
ಕಾರವಾರ ತಾಲ್ಲೂಕಿನ ಕೈಗಾದಲ್ಲಿನ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕ ನಿರ್ಮಾಣಕ್ಕೆ ಕಾಂಕ್ರೀಟೀಕರಣ ಕಾಮಗಾರಿಗೆ ಅಣುಶಕ್ತಿ ನಿಗಮದ ಅಧ್ಯಕ್ಷ ಅಜಿತ್ ಕುಮಾರ ಮೊಹಂತಿ ಚಾಲನೆ ನೀಡಿದರು.
ಕಾರವಾರ: ತಾಲ್ಲೂಕಿನ ಕೈಗಾದಲ್ಲಿರುವ ಅಣು ಸ್ಥಾವರದ 5 ಮತ್ತು 6ನೇ ಘಟಕ ನಿರ್ಮಾಣಕ್ಕಾಗಿ ಕಾಂಕ್ರೀಟೀಕರಣ ಕಾಮಗಾರಿಗೆ ಅಣುಶಕ್ತಿ ಆಯೋಗದ ಅಧ್ಯಕ್ಷ ಅಜಿತ್ ಕುಮಾರ ಮೊಹಂತಿ ಭಾನುವಾರ ಚಾಲನೆ ನೀಡಿದರು.
‘ಅಣು ಸ್ಥಾವರದ ನಿರ್ಮಾಣದ ಅವಧಿಯನ್ನು ಕಾಂಕ್ರೀಟೀಕರಣ ಆರಂಭದಿಂದ ಲೆಕ್ಕ ಹಾಕಲಾಗುತ್ತದೆ. ಮುಂದಿನ 60 ತಿಂಗಳ ಒಳಗೆ 5ನೇ ಘಟಕವು ವಿದ್ಯುತ್ ಉತ್ಪಾದನೆ ಆರಂಭಿಸಲಿದೆ. ಹೊಸದಾಗಿ ನಿರ್ಮಾಣಗೊಳ್ಳಲಿರುವ ಎರಡು ಘಟಕಗಳು ವಿಶ್ವದ ಅತ್ಯಂತ ಸುರಕ್ಷಿತ ಅಣುಸ್ಥಾವರಗಳಾಗಲಿವೆ’ ಎಂದು ಅಜಿತ್ ಕುಮಾರ ಮೊಹಂತಿ ತಿಳಿಸಿದರು.
‘ತಲಾ 50 ಮೆಗಾ ವಾಟ್ ಸಾಮರ್ಥ್ಯದ ಸಣ್ಣ ಪ್ರಮಾಣದ ರಿಯಾಕ್ಟರ್‌ಗಳನ್ನು ಸ್ಥಾಪಿಸುವ ಬಗ್ಗೆ ಯೋಜಿಸಲಾಗುತ್ತಿದೆ. ಕೇವಲ 100ರಿಂದ 200 ಎಕರೆ ಜಾಗದಲ್ಲಿ ಇವುಗಳನ್ನು ಸ್ಥಾಪಿಸಲು ಅವಕಾಶವಿದೆ. ಬಾಬಾ ಆಟೊಮಿಕ್ ಎನರ್ಜಿ ಸೆಂಟರ್ ಈಗಾಗಲೆ ದೇಶದಲ್ಲಿ ಪ್ರಾಯೋಗಿಕ ಪರಿಶೀಲನೆ ನಡೆಸುತ್ತಿದ್ದು, ಸದ್ಯ ಇದು ಸಂಶೋಧನೆ ಹಂತದಲ್ಲಿದೆ’ ಎಂದರು.
‘ಜಾಗ ಸಿಕ್ಕರೆ ರಾಜ್ಯದಲ್ಲಿ ಸ್ಥಾವರ’
‘ರಾಜ್ಯದಲ್ಲಿ ಸೂಕ್ತ ಎನಿಸುವ ಸ್ಥಳ ಸಿಕ್ಕರೆ ಹೊಸ ಅಣು ಸ್ಥಾವರ ಸ್ಥಾಪನೆ ಮಾಡುವ ಬಗ್ಗೆ ಯೋಚಿಸಲಾಗುವುದು’ ಎಂದು ರಾಷ್ಟ್ರೀಯ ಅಣು ವಿದ್ಯುತ್ ನಿಗಮದ (ಎನ್‌ಪಿಸಿಐಎಲ್) ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಭುವನ ಚಂದ್ರ ಪಾಠಕ್ ಹೇಳಿದರು.
‘ವಿಶ್ವದಲ್ಲೇ ಸುರಕ್ಷಿತ ಕಡಿಮೆ ವೆಚ್ಚದ ರಿಯಾಕ್ಟರ್‌ಗಳು ಕೈಗಾದಲ್ಲಿ ನಿರ್ಮಾಣಗೊಳ್ಳುತ್ತಿವೆ. 2047ರ ವೇಳೆಗೆ 54 ಗಿಗಾ ವಾಟ್ ವಿದ್ಯುತ್ ಉತ್ಪಾದನೆಯ ಗುರಿಯನ್ನು ನಿಗಮವು ಹೊಂದಿದೆ. ದೇಶದಲ್ಲಿ ಸದ್ಯ 24 ಅಣು ಸ್ಥಾವರಗಳಿದ್ದು 8890 ಮೆಗಾ ವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.