶಿಬಿರ, ರೋಗಿಗಳಿಗೆ ಹಣ್ಣುಗಳ ವಿತರಣೆಯಲ್ಲಿ ಪಾಲ್ಗೊಂಡು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ದಿನಕ್ಕೊಂದು ವಿವಾದ ಸೃಷ್ಟಿಸುತ್ತಿದೆ. ವಿವಾದದ ರಾಜಕಾರಣದಿಂದ ಜನರ ಮತಗಳಿಸಬಹುದು ಎಂಬ ಭ್ರಮೆಯಲ್ಲಿರುವ ಕಾಂಗ್ರೆಸ್‌ ಸರ್ಕಾರದ ಬಗ್ಗೆ ಜನರು ಜಾಗೃತಗೊಂಡಿದ್ದು, ಸೂಕ್ತ ಉತ್ತರ ನೀಡಲಿದ್ದಾರೆ. ರೈತರ ಬೆಳೆ ಸಂಪೂರ್ಣವಾಗಿ ಹಾನಿಯಾದರೂ, ಇನ್ನೂತನಕ ಬೆಳೆ ಸಮೀಕ್ಷೆ ಮಾಡದಿರುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ’ ಎಂದರು.

ADVERTISEMENT

‘ರಾಜ್ಯ ಹೆದ್ದಾರಿಗಳಲ್ಲಿ ಬಿದ್ದಿರುವ ಗುಂಡಿಗಳನ್ನು ನೋಡಿದರೆ, ಪ್ರಯಾಣಿಸಲು ಹೆದರಿಕೆ ಆಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳ ದುರಸ್ತಿ ಕಾರ್ಯ ನಡೆಯುತ್ತಿದ್ದು, ಲೋಕೋಪಯೋಗಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ವ್ಯಾಪ್ತಿಯ ರಸ್ತೆ ಗುಂಡಿಗಳನ್ನು ಕೂಡಲೇ ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇತಿಮಿತಿಯಿಲ್ಲದಂತೆ ವರ್ತಿಸುತ್ತಿದ್ದು, ತಮ್ಮ ಹಿರಿತನವನ್ನು ಅರಿತು ಜನಪರ ಆಡಳಿತ ನೀಡಲಿ’ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಪಾಟೀಲ, ಕೆಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಲ್.ಟಿ.ಪಾಟೀಲ, ಅಶೋಕ ಚಲವಾದಿ, ತುಕಾರಾಮ ಇಂಗಳೆ, ನಾಗರಾಜ ಬೆಣ್ಣಿ, ವಿಠ್ಠಲ ಬಾಳಂಬೀಡ, ಭರತರಾಜ ಹದಳಗಿ, ರಮೇಶ ರಾವ್‌, ಗುರುರಾಜ ಕಾಮತ, ಬಾಬಣ್ಣ ವಾಲ್ಮೀಕಿ, ಕೋಟೇಶ ಗಣಪ್ಪನವರ, ಸಂತೋಷ ತಳವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನೀರಜ ಬಿ.ವಿ., ತಾಲ್ಲೂಕು ವೈದ್ಯಾಧಿಕಾರಿ ಡಾ.ನರೇಂದ್ರ ಪವಾರ, ಡಾ.ಸ್ವರೂಪರಾಣಿ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.